ಕರಾವಳಿ ಜಿಲ್ಲೆಯನ್ನು ಈಗ ಮಾದಕ ಲೋಕದ ಕರಾಳ ನೆರಳು ಆವರಿಸಿದೆ. ಕೈಯಲ್ಲಿ ಪುಸ್ತಕ ಹಿಡಿದು ಕಾಲೇಜಿಗೆ ಹೋಗಬೇಕಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬಳು, ಈಗ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಮೇತ ಪೊಲೀಸರ ಅತಿಥಿಯಾಗಿದ್ದಾಳೆ. ಚೆನ್ನೈನಿಂದ ಮಂಗಳೂರಿಗೆ ಅತೀ ದುಬಾರಿ ‘ಹೈಡ್ರೋ ವೀಡ್’ ಸಾಗಿಸುತ್ತಿದ್ದ ಬಿ.ಸಿ.ಎ (BCA) ವಿದ್ಯಾರ್ಥಿನಿಯನ್ನು ಮೂಲ್ಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ನಡೆದಿದ್ದೇನು?:
ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಈ ಯುವತಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಣಂಬೂರು ಎಸಿಪಿ ಮತ್ತು ಮೂಲ್ಕಿ ಇನ್ಸ್‌ಪೆಕ್ಟರ್ ತಂಡ ಜಂಟಿಯಾಗಿ ದಾಳಿ ನಡೆಸಿದಾಗ ಅಸಲಿ ಆಟ ಬಯಲಾಗಿದೆ.
ಬ್ಯಾಗ್‌ನಲ್ಲಿತ್ತು 35 ಲಕ್ಷದ ಮಾಲು
ಪೊಲೀಸರು ಸುಹಾನಳ ಬ್ಯಾಗ್ ತಪಾಸಣೆ ನಡೆಸಿದಾಗ ಅಲ್ಲಿ ಬಟ್ಟೆಗಳ ಬದಲು ಪ್ಯಾಕೆಟ್ ಪ್ಯಾಕೆಟ್ ಡ್ರಗ್ಸ್ ಪತ್ತೆಯಾಗಿದೆ. ಸುಮಾರು 1 ಕೆಜಿ 42 ಗ್ರಾಂ ತೂಕದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ಬೆಲೆ ಬಾಳುವ ‘ಹೈಡ್ರೋ ವೀಡ್’ ಎಂಬ ಹೈ-ಫೈ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸುಲಭವಾಗಿ ಹಣ ಮಾಡಬೇಕು, ಲಕ್ಸುರಿ ಲೈಫ್ ಲೀಡ್ ಮಾಡಬೇಕು ಅನ್ನೋ ಆಸೆಗೆ ಬಿದ್ದು ಈ ಯುವತಿ ಮಾದಕ ದ್ರವ್ಯದ ಜಾಲಕ್ಕೆ ಬಿದ್ದಿದ್ದಾಳೆ ಎಂದು ಹೇಳಲಾಗಿದೆ.
ಹಳೇ ಪ್ರಕರಣ :
ಬಂಧಿತ ವಿದ್ಯಾರ್ಥಿನಿಯ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿದುಬಂದಿದೆ. ಈ ಸುಹಾನ ಕೇವಲ 21 ವರ್ಷದವಳಾಗಿದ್ದರೂ, ಡ್ರಗ್ಸ್ ಲೋಕದಲ್ಲಿ ಈಕೆ ಹಳೇ ಕಿಲಾಡಿ. ಈ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲೂ ಡ್ರಗ್ಸ್ ಸಾಗಾಟ ಮಾಡುವಾಗ ಈಕೆ ಸಿಕ್ಕಿಬಿದ್ದಿದ್ದಳು. ಪದೇ ಪದೇ ಜೈಲಿಗೆ ಹೋದರೂ ಬುದ್ಧಿ ಕಲಿಯದ ಈಕೆ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾಳೆ.
ಚೆನ್ನೈ ಟು ಮಂಗಳೂರು ಕನೆಕ್ಷನ್:
ಪ್ರಾಥಮಿಕ ತನಿಖೆಯ ಪ್ರಕಾರ, ಈಕೆ ಈ ಹೈಡ್ರೋ ವೀಡ್ ಅನ್ನು ತಮಿಳುನಾಡಿನ ಚೆನ್ನೈನಿಂದ ತರಿಸಿಕೊಳ್ಳುತ್ತಿದ್ದಳು. ರೈಲು ಅಥವಾ ಬಸ್ ಮೂಲಕ ಯಾರಿಗೂ ಅನುಮಾನ ಬಾರದಂತೆ ಸಾಗಿಸಿ, ಮಂಗಳೂರು ಹಾಗೂ ಕರಾವಳಿ ಭಾಗದ ಕಾಲೇಜು ವಿದ್ಯಾರ್ಥಿಗಳು ಮತ್ತು ಶ್ರೀಮಂತ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದಳು. ಈಕೆಯ ಹಿಂದೆ ಯಾವುದೋ ದೊಡ್ಡ ಅಂತರಾಜ್ಯ ಮಾಫಿಯಾ ಕೆಲಸ ಮಾಡುತ್ತಿರುವ ಸಂಶಯವಿದ್ದು, ಪೊಲೀಸರು ಆ ‘ಕಿಂಗ್‌ಪಿನ್’ಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಈ ಘಟನೆ ಈಗ ಕರಾವಳಿಯ ಪೋಷಕರಲ್ಲಿ ನಡುಕ ಹುಟ್ಟಿಸಿದೆ. ತಮ್ಮ ಮಕ್ಕಳು ಕಾಲೇಜಿನಲ್ಲಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಹದ್ದಿನ ಕಣ್ಣಿಡಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯ ಆರೋಪಿತೆಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಸುಹಾನ ಈಗ ಕಂಬಿ ಎಣಿಸುತ್ತಿದ್ದಾಳೆ.



