No menu items!
29.7 C
Munich
Monday, July 13, 2026

ನಿರೀಕ್ಷಣಾ ಜಾಮೀನು ರದ್ದಾದ ಬಳಿಕ ವಚನಾನಂದ ಶ್ರೀಗೆ ಕೊಂಚ ರಿಲೀಫ್: ಜಾಮೀನು ಮಂಜೂರು

Must read

ನಿರೀಕ್ಷಣಾ ಜಾಮೀನು ರದ್ದಾದ ಬಳಿಕ ವಚನಾನಂದ ಶ್ರೀಗೆ ಕೊಂಚ ರಿಲೀಫ್: ಜಾಮೀನು ಮಂಜೂರು

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದಿಂದ ಷರತ್ತುಬದ್ಧ ನಿಯಮಿತ (ರೆಗ್ಯುಲರ್) ಜಾಮೀನು ಮಂಜೂರಾಗಿದೆ. ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಕೆಲವು ಷರತ್ತುಗಳನ್ನು ವಿಧಿಸಿ ಈ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ, ಮೂರು ವಾರಗಳೊಳಗೆ ಸಂಬಂಧಿತ ನ್ಯಾಯಾಲಯದಲ್ಲಿ ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಜೂನ್ 27ರಂದು ವಚನಾನಂದ ಸ್ವಾಮೀಜಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಎರಡೂ ಪಕ್ಷಗಳ ವಾದವನ್ನು ಆಲಿಸಿದ್ದ ನ್ಯಾಯಾಲಯ, ಜುಲೈ 6ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಅಂತಿಮ ಆದೇಶ ಪ್ರಕಟಿಸಿರುವ ನ್ಯಾಯಾಲಯ, ಸ್ವಾಮೀಜಿಗೆ ಷರತ್ತುಬದ್ಧ ನಿಯಮಿತ ಜಾಮೀನು ನೀಡಿದೆ.
ಪ್ರಕರಣದಲ್ಲಿ ಇದುವರೆಗೆ ಏಳು ಅಪ್ರಾಪ್ತ ಮಕ್ಕಳ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮಕ್ಕಳನ್ನು ಸ್ನಾನದ ಕೊಠಡಿ ಹಾಗೂ ಮಲಗುವ ಕೋಣೆಗೆ ಕರೆದು ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿವೆ.
ವಿಚಾರಣೆ ವೇಳೆ ಸಂತ್ರಸ್ತರ ಪರವಾಗಿ ವಕೀಲ ರಮೇಶ್ ಕಲಾಲ್ ವಾದ ಮಂಡಿಸಿದರೆ, ವಚನಾನಂದ ಸ್ವಾಮೀಜಿ ಪರವಾಗಿ ಹಿರಿಯ ವಕೀಲ ಎಸ್.ವಿ. ಪಾಟೀಲ್ ವಾದ ಮಂಡಿಸಿದರು.
ಇದಕ್ಕೂ ಮೊದಲು, ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದ್ದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣ ದಾಖಲಾಗುವ ಮೊದಲೇ ನಿರೀಕ್ಷಣಾ ಜಾಮೀನು ನೀಡಿರುವುದು ಕಾನೂನುಬದ್ಧ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಹೀಗಾಗಿ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದರೂ, ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಅಲ್ಲಿಯವರೆಗೆ ನಿರೀಕ್ಷಣಾ ಜಾಮೀನಿನ ರಕ್ಷಣೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ನಿಯಮಿತ ಜಾಮೀನು ಮಂಜೂರು ಮಾಡುವ ಮೂಲಕ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

- Advertisement -spot_img

More articles

- Advertisement -spot_img

Latest article