ತಮಿಳುನಾಡು ರಾಜಕೀಯದಲ್ಲಿ ಚಮತ್ಕಾರಕ್ಕೇನೂ ಕೊರತೆಯಿಲ್ಲ, ಆದರೆ ದಳಪತಿ ವಿಜಯ್ ಸೃಷ್ಟಿಸಿರೋ ಈ ಕ್ರಾಂತಿ ಇದೆಯಲ್ಲ, ಇದು ಅಕ್ಷರಶಃ ಸುನಾಮಿ. ಬರೀ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದ ಅಭಿಮಾನಿಗಳು, ಮತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ”ವಿಜಯದ ಅಭಿಷೇಕ” ಮಾಡಿದ್ದಾರೆ. ದಶಕಗಳಿಂದ ರಾಜ್ಯವನ್ನು ಹಂಚಿಕೊಂಡು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ದ್ರಾವಿಡ ಕೋಟೆಗಳ ನಡುವೆ, ”ಟಿವಿಕೆ” ಎಂಬ ಹೊಸ ಸೈನ್ಯವನ್ನ ಕಟ್ಟಿ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿರೋ ವಿಜಯ್ ಸಾಧನೆ ಅಸಾಮಾನ್ಯ. ತಮಿಳು ಮಣ್ಣಿನಲ್ಲಿ ಈಗ ಹೊಸ ಯುಗ ಶುರುವಾಗಿದೆ ಅನ್ನೋದಕ್ಕೆ ಈ ಬಾರಿಯ ಫಲಿತಾಂಶವೇ ಸಾಕ್ಷಿ.
ಸದ್ಯದ ಟ್ರೆಂಡ್ ಪ್ರಕಾರ, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) 110ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನುಗ್ಗುತ್ತಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಿರೋ ಮ್ಯಾಜಿಕ್ ನಂಬರ್ 118ಕ್ಕೆ ವಿಜಯ್ ಅತಿ ಹತ್ತಿರದಲ್ಲಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿ, ಯಾವುದೇ ಮೈತ್ರಿ ಇಲ್ಲದೆ ಈ ಮಟ್ಟದ ಸಾಧನೆ ಮಾಡಿರೋದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಇಡೀ ತಮಿಳುನಾಡು ಈಗ “ದಳಪತಿ.. ದಳಪತಿ..” ಎಂಬ ಘೋಷಣೆಯಿಂದ ಮೊಳಗುತ್ತಿದ್ದು, ವಿಜಯ್ ‘ಕಿಂಗ್ ಮೇಕರ್’ ಅಲ್ಲ, ತಾನೇ ‘ರಿಯಲ್ ಕಿಂಗ್’ ಅಂತ ಸಾಬೀತು ಮಾಡಿದ್ದಾರೆ.
ಆದರೆ, ವಿಜಯ್ ಅತಿ ದೊಡ್ಡ ಪಕ್ಷವಾಗಿ ಗೆದ್ದಿದ್ದರೂ ಕೂಡ, ಸರ್ಕಾರ ರಚಿಸಲು ಇನ್ನು 8 ರಿಂದ 10 ಸ್ಥಾನಗಳ ಕೊರತೆ ಎದುರಾಗುವ ಸಾಧ್ಯತೆಯಿದೆ. ಈ ಹಂತದಲ್ಲಿ ಮೈತ್ರಿ ಎಂಬ ದಾಳ ಅನಿವಾರ್ಯವಾಗಿ ಬಿಟ್ಟಿದೆ. ಈ ಅವಕಾಶವನ್ನೇ ಕಾಯುತ್ತಿದ್ದ ಕಾಂಗ್ರೆಸ್, ಈಗ ದಳಪತಿಯ ಜೊತೆ ಕೈ ಜೋಡಿಸಲು ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ತಮಿಳುನಾಡಿನ ಈ ಫಲಿತಾಂಶ ನಿಜಕ್ಕೂ ಸರ್ಪ್ರೈಸಿಂಗ್, ನಾವು ತಡಮಾಡದೆ ವಿಜಯ್ ಜೊತೆ ಮಾತುಕತೆ ನಡೆಸ್ತೀವಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಗಮನಿಸಬೇಕಾದ ವಿಷಯ ಅಂದ್ರೆ, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ರಿಸಲ್ಟ್ ಬಂದ ಮೇಲೆ ಗಾಳಿ ಈಗ ವಿಜಯ್ ಪರವಾಗಿ ಬೀಸುತ್ತಿರೋದನ್ನ ಕಂಡು, ಕಾಂಗ್ರೆಸ್ ಪಲ್ಟಿ ಹೊಡೆಯುವ ಸಾಧ್ಯತೆ ದಟ್ಟವಾಗಿದೆ. ವಿಜಯ್ ಅವರನ್ನು ನಾವು ಪ್ರಶಂಸಲೇಬೇಕು ಎಂಬ ಕೆಸಿ ವೇಣುಗೋಪಾಲ್ ಅವರ ಹೇಳಿಕೆಯ ಹಿಂದೆ, ಹಳೆಯ ದೋಸ್ತಿ ಡಿಎಂಕೆಗೆ ಕೈಕೊಟ್ಟು ಹೊಸದಾಗಿ ಗೆದ್ದಿರೋ ವಿಜಯ್ ಜೊತೆ ಸರ್ಕಾರ ರಚಿಸುವ ಪ್ಲಾನ್ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಇನ್ನೂ ಡಿಎಂಕೆ ನಮ್ಮ ರಾಜಕೀಯ ಶತ್ರು, ಬಿಜೆಪಿ ಸಿದ್ಧಾಂತದ ವೈರಿ ಅಂತ ವಿಜಯ್ ಅಖಾಡಕ್ಕೆ ಇಳಿಯುವಾಗಲೇ ಘರ್ಜಿಸಿದ್ದರು. ಅವರ ಕೊನೆಯ ಸಿನಿಮಾ ‘ಜನನಾಯಕನ್’ ರಿಲೀಸ್ ವೇಳೆ ಬಿಜೆಪಿ ನೀಡಿದ ಕಿರುಕುಳವನ್ನು ಅವರು ಇನ್ನೂ ಮರೆತಿಲ್ಲ. ಹಾಗಾಗಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಅತ್ತ ತನ್ನ ಬದ್ಧ ವೈರಿ ಡಿಎಂಕೆ ಜೊತೆಗೂ ವಿಜಯ್ ಹೋಗೋದು ಡೌಟೇ. ಅಂದಮೇಲೆ ಈಗ ವಿಜಯ್ ಮುಂದಿರೋದು ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಪಕ್ಷಗಳ ಬೆಂಬಲ ಮಾತ್ರ.
ವಿಜಯ್ ಅವರ ಈ ಗೆಲುವನ್ನ ಅಭಿಮಾನಿಗಳು ‘GOATED’ (Greatest Of All Time) ಪ್ರದರ್ಶನ ಅಂತಲೇ ಕರೆಯುತ್ತಿದ್ದಾರೆ. ಸಿನಿಮಾದಲ್ಲಿ ಎದುರಾಳಿಗಳನ್ನ ಹೊಡೆದುರುಳಿಸುವ ವಿಜಯ್, ರಾಜಕೀಯದ ರಿಯಲ್ ಅಖಾಡದಲ್ಲೂ ಸ್ಟ್ಯಾಲಿನ್ ಅಂತಹ ಘಟಾನುಘಟಿಗಳನ್ನ ಕಟ್ಟಿಹಾಕಿದ್ದಾರೆ. ಸ್ಟ್ಯಾಲಿನ್ ಸೋಲು ಮತ್ತು ವಿಜಯ್ ರೈಸಿಂಗ್, ತಮಿಳುನಾಡು ರಾಜಕೀಯದಲ್ಲಿ ಪೀಳಿಗೆಯ ಬದಲಾವಣೆ ಆಗಿದೆ ಅನ್ನೋದನ್ನ ಸಾರುತ್ತಿದೆ. ದ್ರಾವಿಡ ರಾಜಕಾರಣದ ಸಿದ್ಧಾಂತಗಳನ್ನೇ ವಿಜಯ್ ತಮ್ಮದೇ ಸ್ಟೈಲ್‌ನಲ್ಲಿ ರೀ-ರೈಟ್ ಮಾಡಿದ್ದಾರೆ.
ಸದ್ಯ ಮೈತ್ರಿ ಲೆಕ್ಕಾಚಾರಗಳು ಈಗ ರಂಗೇರುತ್ತಿವೆ. ವಿಜಯ್ ಕಾಂಗ್ರೆಸ್ ಬೆಂಬಲ ಪಡೀತಾರಾ ಅಥವಾ ಪಕ್ಷೇತರರನ್ನ ಸೆಳೆದುಕೊಂಡು ತಾವೊಬ್ಬರೇ ಸರ್ಕಾರ ರಚನೆ ಮಾಡಿ ಸಿಎಂ ಆಗ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ತಮಿಳುನಾಡು ಜನತೆ ಈಗ ಬದಲಾವಣೆ ಬಯಸಿದ್ದಾರೆ ಮತ್ತು ಆ ಬದಲಾವಣೆಗೆ ‘ದಳಪತಿ ವಿಜಯ್’ ಹೆಸರಿಟ್ಟಿದ್ದಾರೆ ಎನ್ನುವುದು ಮಾತ್ರ ಸತ್ಯ. ಇನ್ನು ಕೆಲವೇ ಗಂಟೆಗಳಲ್ಲಿ ಚೆನ್ನೈನ ಕೋಟೆಯ ಮೇಲೆ ವಿಜಯ್ ಧ್ವಜ ಹಾರುವುದು ಬಹುತೇಕ ಖಚಿತವಾಗಿದೆ.
ಒಟ್ನಲ್ಲಿ ಇದು ಕೇವಲ ಒಂದು ರಾಜಕೀಯ ಪಕ್ಷದ ಗೆಲುವಲ್ಲ, ಇದು ಒಬ್ಬ ನಟನ ಮೇಲಿಟ್ಟ ನಂಬಿಕೆಯೂ ಅಲ್ಲ. ಇದು ತಮಿಳು ಮಣ್ಣಿನ ಯುವಶಕ್ತಿಯ ಗೆಲುವು. ಸ್ಟ್ಯಾಲಿನ್ ಮತ್ತು ಪಳನಿಸ್ವಾಮಿ ಅವರಂತಹ ಹಳೆಯ ಹುಲಿಗಳ ಅಬ್ಬರಕ್ಕೆ ವಿಜಯ್ ಸದ್ದಿಲ್ಲದೆ ಬ್ರೇಕ್ ಹಾಕಿದ್ದಾರೆ. ಇನ್ನು ಮುಂದೆ ತಮಿಳುನಾಡಿನ ಪ್ರತಿ ನಿರ್ಧಾರದಲ್ಲೂ ವಿಜಯ್ ಅವರೇ ಸುಪ್ರೀಂ. ದಳಪತಿ ಯುಗ ಅಧಿಕೃತವಾಗಿ ಶುರುವಾಗಿದೆ



