ತಮಿಳುನಾಡು ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿ ಭತ್ಯೆ 2% ಹೆಚ್ಚಳಕ್ಕೆ ವಿಜಯ್ ಸರ್ಕಾರ ಆದೇಶ
ಚೆನ್ನೈ: ತಮಿಳುನಾಡು ಸರ್ಕಾರ ಸರ್ಕಾರಿ ನೌಕರರು ಹಾಗೂ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ತುಟ್ಟಿ ಭತ್ಯೆ (ಡಿಎ)ಯನ್ನು ಶೇಕಡಾ 2ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಈಡೇರಿಸಿದೆ.
ಈ ಪರಿಷ್ಕರಣೆಯೊಂದಿಗೆ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಈಗಿರುವ ಶೇಕಡಾ 58ರಿಂದ ಶೇಕಡಾ 60ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವು ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತುಟ್ಟಿ ಭತ್ಯೆ ಹೆಚ್ಚಳದಿಂದ ರಾಜ್ಯ ಸರ್ಕಾರದ ಖಜಾನೆಗೆ ವಾರ್ಷಿಕವಾಗಿ ಸುಮಾರು ₹1,230 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ ಸರ್ಕಾರಿ ನೌಕರರು, ಶಿಕ್ಷಕರು, ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ಹಣಕಾಸಿನ ಅಗತ್ಯವನ್ನು ಸರ್ಕಾರವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಜನಪರ ಕಲ್ಯಾಣ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರಿ ಅಧಿಕಾರಿಗಳು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಉಲ್ಲೇಖಿಸಿದೆ.
ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಪ್ರಮುಖ ಭರವಸೆಗಳನ್ನು ಶೀಘ್ರವಾಗಿ ಈಡೇರಿಸುವತ್ತ ಕ್ರಮ ಕೈಗೊಂಡಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಮೊದಲ ಚುನಾವಣಾ ಭರವಸೆಯನ್ನು ಈಡೇರಿಸಿದ್ದರು.
ಇದರ ನಂತರ ದೇವಸ್ಥಾನಗಳು, ಪೂಜಾ ಮಂದಿರಗಳು, ಆಸ್ಪತ್ರೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಜೊತೆಗೆ ಮಹಿಳೆಯರ ಸುರಕ್ಷತೆಗಾಗಿ ‘ಸಿಂಗ ಪೆಣ್’ ಎಂಬ ವಿಶೇಷ ಸುರಕ್ಷತಾ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಸೂಚಿಸಿದ್ದರು.
ಈಗ ತುಟ್ಟಿ ಭತ್ಯೆ ಹೆಚ್ಚಳದ ಮೂಲಕ ಮತ್ತೊಂದು ಪ್ರಮುಖ ಭರವಸೆಯನ್ನು ಈಡೇರಿಸಿರುವ ವಿಜಯ್ ಸರ್ಕಾರ, ಚುನಾವಣಾ ಘೋಷಣೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವತ್ತ ದಾಪುಗಾಲು ಇಟ್ಟಿದೆ.



