ಜನಸಾಮಾನ್ಯರಲ್ಲಿ ಮಾತ್ರ ಅಲ್ಲ ಚಿತ್ರರಂಗದವರು ತಮಿಳುನಾಡು ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಒನ್ ಆಂಡ್ ಓನ್ಲಿ ವಿಜಯ್. ಬೆಳ್ಳಿತೆರೆಯಲ್ಲಿ ಮೇಲೆ ಮಿಂಚುವ, ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುವ ವಿಜಯ್ ಈ ಬಾರಿ ದ್ರಾವಿಡ ಪಕ್ಷದ ಭದ್ರಕೋಟೆಯನ್ನು ಛಿದ್ರ ಮಾಡುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ.
ಖುದ್ದು ವಿಜಯ್ ಇದೇ ವಿಶ್ವಾಸದಲ್ಲಿ ಬಿರುಸಿನ ಪ್ರಚಾರವನ್ನು ಮಾಡಿದ್ದಾರೆ. ರಣ ಬಿಸಿಲಿನಲ್ಲಿ ಅಲೆದು ಜನರ ನಡುವೆ ಬೆರೆತಿದ್ದಾರೆ. ಹರಸಿ ಹಾರೈಸಿ ಎಂಬ ಮನವಿಯನ್ನೂ ಕೂಡ ಜನರಲ್ಲಿ ಮಾಡಿಕೊಂಡಿದ್ದಾರೆ. ಆದರೆ.. ಅಂದುಕೊಂಡಷ್ಟು ಸುಲಭ ಅಲ್ಲ ತಮಿಳುನಾಡಿನ ರಾಜಕಾರಣ. ಇದಕ್ಕೆ ಕೈಗನ್ನಡಿ ಎಂಬಂತೆ ಎಕ್ಸಿಟ್ ಪೋಲ್ ಲೆಕ್ಕಾಚಾರದಲ್ಲಿ ವಿಜಯ್‌ಗೆ ಹಿನ್ನೆಡೆಯಾಗಿದೆ. ಮತ್ತೊಮ್ಮೆ ಸರ್ಕಾರ ಡಿಎಂಕೆ ಪಾಲಾಗಲಿದೆ. ಗದ್ದುಗೆ ಸ್ಟ್ಯಾಲಿನ್‌ಗೆ ಒಲಿಯಲಿದೆ.
ಹಾಗಂಥ ವಿಜಯ್ ಅಭಿಮಾನಿಗಳು ತೀವೃ ನಿರಾಸೆಗೊಳ್ಳುವಂತೆಯೂ ಇಲ್ಲ. ಯಾಕೆಂದರೆ ಎಕ್ಸಿಟ್ ಪೋಲ್‌ನ ಈ ಅಂಕಿ ಅಂಶ ಹಿಂದೆ ಸುಳ್ಳಾಗಿದೆ. 2004 .. 2009 .. 2014ರ ಲೋಕಸಭಾ ಚುನಾವಣೆಯಲ್ಲಿ ಈ ಎಕ್ಸಿಟ್ ಪೋಲ್‌ನಲ್ಲಿ ಬಂದ ಫಲಿತಾಂಶವೇ ಬೇರೆ. ಮತ ಎಣಿಕೆಯ ನಂತರ ಹೊರ ಬಿದ್ದ ಫಲಿತಾಂಶವೇ ಬೇರೆ.
ಇನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನೋಟು ಅಮಾನ್ಯೀಕರಣದಿಂದ ಬಿಜೆಪಿಗೆ ಹಿನ್ನೆಡೆಯಾಗುತ್ತೆ ಎಂಬ ಭವಿಷ್ಯವನ್ನು ಈ ಎಕ್ಸಿಟ್ ಪೋಲ್‌ನಲ್ಲಿ ನುಡಿಯಲಾಗಿತ್ತು. ಆದರೆ ಬಿಜೆಪಿ ನಿರೀಕ್ಷೆ ಮೀರಿ 325 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಹಿನ್ನೆಲೆ ಯಾರಿಗೆ ಗೊತ್ತು ಈ ಬಾರಿ ಕೂಡ ಈ ಎಕ್ಸಿಟ್ ಪೋಲ್‌ನ ಲೆಕ್ಕಾಚಾರ ತಪ್ಪಬಹುದು. ಕಿಂಗ್ ಆಗದಿದ್ದರೂ ವಿಜಯ್ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಬಹುದು. ನಿಖರ ಫಲಿತಾಂಶವೇನು..? ವಿಜಯ್ ರಾಜಕೀಯ ಭವಿಷ್ಯ ಏನಾಗಲಿದೆ..? ಎನ್ನುವುದು ಮೇ 4ಕ್ಕೆ ಗೊತ್ತಾಗಲಿದೆಯಾದರೂ ಸದ್ಯ ಎಕ್ಸಿಟ್ ಪೋಲ್ ನ ಅಂಕಿ ಅಂಶಗಳ ವಿವರ ಈ ಕಳೆಗಿನಂತೆ ಇದೆ.
ಎಕ್ಸಿಟ್ ಪೋಲ್ ಪ್ರಕಾರ ಸ್ಟ್ಯಾಲಿನ್‌ಗೆ ಅಧಿಕಾರದ ಚುಕ್ಕಾಣಿ
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ 118. ಈ ಮ್ಯಾಜಿಕ್ ನಂಬರ್ ಅನ್ನು ಡಿಎಂಕೆ ಮೈತ್ರಿಕೂಟ ಆರಾಮವಾಗಿ ದಾಟಲಿದೆ ಅಂತ ಎಕ್ಸಿಟ್ ಪೋಲ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಪೀಪಲ್ಸ್ ಪಲ್ಸ್ ಸಮೀಕ್ಷೆಯ ಪ್ರಕಾರ, ಡಿಎಂಕೆ 125 ರಿಂದ 145 ಸ್ಥಾನಗಳನ್ನು ಗೆದ್ದು ಬೀಗಲಿದೆ. ಇನ್ನು ವಿರೋಧ ಪಕ್ಷ ಎಐಎಡಿಎಂಕೆ 65 ರಿಂದ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ. ಅಂದ್ರೆ, ತಮಿಳು ಜನತೆ ಮತ್ತೊಮ್ಮೆ ದ್ರಾವಿಡ ಸಿದ್ಧಾಂತದ ಆಡಳಿತಕ್ಕೇ ಜೈ ಎಂದಿದ್ದಾರೆ.
ಇನ್ನು ಎಲ್ಲರೂ ಕಾತರದಿಂದ ಕಾಯ್ತಿದ್ದ ‘ಟಿವಿಕೆ’ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಧಿಪತಿ ವಿಜಯ್ ಅವರ ಪರಿಸ್ಥಿತಿ ಏನಾಗಲಿದೆ? ಸಮೀಕ್ಷೆಗಳ ಪ್ರಕಾರ, ವಿಜಯ್ ಅವರ ರಾಜಕೀಯ ಎಂಟ್ರಿ ಅಂದುಕೊಂಡಷ್ಟು ‘ಬ್ಲಾಕ್‌ಬಸ್ಟರ್’ ಆಗಿಲ್ಲ. ಅಬ್ಬಬ್ಬಾ ಅಂದ್ರೆ 18 ರಿಂದ 24 ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗುತ್ತಿದೆ. ಸಿನಿಮಾ ರ್ಯಾಲಿಗಳಲ್ಲಿ ಸೇರುತ್ತಿದ್ದ ಲಕ್ಷಾಂತರ ಜನಸ್ತೋಮ ಕೇವಲ ವಿಜಯ್ ಅವರ ಸ್ಟಾರ್‌ಡಮ್ ನೋಡೋಕೆ ಬಂದಿತ್ತೇ ಹೊರತು, ಮತ ಹಾಕೋಕೆ ಅಲ್ಲವೇ ಅನ್ನೋ ಕಹಿ ಸತ್ಯವನ್ನು ಈ ಎಕ್ಸಿಟ್ ಪೋಲ್ ಲೆಕ್ಕ ಹೇಳುತ್ತಿದೆ.
ವಿಜಯ್ ಅವರ ರಾಜಕೀಯ ಇಮೇಜ್‌ಗೆ ಅವರ ವೈಯಕ್ತಿಕ ಜೀವನದ ಏರುಪೇರುಗಳು ಹೊಡೆತ ನೀಡಿದ್ವಾ ಅನ್ನೋ ಚರ್ಚೆಯೂ ಕೂಡ ನಡೀತಿದೆ. ಪತ್ನಿ ಸಂಗೀತ ಅವರ ಅಸಮಾಧಾನ ಮತ್ತು ವಿಜಯ್‌ರಿಂದ ದೂರ ಉಳಿದಿರೋದು ಚುನಾವಣಾ ಹೊತ್ತಲ್ಲಿ ವಿಜಯ್‌ಗೆ ದೊಡ್ಡ ಮೈನಸ್ ಪಾಯಿಂಟ್ ಆಯ್ತು ಅನ್ನೋದು ರಾಜಕೀಯ ವಿಶ್ಲೇಷಕರ ಮಾತು.
ಮತ ಹಂಚಿಕೆಯ ವಿಚಾರಕ್ಕೆ ಬಂದ್ರೆ, ಡಿಎಂಕೆ ಮೈತ್ರಿಕೂಟ ಶೇ. 38.4 ರಷ್ಟು ಮತಗಳನ್ನು ತನ್ನದಾಗಿಸಿಕೊಂಡ್ರೆ, ಎಐಎಡಿಎಂಕೆ ಶೇ. 31.5 ರಷ್ಟು ಮತ ಪಡೆಯಲಿದೆ. ಹೊಸದಾಗಿ ಕಣಕ್ಕಿಳಿದಿರೋ ವಿಜಯ್ ಅವರ ಟಿವಿಕೆ ಪಕ್ಷ ಶೇ. 23.6 ರಷ್ಟು ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಚುನಾವಣೆಯಲ್ಲೇ ಈ ಮಟ್ಟದ ವೋಟ್ ಶೇರ್ ತಗೊಂಡಿರೋದು ವಿಜಯ್ ಅವರ ಪಾಲಿಗೆ ಒಂದು ಸಣ್ಣ ಸಮಾಧಾನಕರ ವಿಷಯವಾದ್ರೂ, ಅಧಿಕಾರ ಹಿಡಿಯೋ ಕನಸು ಮಾತ್ರ ಸದ್ಯಕ್ಕೆ ಮರೀಚಿಕೆಯಾಗಿದೆ.
ವಿಜಯ್ ಹೊರತುಪಡಿಸಿದರೆ ಸೀಮನ್ ಅವರ ಎನ್‌ಟಿಕೆ ಪಕ್ಷ ಅಥವಾ ಪಕ್ಷೇತರರು ಕೇವಲ 2 ರಿಂದ 6 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬಹುದು. ಟುಡೇಸ್ ಚಾಣಕ್ಯ ಸಮೀಕ್ಷೆಯಂತೂ ಡಿಎಂಕೆಗೆ ಬರೋಬ್ಬರಿ 145 ರಿಂದ 160 ಸೀಟುಗಳನ್ನು ಕೊಟ್ಟಿದೆ. ಅಂದ್ರೆ ವಿರೋಧ ಪಕ್ಷಗಳಿಗೆ ಅಲ್ಲಿ ಯಾವುದೇ ಚಾನ್ಸ್ ಇಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ವಿಜಯ್ ಕಿಂಗ್ ಆಗ್ತಾರೆ ಅಥವಾ ಕಿಂಗ್ ಮೇಕರ್ ಆಗ್ತಾರೆ ಅಂತ ಅಂದುಕೊಂಡಿದ್ದವರಿಗೆ ಈ ಅಂಕಿ-ಅಂಶಗಳು ದೊಡ್ಡ ಆಘಾತವನ್ನೇ ನೀಡಿವೆ.
ತಮಿಳುನಾಡು ವಿಧಾನಸಭಾ ಚುನಾವಣೆ 2026 – ಎಕ್ಸಿಟ್ ಪೋಲ್ಸ್
| ಸಮೀಕ್ಷೆ ನಡೆಸಿದ ಸಂಸ್ಥೆಗಳು | ಡಿಎಂಕೆ+ | ಎಐಎಡಿಎಂಕೆ+ | ಟಿವಿಕೆ (ವಿಜಯ್) | ಎನ್‌ಟಿಕೆ | ಇತರೆ | |
| ಪೀಪಲ್ಸ್ ಪಲ್ಸ್ | 125-145 | 65-80 | 18-24 | 0 | 2-6 | |
| ನ್ಯೂಸ್18 | 125-145 | 65-80 | 13-18 | 5-8 | 2-6 | |
| ಟುಡೇಸ್ ಚಾಣಕ್ಯ | 145-160 | 50-65 | 13-18 | 5-8 | 0 | |
| ಮ್ಯಾಟ್ರೈಸ್ | 122-132 | 87-100 | 12-16 | 1-6 | 0 | |
| ಪಿ-ಮಾರ್ಕ್ | 125-145 | 65-85 | 16-26 | 1-6 | 0 | |
| ಪೋಲ್ ಆಫ್ ಪೋಲ್ಸ್ | 135-149 | 66-79 | 12-17 | 3-7 | 2-6 |
ಒಟ್ಟಿನಲ್ಲಿ, ಈ ಎಕ್ಸಿಟ್ ಪೋಲ್ ಲೆಕ್ಕಾಚಾರಗಳು ನಿಜವಾದ್ರೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಸೂರ್ಯನ ಉದಯವಾಗಲಿದೆ. ವಿಜಯ್ ಕಥೆ ಕೇವಲ ಸಿನಿಮಾಗೆ ಸೀಮಿತವಾಗುತ್ತಾ ಅಥವಾ ಸೋತರೂ ರಾಜಕಾರಣದಲ್ಲಿ ವಿಜಯ್ ಮುಂದುವರೆಯುತ್ತಾರಾ..? ಎಕ್ಸಿಟ್ ಪೋಲ್ ಲೆಕ್ಕಾಚಾರ ಬುಡಮೇಲಾಗಿಸಿ ಕಿಂಗ್ ಅಥವಾ ಕಿಂಗ್ ಮೇಕರ್ ಆಗ್ತಾರಾ..? ಅನ್ನೋ ಪ್ರಶ್ನೆಗೆ ಮೇ 4ರಂದು ಅಧಿಕೃತ ಉತ್ತರ ಸಿಗಲಿದೆ. ಸದ್ಯಕ್ಕಂತೂ ರಾಜಕೀಯದ ಈ ಕದನದಲ್ಲಿ ಸ್ಟಾಲಿನ್ ಕೈ ಮೇಲಾದಂತೆ ಕಾಣ್ತಿದೆ.



