No menu items!
13.3 C
Munich
Thursday, April 30, 2026

ಧಾರವಾಡ ವಿದ್ಯಾರ್ಥಿ ಆತ್ಮ*ಹತ್ಯೆ ಪ್ರಕರಣ: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ಅಮಾನತು

Must read

ನಮ್ಮ ವ್ಯವಸ್ಥೆಯಲ್ಲಿ ಬಡವನ ಸಾವಿಗೆ ಬೆಲೆ ಇಲ್ಲ. ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಬಂದ ಕಹಿ ಸತ್ಯ ಇದು. ಅಧಿಕಾರ ಮತ್ತು ಹಣದ ದಾಹವನ್ನೊಂದಿರುವ ನಮ್ಮ ವ್ಯವಸ್ಥೆ ಇಲ್ಲಿಯವರೆಗೆ ಹಲವಾರು ಅಮಾಯಕರ ಜೀವ ಬಲಿ ಪಡೆದಿದೆ.

ಇನ್ನು ಸಾವಿನ ಸುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಾಯಕರಂತೂ, ಹೆಣದ ಮೇಲೆ ರಾಜಕೀಯ ಮಾಡುವುದನ್ನೇ ತಮ್ಮ ಸಾಧನೆ ಅಂದುಕೊಂಡಿದ್ದಾರೆ. ಸತ್ಯ ಸತ್ತು ಹೋಗಿ, ಕೇವಲ ಆರೋಪ-ಪ್ರತ್ಯಾರೋಪಗಳೇ ದೊಡ್ಡದಾದಾಗ ನ್ಯಾಯ ಅನ್ನೋದು ಮರೀಚಿಕೆಯಾಗುತ್ತದೆ. ಸದ್ಯ
ಇದೇ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿದ್ದು ಧಾರವಾಡದ ಪ್ರತಿಭಾವಂತ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ.

ಧಾರವಾಡದ ಕಿಟಲ್ ಕಾಲೇಜಿನ ಈ ಬಿಎಸ್‌ಸಿ ವಿದ್ಯಾರ್ಥಿಯ ಸಾವಿನ ಪ್ರಕರಣ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಕೇವಲ ಒಂದು ಸುಳ್ಳು ಆರೋಪ ಮತ್ತು ಕೆಲವೇ ಕೆಲವು ಸಾವಿರ ರೂಪಾಯಿಗಳ ಆಸೆ ಇವತ್ತು ಒಂದು ಜೀವವನ್ನೇ ಬಲಿ ಪಡೆದಿದೆ.

*ಏನಿದು ದಾರುಣ ಘಟನೆ?

ಗಾಂಜಾ ಸೇವನೆ ಮಾಡಿದ್ದಾನೆ ಅನ್ನೋ ಆರೋಪದ ಮೇಲೆ ಧಾರವಾಡದ ವಿದ್ಯಾಗಿರಿ ಪೊಲೀಸರು ಆದಿತ್ಯನನ್ನು ವಶಕ್ಕೆ ಪಡೆದಿದ್ದರು. ಆದರೆ ಮೆಡಿಕಲ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದಿದ್ದರೂ ಸಹ, ಪೊಲೀಸರು ಆತನನ್ನು ಬಿಡದೆ 2,000 ರೂಪಾಯಿ ಲಂಚಕ್ಕಾಗಿ ಪೀಡಿಸಿದ್ದಾರೆ ಅನ್ನೋದು ಈಗ ಕೇಳಿಬರುತ್ತಿರುವ ಗಂಭೀರ ಆರೋಪ.

ಇತ್ತ ತಾಯಿ ಹಣ ಕೊಡಲು ನಿರಾಕರಿಸಿದ ನೋವು, ಅತ್ತ ಪೊಲೀಸರ ಕಿರುಕುಳಕ್ಕೆ ಬೆದರಿದ ಆದಿತ್ಯ, ಮಂಗಳವಾರ ತನ್ನ ಬಾಡಿಗೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  • ಖಾಕಿ ಪಡೆಗೆ ಶಾಕ್- ಇನ್ಸ್‌ಪೆಕ್ಟರ್ ಸಸ್ಪೆಂಡ್ :

ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಧಾರವಾಡ ಪೊಲೀಸ್ ಇಲಾಖೆಯಲ್ಲಿ ಸಾಲು ಸಾಲು ಅಮಾನತು ಶಿಕ್ಷೆಗಳು ಶುರುವಾಗಿವೆ.
ಮೊನ್ನೆ (ಏಪ್ರಿಲ್ 29) ಹೆಡ್ ಕಾನ್ಸ್ಟೇಬಲ್ ಚಂದ್ರು ಸೇರಿದಂತೆ ಕಿರಣ್ ಹಾಗೂ ಸಯ್ಯದ್ ಎಂಬ ಮೂವರನ್ನು ಸಸ್ಪೆಂಡ್ ಮಾಡಲಾಗಿತ್ತು.

ಆದರೆ ಪ್ರತಿಭಟನೆ ಕಿಚ್ಚು ಆರುತ್ತಿಲ್ಲ ಎಂದು ತಿಳಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಇಂದು (ಏಪ್ರಿಲ್ 30) ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್ ನನ್ನು ಕೂಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

*ರಸ್ತೆಗಿಳಿದ ವಿದ್ಯಾರ್ಥಿ ಶಕ್ತಿ – ರಾಜಕೀಯ ಜಿದ್ದಾಜಿದ್ದಿ –

ಆದಿತ್ಯನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ನೂರಾರು ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಇತ್ತ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗೃಹ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಅತ್ತ ಅಪರಾಧ ಮಾಡಿದವರೂ ಯಾರೇ ಇರಲಿ ಅವರ ರಕ್ಷಣೆ ಮಾಡಲ್ಲ ಎಂದು ಕಮಿಷನರ್ ಭರವಸೆ ನೀಡಿದ್ದಾರೆ.

ಒಂದು ಕಡೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ, ಇನ್ನೊಂದು ಕಡೆ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು. ಆದಿತ್ಯನ ಸಾವು ಬರಿ ಆತ್ಮಹತ್ಯೆಯಲ್ಲ, ಇದು ವ್ಯವಸ್ಥೆ ಎಸಗಿದ ಕೊಲೆ ಎಂಬ ಮಾತುಗಳು ಈಗ ಧಾರವಾಡದ ಗಲ್ಲಿ ಗಲ್ಲಿಯಲ್ಲೂ ಕೇಳಿಬರುತ್ತಿವೆ.

- Advertisement -spot_img

More articles

- Advertisement -spot_img

Latest article