ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಕಥೆ ಸಮಾಪ್ತಿಯಾಗಿದೆ. ಬಿಜೆಪಿ ಧ್ವಜ ಹಾರಿದೆ. ಆದರೆ.. ಮಮತಾ ಬ್ಯಾನರ್ಜಿ ಸೋಲು ಒಪ್ಪಿಕೊಳ್ಳಲು ತಯಾರಿಲ್ಲ. ಹತ್ತಾರು ಆರೋಪ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಖುದ್ದು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕರಿ ಕೋಟ್ ಹಾಕಿಕೊಂಡು ಹೈಕೋರ್ಟ್‌ಗೆ ಬಂದು ಹಲವರನ್ನು ಬೆಚ್ಚಿ ಬೀಳಿಸಿದ್ದಾರೆ.
ಹೌದು, ಇಷ್ಟು ದಿನ ರಾಜಕೀಯ ಅಖಾಡದಲ್ಲಿ ಅಬ್ಬರಿಸುತ್ತಿದ್ದ ದೀದಿ, ಗುರುವಾರ ಕಪ್ಪು ಕೋಟ್ ಧರಿಸಿ ಸೀದಾ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚುನಾವಣೋತ್ತರ ಹಿಂಸಾಚಾರ ಪ್ರಕರಣದಲ್ಲಿ ತಮ್ಮ ಪಕ್ಷದ ಪರವಾಗಿ ತಾವೇ ಖುದ್ದಾಗಿ ವಾದ ಮಂಡಿಸಲು ವಕೀಲೆಯಾಗಿ ಬಂದ ಮಮತಾ ಬ್ಯಾನರ್ಜಿ ಅವರ ನಡೆ ಈಗ ದೊಡ್ಡ ಸಂಚಲನ ಮೂಡಿಸಿದೆ.
ಇನ್ನು ಕೋಟ್ ಒಳಗೆ ಮಮತಾ ಬ್ಯಾನರ್ಜಿ ಅವರು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಲವಾದ ವಾದವನ್ನೇನೋ ಮಂಡಿಸಿದರು. ಬಂಗಾಳದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಹೈಕೋರ್ಟ್ ತಕ್ಷಣ ಹಸ್ತಕ್ಷೇಪ ಮಾಡಬೇಕು ಎಂದು ಗುಡುಗಿದರು. ಆದರೆ, ಅಸಲಿ ಸಿನಿಮಾ ಶುರುವಾಗಿದ್ದೇ ಅವರು ವಾದ ಮುಗಿಸಿ ಕೋರ್ಟ್ ಹಾಲ್‌ನಿಂದ ಹೊರಗೆ ಬಂದಾಗ. ಮಮತಾ ಅವರು ಹೊರಬರುತ್ತಿದ್ದಂತೆಯೇ ಅಲ್ಲಿದ್ದ ಕೆಲವು ವಿರೋಧಿ ವಕೀಲರ ಗುಂಪು ಕಳ್ಳಿ.. ಕಳ್ಳಿ.. ಎಂದು ಕೂಗುತ್ತಾ ಮುತ್ತಿಗೆ ಹಾಕಿದೆ.
ಈ ಹಠಾತ್ ಬೆಳವಣಿಗೆಯಿಂದ ಕೋರ್ಟ್ ಆವರಣ ಅಕ್ಷರಶಃ ರಣರಂಗದಂತಾಗಿತ್ತು. ಮಮತಾ ಬ್ಯಾನರ್ಜಿ ಅವರನ್ನು ಸುತ್ತುವರೆದ ಉದ್ರಿಕ್ತ ಗುಂಪು ಅಸಭ್ಯವಾಗಿ ವರ್ತಿಸಿದ್ದು, ಟಿಎಂಸಿ ವಕೀಲರು ದೀದಿಯವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹರಸಾಹಸ ಪಡಬೇಕಾಯಿತು. ಹೊರಗೆ ಬಂದ ನಂತರ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, ನನ್ನ ಮೇಲೆ ಗುಂಪು ಹಲ್ಲೆ ನಡೆಸಲು ಯತ್ನಿಸಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆ ಟಿಎಂಸಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿಯ ಪ್ರಭಾವಕ್ಕೆ ಒಳಗಾದ ವಕೀಲರು ಒಬ್ಬ ಮಾಜಿ ಮುಖ್ಯಮಂತ್ರಿಗೆ ನೀಡಿದ ಕಿರುಕುಳವಿದು. ನ್ಯಾಯಾಲಯ ಅಂದ್ರೆ ಯಾರನ್ನಾದರೂ ಸಾರ್ವಜನಿಕವಾಗಿ ಕಳ್ಳಿ ಅಂತ ಹಣೆಪಟ್ಟಿ ಕಟ್ಟೋ ಜಾಗನಾ? ಅಂತ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಕಿಡಿಕಾರಿದ್ದಾರೆ. ಮಮತಾ ಅವರು ಒಬ್ಬ ಅರ್ಜಿದಾರರಾಗಿ ನ್ಯಾಯ ಕೇಳಲು ಬಂದಾಗ ಈ ರೀತಿ ನಡೆಸಿಕೊಂಡಿದ್ದು ಪ್ರಜಾಪ್ರಭುತ್ವಕ್ಕೆ ಅವಮಾನ ಅಂತ ಟಿಎಂಸಿ ಟೀಮ್ ಗುಡುಗಿದೆ.
ಮತ್ತೊಂದೆಡೆ, ದೀದಿ ವಕೀಲರ ಕೋಟ್ ಧರಿಸಿದ್ದು ನೋಡಿ ಈಗ “ಬಾರ್ ಕೌನ್ಸಿಲ್ ಆಫ್ ಇಂಡಿಯಾ” (BCI) ಕೂಡ ಅಖಾಡಕ್ಕೆ ಇಳಿದಿದೆ. ಮಮತಾ ಬ್ಯಾನರ್ಜಿ ಅವರು ವಕೀಲರಾಗಿ ವಾದ ಮಂಡಿಸಲು ಅರ್ಹರೇ? ಅವರು ಎಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ? ಅವರ ಲಾ ಪ್ರಾಕ್ಟಿಸ್ ದಾಖಲೆಗಳು ಎಲ್ಲಿವೆ? ಅಂತ ಬಿಡಿಐ ಈಗ ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್‌ಗೆ ನೋಟಿಸ್ ನೀಡಿದೆ. ಎರಡು ದಿನದೊಳಗೆ ದೀದಿಯ ಎಲ್ಲಾ ಲೀಗಲ್ ದಾಖಲೆಗಳನ್ನು ಸಬ್‌ಮಿಟ್ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲೂ ತಾವೇ ವಾದ ಮಂಡಿಸಿದ್ದ ಮಮತಾ ಬ್ಯಾನರ್ಜಿ ಅವರ ನಡೆ ಈಗ ಕಾನೂನು ಸಂಕಷ್ಟಕ್ಕೆ ಸಿಲುಕುವ ಲಕ್ಷಣ ಕಾಣುತ್ತಿದೆ. ಅವರು ವಕೀಲೆಯಾಗಿ ನೋಂದಣಿಯಾಗಿದ್ದರೂ, ಸಕ್ರಿಯ ರಾಜಕೀಯಕ್ಕೆ ಹೋದಾಗ ಆ ಲೈಸೆನ್ಸ್ ಅಮಾನತು ಮಾಡಬೇಕಾಗುತ್ತೆ. ಹಾಗಾಗಿ, ಈಗ ಅವರು ವಕೀಲರ ಕೋಟ್ ಧರಿಸಿ ಬಂದಿದ್ದು ಸರಿಯಾ ಅಥವಾ ತಪ್ಪಾ ಅನ್ನೋ ಬಗ್ಗೆ ಬಿಡಿಐ ತನಿಖೆ ಶುರು ಮಾಡಿದೆ.
ಒಟ್ಟಾರೆಯಾಗಿ, ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಇವತ್ತು ಬರಿ ಕೇಸ್ ವಿಚಾರಣೆಯ ಜಾಗವಾಗಿರಲಿಲ್ಲ, ಅದು ರಾಜಕೀಯ ಜಿದ್ದಾಜಿದ್ದಿನ ಕಣವಾಗಿ ಬದಲಾಗಿತ್ತು. ದೀದಿಯ ಹೊಸ ಅವತಾರ, ಎದುರಾಳಿಗಳ ಘೋಷಣೆ ಮತ್ತು ಬಿಡಿಐ ನೋಟಿಸ್, ಈ ಮೂರೂ ಅಂಶಗಳು ಪಶ್ಚಿಮ ಬಂಗಾಳದ ರಾಜಕೀಯವನ್ನ ಮತ್ತಷ್ಟು ರಂಗೇರಿಸಿವೆ. ಮುಂದಿನ ದಿನಗಳಲ್ಲಿ ದೀದಿ “ವಕೀಲೆಯಾಗಿ” ಮುಂದುವರಿಯುತ್ತಾರಾ ಅಥವಾ ಬಾರ್ ಕೌನ್ಸಿಲ್ ಅವರಿಗೆ ಬ್ರೇಕ್ ಹಾಕುತ್ತಾ ಅನ್ನೋದು ಕುತೂಹಲ ಮೂಡಿಸಿದೆ.



