No menu items!
10.4 C
Munich
Thursday, May 14, 2026

ಕೋಲ್ಕತ್ತಾ ಕೋಟೆ ಕೆಡವಿದ ಪಾಟಿದಾರ್ ಹುಡುಗರು ; ಅಗ್ರಸ್ಥಾನಕ್ಕೇರಿದ ಆರ್​​ಸಿಬಿ-ಧೋನಿ,ರೋಹಿತ್ ಹಿಂದಿಕ್ಕಿ ನಂ 1 ಆದ ಕೊಹ್ಲಿ

Must read

ರಾಯ್‌ಪುರದ ಅಂಗಳದಲ್ಲಿ ಮಳೆಯ ಆರ್ಭಟದ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆರ್​​ಸಿಬಿ, ಅಂಕಪಟ್ಟಿಯಲ್ಲಿ ಮತ್ತೆ ಸಿಂಹಾಸನ ಏರಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಪ್ಲೇಆಫ್ ರೇಸ್‌ನಲ್ಲಿ ಮದಗಜನಂತೆ ಮುನ್ನುಗ್ಗುತ್ತಿದ್ದರೆ, ಇತ್ತ ಕೆಕೆಆರ್ ತಂಡ ಟೂರ್ನಿಯಿಂದ ಬಹುತೇಕ್ ಪಂದ್ಯಾವಳಿಯಿಂದ ಹೊರ ಬಿದ್ದಂತಾಗಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ನಾಯಕನ ನಿರ್ಧಾರಕ್ಕೆ ಆರಂಭದಲ್ಲಿ ವರುಣ ದೇವ ಅಡ್ಡಿಪಡಿಸಿದರೂ, ಆಟ ಶುರುವಾದ ಮೇಲೆ ಅಬ್ಬರಿಸಿದ್ದು ಮಾತ್ರ ಕೆಕೆಆರ್ ಬ್ಯಾಟರ್‌ಗಳು. ಫಿನ್ ಅಲೆನ್ ಮತ್ತು ಅಜಿಂಕ್ಯ ರಹಾನೆ ಅಲ್ಪ ರನ್‌ಗಳಿಗೆ ಪೆವಿಲಿಯನ್ ಸೇರಿದ್ದರೂ, ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ (71) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಇವರಿಗೆ ಸಾಥ್ ನೀಡಿದ ಕ್ಯಾಮರೂನ್ ಗ್ರೀನ್ ಮತ್ತು ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್ (49*) ಸ್ಫೋಟಕ ಆಟವಾಡಿ ಕೆಕೆಆರ್ ಮೊತ್ತವನ್ನು 192ಕ್ಕೆ ತಂದು ನಿಲ್ಲಿಸಿದರು.

ಆರ್​​ಸಿಬಿ ಬೌಲರ್‌ಗಳಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಕರಾರುವಾಕ್ ದಾಳಿ ನಡೆಸಿ ಗಮನ ಸೆಳೆದರು. ಆದರೆ, ಡೆತ್ ಓವರ್‌ಗಳಲ್ಲಿ ಕೆಕೆಆರ್ ಬ್ಯಾಟರ್‌ಗಳ ರನ್ ಸುನಾಮಿಯನ್ನು ತಡೆಯಲು ಆರ್​​ಸಿಬಿ ತುಸು ಹೆಚ್ಚೇ ಬೆವರು ಸುರಿಸಬೇಕಾಯ್ತು. ಅದರಲ್ಲೂ ರಿಂಕು ಸಿಂಗ್ ಬಾರಿಸಿದ ಸಿಕ್ಸರ್‌ಗಳು ರಾಯ್‌ಪುರ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಇಷ್ಟು ದೊಡ್ಡ ಗುರಿ ಬೆನ್ನತ್ತಬೇಕಾದ ಆರ್​​ಸಿಬಿಗೆ ಭರ್ಜರಿ ಆರಂಭದ ಅವಶ್ಯಕತೆ ಇತ್ತು.

ಗುರಿ ಬೆನ್ನತ್ತಿದ ಆರ್​​ಸಿಬಿ ಆರಂಭದಲ್ಲೇ ಜಾಕೋಬ್ ಬೆಥೆಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯ್ತು. ಆದರೆ ಆ ನಂತರ ಶುರುವಾಗಿದ್ದೇ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ‘ವಿರಾಟ ರೂಪ’. ಕಳೆದ ಎರಡು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿ ಟೀಕೆ ಎದುರಿಸಿದ್ದ ಕಿಂಗ್ ಕೊಹ್ಲಿ, ಟೀಕಾಕಾರರ ಬಾಯಿ ಮುಚ್ಚಿಸುವಂತಹ ಇನ್ನಿಂಗ್ಸ್ ಕಟ್ಟಿದರು. ದೇವದತ್ ಪಡಿಕ್ಕಲ್ (39) ಜೊತೆಗೂಡಿ ಶತಕದ ಜೊತೆಯಾಟವಾಡಿದ ಕೊಹ್ಲಿ, ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.

ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದ ಕೊಹ್ಲಿ, ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗರೆದರು. ಕೇವಲ 58 ಎಸೆತಗಳಲ್ಲಿ ತನ್ನ ಐಪಿಎಲ್ ವೃತ್ತಿಜೀವನದ 9ನೇ ಶತಕ ಪೂರೈಸಿದ ವಿರಾಟ್, ಟಿ20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್‌ಗಳ ಮೈಲಿಗಲ್ಲನ್ನು ದಾಟುವ ಮೂಲಕ ಇತಿಹಾಸ ನಿರ್ಮಿಸಿದರು. ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. 60 ಎಸೆತಗಳಲ್ಲಿ ಅಜೇಯ 105 ರನ್ ಸಿಡಿಸಿದ ಕೊಹ್ಲಿ ಆರ್​​ಸಿಬಿಗೆ ಸುಲಭವಾಗಿ ಜಯ ತಂದುಕೊಟ್ಟರು.

ಕೆಕೆಆರ್ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಕಬಳಿಸಿ ಆರ್​​ಸಿಬಿಗೆ ಸಣ್ಣ ನಡುಕ ಉಂಟುಮಾಡಿದರಾದರೂ, ವಿರಾಟ್ ಎಂಬ ಬಂಡೆಯ ಮುಂದೆ ಅವರ ಯಾವ ತಂತ್ರವೂ ಫಲಿಸಲಿಲ್ಲ. ಕೊನೆಯ ಕೆಲವು ಓವರ್‌ಗಳಲ್ಲಿ ರಜತ್ ಪಾಟಿದರ್ ಮತ್ತು ಟಿಮ್ ಡೇವಿಡ್ ವಿಕೆಟ್ ಕಳೆದುಕೊಂಡಾಗ ಪಂದ್ಯ ತಿರುವು ಪಡೆಯಬಹುದು ಎಂಬ ಆತಂಕವಿತ್ತು. ಆದರೆ ವಿರಾಟ್ ಕ್ರೀಸ್‌ನಲ್ಲಿ ಇರುವವರೆಗೂ ಆರ್​​ಸಿಬಿ ಫ್ಯಾನ್ಸ್ ಸೋಲನ್ನು ಒಪ್ಪಲು ತಯಾರಿರಲಿಲ್ಲ. ಕೊನೆಗೂ ತಂಡವನ್ನು ದಡ ಸೇರಿಸಿ ಗೆಲುವಿನ ನಗೆ ಬೀರಿದರು ಕೊಹ್ಲಿ.

ಈ ಗೆಲುವಿನೊಂದಿಗೆ ಈ ಆವೃತ್ತಿಯಲ್ಲಿ ಬೆಂಗಳೂರು ತಂಡ ಅಗ್ರಸ್ಥಾನಕ್ಕೇರಿದೆ. ಪ್ಲೇಆಫ್ ಹಂತಕ್ಕೆ ಸಜ್ಜಾಗಿದೆ. ಇತ್ತ ವಿರಾಟ್ ಕೊಹ್ಲಿಯ ಅಬ್ಬರದಿಂದ ”ಈ ಸಲ ಕಪ್ ನಮ್ದೇ” ಎನ್ನುವ ಘೋಷವಾಕ್ಯದ ತೂಕ ಇನ್ನೂ ಹೆಚ್ಚಾಗಿದೆ. ಒಟ್ಟಾರೆಯಾಗಿ, ರಾಯ್‌ಪುರದಲ್ಲಿ ನಡೆದ ಈ ಸಮರದಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ರಣಬೇಟೆಯಾಡಿದರು. ಕೆಕೆಆರ್ ಪಾಲಿಗೆ ಈ ಸೋಲು ಟೂರ್ನಿಯ ಅಂತ್ಯ ಹಾಡಿದರೆ, ಆರ್​​ಸಿಬಿ ಪಾಲಿಗೆ ಇದು ಮತ್ತೊಂದು ಸ್ಮರಣೀಯ ಗೆಲುವಾಗಿ ದಾಖಲಾಗಿದೆ. ವಿರಾಟ್ ಶತಕದ ಸಂಭ್ರಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಮಗದೊಮ್ಮೆ ಜೋರಾಗಿ ಕೇಳಿಬರುತ್ತಿದೆ.

- Advertisement -spot_img

More articles

- Advertisement -spot_img

Latest article