ಆಟ ಆಡೋ ವಯಸ್ಸಲ್ಲಿ ಉದ್ಯಮಿಯಾದ…!

Must read

ಅಯಾನ್ ಚಾವ್ಲಾ…13 ವರ್ಷದವರಿದ್ದಾಗ. ಭಾರತದ ಅತ್ಯಂತ ಕಿರಿಯ ಸಿಇಓ ಎಂದು ಹೆಸರು ಮಾಡಿದ್ರು. ಇನ್ನು ಅಯಾನ್ 8 ವರ್ಷದವರಿದ್ದಾಗ್ಲೇ ಸ್ವಂತಕ್ಕೊಂದು ಕಂಪ್ಯೂಟರ್ ಕೊಂಡುಕೊಂಡಿದ್ರು. ಹೊಸದೇನಾದ್ರೂ ಕಂಡಾಕ್ಷಣ ಅದರಲ್ಲಿ ಪ್ರಯೋಗ ಮಾಡುವ ಹವ್ಯಾಸ ಅವರಿಗಿತ್ತು. ವಿಡಿಯೋ ಗೇಮ್ಸ್ ಆಡೋದ್ರಿಂದ ಹಿಡಿದು ವಿಡಿಯೋ ಹಾಗೂ ಸಿನಿಮಾ ಎಡಿಟ್ ಮಾಡೋದ್ರಲ್ಲಿ ಕೂಡ ಅಯಾನ್ ಹಿಂದೆ ಬೀಳಲಿಲ್ಲ.
ತಂತ್ರಜ್ಞಾನದಲ್ಲಿ ನುರಿತಿದ್ದ ಅಯಾನ್ ಅದರಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸ್ತಾ ಇದ್ರು. ಶಿಕ್ಷಣ ಅನ್ನೋದು ಪ್ರತಿಯೊಬ್ಬರ ಜೀವದಲ್ಲೂ ಎಷ್ಟು ಮಹತ್ವ ಪಡೆದಿದದೆ ಅನ್ನೋದನ್ನು ಎಲ್ಲರೂ ಅವರಿಗೆ ತಿಳಿಸಿ ಹೇಳ್ತಾ ಇದ್ರು. ಆದ್ರೆ ಅಯಾನ್ 9ನೇ ತರಗತಿಗೆ ಶಾಲೆ ಬಿಟ್ಟುಬಿಟ್ರು. ಅದು ಅವರ ಬದುಕನ್ನೇ ಬದಲಾಯಿಸಿದ ನಿರ್ಧಾರ.
ಅಯಾನ್ 1997ರಲ್ಲಿ ದೆಹಲಿಯಲ್ಲಿ ಜನಿಸಿದ್ರು. ತಂದೆ ಕುಂಜಮ್ ಚಾವ್ಲಾ ಒಬ್ಬ ಫ್ಯಾಷನ್ ಡಿಸೈನರ್. ಅಕ್ಕ ಜ್ಯೋಲ್ಷಾ ಚಾವ್ಲಾ ಸಿವಿಲ್ ಎಂಜಿನಿಯರ್. 8 ವರ್ಷದವನಿದ್ದಾಗ್ಲೇ ಹೆತ್ತವರು ಅಯಾನ್ ಗೆ ಒಂದು ಕಂಪ್ಯೂಟರ್ ಕೊಡಿಸಿದ್ರು. ಅಡೋಬ್ ಸಾಫ್ಟ್ ವೇರ್ ನಂತಹ ಎಡಿಟಿಂಗ್ ಟೂಲ್ ಗಳನ್ನು ಬಳಸಿ ತಾನೇ ವಿಡಿಯೋ ಎಡಿಟಿಂಗ್ ಮಾಡಲು ಆರಂಭಿಸಿದ್ರು. ವೆಬ್ ಸೈಟ್, ಆ್ಯಪ್, ಸಾಫ್ಟ್ ವೇರ್ ಅಭಿವೃದ್ಧಿಪಡಿಸೋದನ್ನೆಲ್ಲ ಕಲಿತರು. ಸಲಹೆ, ಸೂಚನೆಗಳಿಗಾಗಿ ಅಯಾನ್ ಯಾರನ್ನೂ ಸಂಪರ್ಕಿಸಲಿಲ್ಲ. ಕಂಪ್ಯೂಟರ್ ಜೊತೆಗೆ ಸದಾ ಕೋಣೆಯಲ್ಲಿ ಬಂಧಿಯಾಗಿರ್ತಾ ಇದ್ದ ಅಯಾನ್, ಎಲ್ಲವನ್ನೂ ಸ್ವಂತವಾಗಿ ಕಲಿತರು. ಅನೇಕ ಪುಸ್ತಕಗಳನ್ನು ಓದಿದ್ರು. ಎಲ್ಲದಕ್ಕೂ ಇಂಟರ್ನೆಟ್ ಅನ್ನೇ ಅವಲಂಬಿಸಿದ್ದರು.

2011ರ ಮಾರ್ಚ್ 11ರಂದು ಅಯಾನ್ ‘ಏಷ್ಯನ್ ಫಾಕ್ಸ್ ಡೆವಲಪ್ಮೆಂಟ್ಸ್’ ಕಂಪನಿ ಸ್ಥಾಪಿಸಿದ್ರು. ಈ ಕಂಪನಿ ಐಟಿ, ವೆಬ್, ಮತ್ತು ಮಾರ್ಕೆಟಿಂಗ್ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುತ್ತದೆ. ಆಮೇಲೆ, ಈ ಕಂಪನಿ, ಕೇವಲ ಎರಡೇ ವರ್ಷಗಳಲ್ಲಿ ಗ್ರೂಪ್ ಫಾರ್ ಬಡ್ಡೀಸ್, ಗ್ಲೋಬಲ್ ವೆಬ್ ಮೌಂಟ್ ಹಾಗೂ ಮೈಂಡ್ ಇನ್ ಅಡ್ವರ್ಟೈಸಿಂಗ್ ಎಂಬ ಮೂರು ಕಂಪನಿಗಳನ್ನು ಆರಂಭಿಸಿದ್ರು. ಆರಂಭದಲ್ಲಿ ಅಯಾನ್ ತಾಯಿ ಕಂಪನಿಗಾಗಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು.
ಎಷ್ಟೋ ಬಾರಿ ಅಯಾನ್ ಅವರನ್ನು ಕಂಪನಿಯ ಸೇಲ್ಸ್ ಮನ್ ಗಳನ್ನೇ ಗಂಭೀರವಾಗಿ ಪರಿಗಣಿಸ್ತಾ ಇರಲಿಲ್ಲ. ಲೆಕ್ಕಕ್ಕೇ ತೆಗೆದುಕೊಳ್ತಿರಲಿಲ್ಲ. ತುಂಬಾನೇ ಚಿಕ್ಕವನಾಗಿದ್ದರಿಂದ ಮೊದಲ ವರ್ಷ ಕಷ್ಟವಾಯ್ತು, ಅನಂತರದಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಬೆಳೆಸಿಕೊಂಡ್ರು. ಈಗಲೂ ಸಮಯ ಸಿಕ್ಕಾಗಲೆಲ್ಲ ಅಯಾನ್ ಇಂಟರ್ನೆಟ್ ಸರ್ಫ್ ಮಾಡ್ತಾರೆ, ಐಟಿ ಹಾಗೂ ಮಾರ್ಕೆಟ್ ಬಗ್ಗೆ ತಿಳಿದುಕೊಳ್ತಾರೆ.
ಕೇವಲ 18 ವರ್ಷದವರಾಗುವಷ್ಟರಲ್ಲಿ ಅಯಾನ್ 1 ಲಕ್ಷ ಗ್ರಾಹಕರನ್ನು ಸಂಪಾದಿಸಿದ್ದರು. ಅಮೆರಿಕ, ಬ್ರಿಟನ್, ಟರ್ಕಿ ಮತ್ತು ಹಾಂಗ್ ಕಾಂಗ್ ನಲ್ಲೂ ಅಯಾನ್ ಕಂಪನಿಯ ಶಾಖೆಗಳಿವೆ. ಈಗಾಗ್ಲೇ 2 ಬಾರಿ ಅಯಾನ್ ಗೆ ‘ಯಂಗ್ ಎಂಟರ್ ಪ್ರೆನ್ಯೂರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿದೆ. ಪ್ರಧಾನಿ ಕಾರ್ಯಾಲಯದಿಂದ್ಲೂ ಅವರಿಗೆ ಮೆಚ್ಚುಗೆ ಪತ್ರ ಲಭಿಸಿದೆ.
ಅಪರೂಪದಲ್ಲೊಬ್ಬ ಅಪರೂಪದ ಉದ್ಯಮಿ ಅಯಾನ್. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಯಾಗಲು ಬಯಸುವ ಯುವಕರಿಗೆಲ್ಲ ಮಾದರಿ.

- Advertisement -spot_img

More articles

- Advertisement -spot_img

Latest article