No menu items!
7.8 C
Munich
Thursday, April 30, 2026

ಐಪಿಎಲ್‌ನಲ್ಲಿ ಬೆಂಚ್ ಕಾದು ಸುಸ್ತಾದ ತೆಂಡೂಲ್ಕರ್ ಮಗ ; 5 ಲಕ್ಷಕ್ಕೆ ಮತ್ತೆ ಹರಾಜಿಗೆ ಬಂದ ಅರ್ಜುನ್

Must read

ತಂದೆ ತಾಯಿಯ ಜಾಡು ಹಿಡಿದು ಆಯಾ ಕ್ಷೇತ್ರಕ್ಕೆ ಅವರ ಮಕ್ಕಳು ಸುಲಭವಾಗಿ ಬರಬಹುದು. ಆದರೆ.. ಗೆಲ್ಲುವುದು.. ಸೋಲುವುದು.. ಎಲ್ಲವೂ ಆ ನಂತರ ನಿರ್ಧಾರ ಮಾಡುವುದು ಅವರ ಪ್ರತಿಭೆ ಮಾತ್ರ. ಆದರೆ ಇವರ ಪಾಲಿಗೆ ಈ ಪ್ರಯಾಣ ಸುಲಭದ್ದಾಗಿರಲ್ಲ. ಒಂದು ಕಡೆ ತಂದೆ-ತಾಯಿಯ ಹೆಸರಿನ ಭಾರ, ಮತ್ತೊಂದು ಕಡೆ ಸ್ವಜನಪಕ್ಷಪಾತದ ಕೂಸು ಎಂಬ ಟೀಕೆ, ಅಪ್ಪ-ಅಮ್ಮನ ಹೆಸರು ಉಳಿಸಬೇಕೆಂಬ ಒತ್ತಡ.

ಇದೆಲ್ಲದರಿಂದ ಹಲವರು ಇಲ್ಲಿ ಹೈರಾಣಾಗಿದ್ದಾರೆ. ಪ್ರತಿಭೆ ಇದ್ದರೂ ಕೂಡ ಈ ನಿರೀಕ್ಷೆಯ ಭಾರ ಮತ್ತು ಸಮಾಜ ಮಾಡುವ ಲೇವಡಿಯನ್ನು ಸಹಿಸಲಾಗದೇ ಓಡಿ ಹೋಗಿದ್ದಾರೆ. ಸದ್ಯ ಇಂತಹದ್ದೇ ಒಂದು ಪರೀಕ್ಷೆಯನ್ನು ಅರ್ಜುನ್ ತೆಂಡೂಲ್ಕರ್ ಎದುರಿಸುತ್ತಿದ್ದಾರೆ.

ಇವರು ಮೈದಾನಕ್ಕಿಳಿದಾಗೆಲ್ಲಾ ಜನರ ಕಣ್ಣು ಇವರ ಸ್ಕೋರ್ ಕಾರ್ಡ್ ಮೇಲೆ ಇರಲ್ಲ. ಪ್ರತಿಭೆಯ ಬಗ್ಗೆ ಕೂಡ ಮಾತನಾಡುವುದಿಲ್ಲ. ಬದಲಿಗೆ ತೆಂಡೂಲ್ಕರ್ ಮಗ ಇವತ್ತು ಅದೇನು ಮಾಡ್ತಾನೆ ನೋಡೋಣ ಎಂಬ ಮಾತುಗಳನ್ನಾಡುತ್ತಾರೆ. ಈ ಮಾತುಗಳಿಗೆ ಉತ್ತರ ಕೊಡಲು ಅರ್ಜುನ್ ಶತಾಯು ಗತಾಯು ಪ್ರಯತ್ನವನ್ನೇನೋ ಮಾಡ್ತಿದ್ದಾರೆ.

ಆದರೆ ತೆಂಡೂಲ್ಕರ್ ಮಗ ಆದರೂ ಕೂಡ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಲು ಇವರಿಗೆ ಅವಕಾಶ ಸಿಕ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 30 ಲಕ್ಷಕ್ಕೆ ಈ ಬಾರಿ ಲಕ್ನೋ ತಂಡದ ಪಾಲಾದ ಅರ್ಜುನ್ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ. ಆಡ್ತಾರಾ ಅನ್ನುವುದು ಕೂಡ ಖಾತ್ರಿ ಇಲ್ಲ. ಖುದ್ದು ಅರ್ಜುನ್‌ಗೆ ಕೂಡ ಆಡುವ ಭರವಸೆ ಇದ್ದಂತೆ ಇಲ್ಲ. ಹೀಗಾಗಿಯೇ ತವರು ನೆಲದಲ್ಲಿ ಆದರೂ ಅಬ್ಬರಿಸುವ ಉದ್ದೇಶದಿಂದ ಅರ್ಜುನ್ ತೆಂಡೂಲ್ಕರ್ 5 ಲಕ್ಷಕ್ಕೆ ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಹೌದು, ಅಸಲಿಗೆ ಜೂನ್ 1ರಿಂದ ಮುಂಬೈ ಟಿ20 ಲೀಗ್ ಸೀಸನ್ 4 ಶುರುವಾಗಲಿದೆ. ಈ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮೇ 2 ರಂದು ನಡೆಯಲಿದೆ. ಈ ಹರಾಜಿಗೆ ಅರ್ಜುನ್ ತಮ್ಮ ಹೆಸರನ್ನು ಮೂಲ ಬೆಲೆ 5 ಲಕ್ಷಕ್ಕೆ ನೊಂದಣಿ ಮಾಡಿಸಿದ್ದಾರೆ.

ಇನ್ನು ಅರ್ಜುನ್ ಮುಂಬೈಕರ್ ಆದರೂ ಅವರು ದೇಶಿಯ ಟೂರ್ನಾಮೆಂಟ್‌ನಲ್ಲಿ ಆಡುತ್ತಿರುವುದು ಗೋವಾ ಪರ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ನಿಯಮಗಳ ಪ್ರಕಾರ, ಹೊರಗಿನ ತಂಡಕ್ಕೆ ಹೋದ ಆಟಗಾರ ವಾಪಸ್ ಬರಬೇಕಾದ್ರೆ ಒಂದು ವರ್ಷ ಕಾಯ್ಬೇಕು ಅನ್ನೋ ರೂಲ್ಸ್ ಇದೆ. ಆದರೆ ಅರ್ಜುನ್ ವಿಷಯದಲ್ಲಿ ರಿಯಾಯತಿಯನ್ನು ನೀಡಲಾಗಿದೆ.

ಎಂಸಿಎ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಅವರು ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಏಕೆಂದರೆ ಅವರು ಯಾವುದೇ ಗೋವಾ ಟಿ20 ಲೀಗ್‌ನಲ್ಲಿ ಭಾಗವಹಿಸಿಲ್ಲ. ಹೀಗಾಗಿ ಬಿಸಿಸಿಐ ನಿಯಮಗಳ ಪ್ರಕಾರ, ಅರ್ಜುನ್ ಮತ್ತು ಸಿದ್ಧಾಂತ್ ಅಧಾತ್ರವ್ ಇಬ್ಬರೂ ಟಿ20 ಮುಂಬೈ ಲೀಗ್‌ನಲ್ಲಿ ಆಡಬಹುದು ಎಂದಿದ್ದಾರೆ.

ಅಂದ್ಹಾಗೇ ಈ ಟೂರ್ನಾಮೆಂಟ್‌ನಲ್ಲಿ ನಾರ್ತ್ ಮುಂಬೈ ಪ್ಯಾಂಥರ್ಸ್, ಆಕಾಶ್ ಟೈಗರ್ಸ್, ಬಾಂದ್ರಾ ಬ್ಲಾಸ್ಟರ್ಸ್, ಸೋಬೊ ಸುಪರ್ ಸೋನಿಕ್ಸ್, ನಮೋ ಬ್ಯಾಂಡ್ರಾ ಬ್ಲಾಸ್ಟರ್ಸ್, ಟ್ರಯಂಫ್ ನೈಟ್ಸ್ , ಶಿವಾಜಿ ಪಾರ್ಕ್ ಲಯನ್ಸ್ , ಈಗಲ್ ಥಾಣೆ ಸ್ಟ್ರೈಕರ್ಸ್, ಹೀಗೆ 8 ತಂಡಗಳು ಭಾಗವಹಿಸಲಿವೆ. ವಿಶೇಷ ಅಂದರೆ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಅವರಂತಹ ಸ್ಟಾರ್‌ಗಳು ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರನ್ನೆಲ್ಲಾ ಆಯಾ ತಂಡಗಳು ಈಗಾಗಲೇ ಉಳಿಸಿಕೊಂಡಿವೆ.

ಯಶಸ್ವಿ ಜೈಸ್ವಾಲ್ ಕೂಡ ಲೀಗ್‌ನ ಭಾಗವಾಗಬೇಕಿತ್ತು, ಆದರೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯ ಇರೋದ್ರಿಂದ ಅವರು ಮೈದಾನಕ್ಕಿಳಿಯೋದು ಡೌಟ್ ಎನ್ನಲಾಗ್ತಿದೆ. ಇಂತಹ ದೊಡ್ಡ ಸ್ಟಾರ್‌ಗಳ ನಡುವೆ ಅರ್ಜುನ್ ಹೇಗೆ ಮಿಂಚ್ತಾರೆ ಅನ್ನೋ ಕುತೂಹಲ ಸದ್ಯ ಮುಂಬೈನ ಕ್ರೀಡಾಭಿಮಾನಿಗಳಲ್ಲಿದೆ.

ಒಟ್ನಲ್ಲಿ ಒಟ್ಟಿನಲ್ಲಿ, ಜೂನ್ 1 ರಿಂದ ಮುಂಬೈ ಟಿ20 ಲೀಗ್ ಸೀಸನ್ 4 ಶುರುವಾಗಲಿದೆ. ಅರ್ಜುನ್ ತೆಂಡೂಲ್ಕರ್ ಈ ಬಾರಿ ಹರಾಜಿನಲ್ಲಿ ಯಾವ ತಂಡದ ಪಾಲಾಗ್ತಾರೆ ಮತ್ತು ಮೈದಾನದಲ್ಲಿ ಅಪ್ಪನಂತೆ ಮ್ಯಾಜಿಕ್ ಮಾಡ್ತಾರಾ ಅನ್ನೋದಕ್ಕೆ ಉತ್ತರ ಸಿಗಲಿದೆ. ಟೀಕೆಗಳು ಮತ್ತು ನೆಪೋಟಿಸಂ ಮಾತುಗಳ ನಡುವೆಯೇ ಅರ್ಜುನ್ ತಮ್ಮ ಆಟದ ಮೂಲಕವೇ ಎಲ್ಲರಿಗೂ ಉತ್ತರ ನೀಡೋಕೆ ಸಜ್ಜಾಗಿದ್ದಾರೆ.

- Advertisement -spot_img

More articles

- Advertisement -spot_img

Latest article