ಬೆಲೆ ಏರಿಕೆಯಿಂದ ಜನ ಮೊದಲೇ ಹೈರಾಣಾಗಿದ್ದಾರೆ. ಮೊನ್ನೆ..ಮೊನ್ನೆ.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಾಡಿದ ಮಾತು ಕೇಳಿ ಕಂಗಾಲಾಗಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಎಲ್ಲಿ ಏರಿಕೆ ಆಗುತ್ತೆ ಎನ್ನುವ ಭಯ ಸದ್ಯ ಹಲವರಲ್ಲಿದೆ. ಚಿನ್ನ ಖರೀದಿ ಮಾಡಲು ಕೂಡ ಈಗ ಯೋಚನೆ ಮಾಡುವಂತಾಗಿದೆ. ಹೀಗಿರುವಾಗ ಜನಸಾಮಾನ್ಯರ ಮೇಲೆ ಮತ್ತೊಂದು ಬರೆ ಎಳೆಯಲಾಗಿದ್ದು, ದೇಶದ ಪ್ರಮುಖ ಡೈರಿ ಬ್ರಾಂಡ್ ಅಮುಲ್, ತನ್ನ ಹಾಲಿನ ಉತ್ಪನ್ನಗಳ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಈ ಪರಿಷ್ಕೃತ ಬೆಲೆಗಳು ನಿನ್ನೆಯಿಂದಲೇ (ಮೇ 14) ಜಾರಿಗೆ ಬರಲಿವೆ ಎಂದು ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF) ಘೋಷಿಸಿದೆ.
ಅಮುಲ್ ಸಂಸ್ಥೆಯ ಈ ದಿಢೀರ್ ನಿರ್ಧಾರದಿಂದಾಗಿ ನಾಳೆಯಿಂದ ನೀವು ಚಿಲ್ಲರೆ ಮಾರುಕಟ್ಟೆ ಅಥವಾ ಹತ್ತಿರದ ಅಂಗಡಿಗಳಲ್ಲಿ ಹಾಲು ಖರೀದಿಸುವಾಗ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಅಮುಲ್ ಗೋಲ್ಡ್, ಅಮುಲ್ ತಾಜಾ, ಹಸುವಿನ ಹಾಲು, ಎಮ್ಮೆ ಹಾಲು ಸೇರಿದಂತೆ ಅಮುಲ್‌ನ ಎಲ್ಲಾ ಪ್ರಮುಖ ಬ್ರಾಂಡ್‌ಗಳ ಬೆಲೆ ಏರಿಕೆಯಾಗಿದೆ. ಎಮ್ಮೆ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 4 ರೂ. ಹೆಚ್ಚಳವಾಗಿದ್ದು, ಹೊಸ ಬೆಲೆ 80 ರೂ. ಮುಟ್ಟಿದೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರೂ. ಏರಿಕೆಯಾಗಿದ್ದರೂ, ಇದು ತಿಂಗಳ ಕೊನೆಯಲ್ಲಿ ಕುಟುಂಬದ ಖರ್ಚನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಈ ಬೆಲೆ ಏರಿಕೆಗೆ ಅಮುಲ್ ನೀಡಿರುವ ಕಾರಣ ‘ನಿರ್ವಹಣಾ ವೆಚ್ಚ’. ಕಳೆದ ಒಂದು ವರ್ಷದಲ್ಲಿ ಜಾನುವಾರುಗಳ ಮೇವು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಇಂಧನ ದರದಲ್ಲಿ ಭಾರೀ ಏರಿಕೆಯಾಗಿದೆ. ಹಾಲಿನ ಉತ್ಪಾದನೆಯಿಂದ ಹಿಡಿದು ಗ್ರಾಹಕರಿಗೆ ತಲುಪಿಸುವವರೆಗಿನ ಸಾರಿಗೆ ವೆಚ್ಚವೂ ದುಬಾರಿಯಾಗಿದೆ. ಹೀಗಿದ್ದರೂ ಸಹ, ಈ ಬೆಲೆ ಏರಿಕೆಯು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆ ಇದೆ (ಕೇವಲ ಶೇ. 2.5 ರಿಂದ ಶೇ. 3.5 ರಷ್ಟು) ಎಂದು ಸಂಸ್ಥೆ ತನ್ನನ್ನು ಸಮರ್ಥಿಸಿಕೊಂಡಿದೆ.
ಆದರೆ, ಈ ಬೆಲೆ ಏರಿಕೆಯ ಹಿಂದೆ ರೈತರ ಹಿತಾಸಕ್ತಿಯೂ ಅಡಗಿದೆ ಎನ್ನುತ್ತದೆ ಅಮುಲ್. ಗ್ರಾಹಕರು ನೀಡುವ ಪ್ರತಿ ಒಂದು ರೂಪಾಯಿಯಲ್ಲಿ ಸುಮಾರು 80 ಪೈಸೆಯಷ್ಟು ಹಣ ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪುತ್ತದೆ. ಪ್ರಸ್ತುತ ರೈತರಿಗೆ ನೀಡುವ ಹಾಲಿನ ಸಂಗ್ರಹಣಾ ದರವನ್ನು ಪ್ರತಿ ಕೆಜಿ ಕೊಬ್ಬಿಗೆ (Fat) 30 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ರೈತರಿಗೆ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಸಿಗುವಂತೆ ಮಾಡುತ್ತದೆ ಮತ್ತು ಹೆಚ್ಚು ಹಾಲು ಉತ್ಪಾದಿಸಲು ಅವರಿಗೆ ಪ್ರೋತ್ಸಾಹ ನೀಡುತ್ತದೆ ಎಂಬುದು ಸಂಸ್ಥೆಯ ವಾದ.
ಕುತೂಹಲಕಾರಿ ಸಂಗತಿಯೆಂದರೆ, ಅಮುಲ್ ಸಂಸ್ಥೆ ಈಗ 1 ಲಕ್ಷ ಕೋಟಿ ರೂ. ವಹಿವಾಟಿನ ಬೃಹತ್ ಮೈಲಿಗಲ್ಲನ್ನು ದಾಟಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ವಹಿವಾಟು ಶೇ. 11 ರಷ್ಟು ಏರಿಕೆ ಕಂಡಿದೆ. ವಿಶ್ವದ ಅತಿದೊಡ್ಡ ರೈತ-ಮಾಲೀಕತ್ವದ ಸಹಕಾರ ಸಂಸ್ಥೆಯಾಗಿರುವ ಅಮುಲ್, ಇಂದು 50ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಪ್ರತಿದಿನ ಸುಮಾರು 31 ಮಿಲಿಯನ್ ಲೀಟರ್ ಹಾಲು ಸಂಗ್ರಹಿಸುವ ಈ ಸಂಸ್ಥೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇದೆ.
ಹೊಸ ದರಗಳ ಪಟ್ಟಿ ಹೀಗಿದೆ
- ಅಮುಲ್ ಸ್ಲಿಮ್ ಎನ್ (500ml) ಪ್ಯಾಕೆಟ್ 27 ರೂ.
ಅಮುಲ್ ತಾಜಾ 30 ರೂ.
ಹಸುವಿನ ಹಾಲು 31 ರೂ.
ಅಮುಲ್ ಗೋಲ್ಡ್ 36 ರೂ.
ಅಂದ್ಹಾಗೇ ಕಳೆದ ವರ್ಷ ಮೇ 1 ರಂದು ಬೆಲೆ ಹೆಚ್ಚಿಸಲಾಗಿತ್ತು. ಈಗ ಸರಿಯಾಗಿ ಒಂದು ವರ್ಷದ ನಂತರ ಮತ್ತೆ ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಒಟ್ಟಾರೆಯಾಗಿ, ಅಮುಲ್‌ನ ಈ ನಡೆ ಇತರ ಡೈರಿ ಬ್ರಾಂಡ್‌ಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಅಮುಲ್ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಇತರ ಖಾಸಗಿ ಮತ್ತು ಸಹಕಾರಿ ಡೈರಿಗಳೂ ಸಹ ದರ ಹೆಚ್ಚಳ ಮಾಡುವ ಹಾದಿ ಹಿಡಿಯಬಹುದು. ಬೆಲೆ ಏರಿಕೆಯ ಈ ಸರಪಳಿ ಜನಸಾಮಾನ್ಯರ ನೆಮ್ಮದಿಯನ್ನಂತೂ ಕೆಡಿಸಿರುವುದಂತೂ ಸುಳ್ಳಲ್ಲ.



