ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬದುಕಿನ ಅತ್ಯಂತ ಗಟ್ಟಿ ಆಧಾರಸ್ತಂಭ, ಇಡೀ ಜೆಡಿಎಸ್ ಕುಟುಂಬದ ಪ್ರೀತಿಯ ಯಜಮಾನಿ ಚೆನ್ನಮ್ಮ ದೇವೇಗೌಡರು ಶನಿವಾರ (ಜುಲೈ 18) ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರ ನಿಧನದಿಂದ ಜೆಡಿಎಸ್ ಕುಟುಂಬದಲ್ಲಿ ಮೌನ ಮಡುಗಟ್ಟಿದೆ. ಬರೋಬ್ಬರಿ 72 ವರ್ಷಗಳ ಕಾಲ ದೇವೇಗೌಡರ ರಾಜಕೀಯ ಏಳುಬೀಳುಗಳಿಗೆ ಬಂಡೆಯಂತೆ ಹೆಗಲು ಕೊಟ್ಟು, ಇಡೀ ದೊಡ್ಡ ರಾಜಕೀಯ ಸಾಮ್ರಾಜ್ಯವನ್ನು ಪ್ರೀತಿಯಿಂದ ಮುನ್ನಡೆಸಿದ್ದ ಈ ಆದರ್ಶ ಗೃಹಿಣಿಯ ನಿರ್ಗಮನದೊಂದಿಗೆ ಕರ್ನಾಟಕ ರಾಜಕಾರಣದ ಒಂದು ಸುದೀರ್ಘ, ಐತಿಹಾಸಿಕ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.
ಅರಮನೆಯ ವೈಭೋಗದಲ್ಲೂ ಅಪ್ಪಟ ಹಳ್ಳಿ ಸೊಗಡು: ಡೆಲ್ಲಿಯಲ್ಲೂ ಮುದ್ದೆ ಮುರಿದಿದ್ದ ಸರಳ ಜೀವಿ!
1954 ರಲ್ಲಿ ದೇವೇಗೌಡರ ಕೈಹಿಡಿದ ಚೆನ್ನಮ್ಮ, ಅಂದಿನಿಂದ ಇಂದಿನವರೆಗೂ ಗೌಡರ ನೆರಳಿನಂತೆ ಬದುಕಿದವರು. ದೇವೇಗೌಡರು ಹಳ್ಳಿಯಿಂದ ದೆಹಲಿಗೆ ಹೋಗಿ ಪ್ರಧಾನಿ ಕುರ್ಚಿಯಲ್ಲಿ ಕುಂತರೂ ಕೂಡ, ಚೆನ್ನಮ್ಮ ಮಾತ್ರ ಎಂದೂ ತಮ್ಮ ಸರಳತೆ, ಸಹಜತೆಯನ್ನು ಬಿಟ್ಟುಕೊಡಲಿಲ್ಲ. ಎಲ್ಲೇ ಹೋದರೂ ಗೌಡರ ಜೊತೆಯಲ್ಲೇ ಇರುತ್ತಿದ್ದ ಅವರು, ದೆಹಲಿಯ ಲೂಟಿಯನ್ಸ್ ವಲಯದ ಪ್ರಧಾನಿ ನಿವಾಸದಲ್ಲೂ ಗೌಡರಿಗೆ ಪ್ರೀತಿಯಿಂದ ರಾಗಿಮುದ್ದೆ ಮಾಡಿಕೊಡುತ್ತಾ ಅಪ್ಪಟ ಹಳ್ಳಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಅಷ್ಟೇ ಅಲ್ಲ, ಒಂದು ದಿನವೂ ಗೌಡರನ್ನು ಬಿಟ್ಟು ಊಟ ಮಾಡಿದವರಲ್ಲ ಚೆನ್ನಮ್ಮ. ದೇಶದ ಪ್ರಧಾನಮಂತ್ರಿಯ ಮಡದಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ತಮಗೆ ಸಿಕ್ಕ ಎಲ್ಲರನ್ನೂ ಅಕ್ಕರೆಯಿಂದ ಸತ್ಕರಿಸುತ್ತಿದ್ದ ಆ ಮುಖ ಇನ್ನು ನೆನಪು ಮಾತ್ರ.

ವೈರಲ್ ಆಯಿತು ಅಪರೂಪದ ಚಿತ್ರಗಳು: ಆ ಕರಾಳ ದಿನಕ್ಕೂ ಮುನ್ನ ಚೆನ್ನಮ್ಮ ಹೇಗಿದ್ದರು?
ಚೆನ್ನಮ್ಮ ಅವರ ನಿಧನದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಅವರ ಹಳೆಯ ಅಪರೂಪದ ಬ್ಲ್ಯಾಕ್ ಆಂಡ್ ವೈಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ದೇವರ ಮನೆಯಲ್ಲಿ ಕೈಮುಗಿದು ನಿಂತಿರುವ ಚಿತ್ರ, ಗೌಡರ ಜೊತೆ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ಷಣಗಳು ಹಾಗೂ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಸೇರಿದಂತೆ ಇಡೀ ನಾಲ್ವರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳ ಸೈನ್ಯದೊಂದಿಗೆ ಹಸನ್ಮುಖಿಯಾಗಿ ನಗುತ್ತಿರುವ ಫೋಟೋಗಳು ಜನರಲ್ಲಿ ಅತಿಯಾದ ಕುತೂಹಲ ಮೂಡಿಸುತ್ತಿವೆ. ಯಾಕಂದರೆ, ಈ ಫೋಟೋಗಳಲ್ಲಿದ್ದ ಚೆನ್ನಮ್ಮ ಅವರ ಮುಖದ ಚಹರೆಯೇ ಬೇರೆ, ಇತ್ತೀಚಿನ ವರ್ಷಗಳಲ್ಲಿ ನಾವೆಲ್ಲಾ ನೋಡಿದ ಅವರ ಮುಖವೇ ಬೇರೆ. ಅದಕ್ಕೆ ಕಾರಣ ಭರ್ತಿ 25 ವರ್ಷಗಳ ಹಿಂದೆ ನಡೆದ ಆ ಒಂದು ಕರಾಳ ಘಟನೆ!
ಇಡೀ ರಾಜ್ಯವನ್ನೇ ನಡುಗಿಸಿದ್ದ ಆ ಒಂದು ಶಿವರಾತ್ರಿ: ಸೊಸೆ-ಅತ್ತೆಯ ಮೇಲಾದ ಆ ಭೀಕರ ದಾಳಿ!
ಅದು 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ಕರಾಳ ರಾತ್ರಿ. ಇಡೀ ಕುಟುಂಬ ಹಾಸನದ ಹರದನಹಳ್ಳಿಯ ಶಿವನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮುಗಿಸಿ ರಾತ್ರಿ 8ರ ಸುಮಾರಿಗೆ ವಾಪಸ್ ಬರುತ್ತಿತ್ತು. ಆ ಸಮಯದಲ್ಲಿ ಕೌಟುಂಬಿಕ ಕಲಹ ಹಾಗೂ ರಾಜಕೀಯ ಪ್ರೇರಣೆಯ ಹಿನ್ನೆಲೆಯಲ್ಲಿ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ ಅವರ ಮೇಲೆ ಏಕಾಏಕಿ ಭೀಕರ ಆಸಿಡ್ ದಾಳಿ ನಡೆಯಿತು. ಈ ಘೋರ ಕೃತ್ಯ ಇಡೀ ದೇಶವನ್ನೇ ನಡುಗಿಸಿತ್ತು. ದಾಳಿಯ ತೀವ್ರತೆಗೆ ಚೆನ್ನಮ್ಮ ಅವರ ಮುಖ ಸುಟ್ಟು ಹೋಗಿತ್ತು. ಸುಮಾರು ಎರಡು ತಿಂಗಳ ಕಾಲ ಅವರು ಪ್ರಜ್ಞೆಯೇ ಇಲ್ಲದೆ ಆಸ್ಪತ್ರೆಯ ಬೆಡ್ ಮೇಲೆ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು.
ರೇವಣ್ಣ ಮೇಲಿದ್ದ ಸಂಚು ಚೆನ್ನಮ್ಮನ ಮೇಲೆ: ಗೌಡರು ಬಿಚ್ಚಿಟ್ಟಿದ್ದ ಆಘಾತಕಾರಿ ರಾಜಕೀಯ ರಹಸ್ಯ!
ಈ ಆಸಿಡ್ ದಾಳಿಯ ಹಿಂದಿದ್ದ ಅಸಲಿ ಸತ್ಯವನ್ನು ಸ್ವತಃ ಹೆಚ್.ಡಿ. ದೇವೇಗೌಡರು ಜೀ ಕನ್ನಡದ ”ವೀಕೆಂಡ್ ವಿತ್ ರಮೇಶ್” ಸಾಧಕರ ಸೀಟಿನಲ್ಲಿ ಕುಳಿತಾಗ ಬಹಿರಂಗಪಡಿಸಿದ್ದರು. ಆ ದಿನವನ್ನು ನೆನೆದು ಕಣ್ಣೀರಾಗಿದ್ದರು. ಈ ದಾಳಿಯ ಪ್ರಮುಖ ಆರೋಪಿ ಬೇರೆ ಯಾರೂ ಆಗಿರದೆ, ದೇವೇಗೌಡರ ಸ್ವಂತ ತಮ್ಮ ಬಸವೇಗೌಡರ ಮಗ ಲೋಕೇಶ್ ಆಗಿದ್ದನು. ಆರಂಭದಲ್ಲಿ ಇದು ಕೇವಲ ಕೌಟುಂಬಿಕ ಕಲಹ ಎನ್ನಲಾಯಿತಾದರೂ, ಇದರ ಹಿಂದೆ ರಾಜಕೀಯ ಮುಖಂಡರ ದೊಡ್ಡ ಸಂಚೇ ಇತ್ತು. ವಾಸ್ತವವಾಗಿ ಆ ದುಷ್ಟರ ಟಾರ್ಗೆಟ್ ಇದ್ದದ್ದು ಹೆಚ್.ಡಿ. ರೇವಣ್ಣ. ಆದರೆ ಅಂದು ರೇವಣ್ಣ ಬರದೇ ಇದ್ದಿದ್ದರಿಂದ ಚೆನ್ನಮ್ಮ ಹಾಗೂ ಭವಾನಿ ರೇವಣ್ಣ ಈ ಭೀಕರ ಕ್ರೌರ್ಯಕ್ಕೆ ಬಲಿಯಾಗಬೇಕಾಯಿತು.
ವೈದ್ಯರೇ ಬೇಡ ಎಂದರೂ ಕನ್ನಡಿ ಮುಂದೆ ನಿಂತ ಗೌಡ್ತಿ: ಕ್ರೌರ್ಯಕ್ಕೆ ಸೋಲದ ಆತ್ಮಸ್ಥೈರ್ಯ!
ಆ ಭೀಕರ ಆಸಿಡ್ ದಾಳಿ ಚೆನ್ನಮ್ಮ ಅವರ ಮುಖದ ಸೌಂದರ್ಯವನ್ನು ಕಿತ್ತುಕೊಂಡಿರಬಹುದು, ಆದರೆ ಬದುಕಿನ ಮೇಲಿದ್ದ ಅವರ ಅದಮ್ಯ ಉತ್ಸಾಹವನ್ನಲ್ಲ. ಮುಖ ಕ್ರೂರಿಯಾಗಿ ವಿಕಾರಗೊಂಡಾಗ ವೈದ್ಯರು “ಅವರ ಮಾನಸಿಕ ಸ್ಥಿತಿ ಕೆಡಬಹುದು, ಮನೆಯಲ್ಲಿ ಎಲ್ಲೂ ಕನ್ನಡಿ ಇಡಬೇಡಿ” ಎಂದಿದ್ದರು. ಆದರೆ ಚೆನ್ನಮ್ಮ ಮಾತ್ರ ಅದಕ್ಕೆ ಜಗ್ಗಲಿಲ್ಲ. ಕನ್ನಡಿಯ ಮುಂದೆಯೇ ನಿಂತರು. ತಮ್ಮ ರೂಪ ಕಂಡು ಎಂದೂ ಅವರು ನಾಲ್ಕು ಗೋಡೆಗಳ ಮಧ್ಯೆ ಅಡಗಿ ಕುಳಿತುಕೊಳ್ಳಲಿಲ್ಲ. ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅದೇ ಹಸನ್ಮುಖಿಯಾಗಿಯೇ ಭಾಗವಹಿಸುತ್ತಾ ಹೆಣ್ಣಿನ ಅಸಾಧಾರಣ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗಿದ್ದರು.
ಹಗೆತನ ಮರೆತು ಆರೋಪಿಯನ್ನು ಜೈಲಿನಿಂದ ಬಿಡಿಸಿದ ದೊಡ್ಡಗೌಡರು: ಪತ್ನಿಯ ಅಪೂರ್ವ ಕ್ಷಮಾಗುಣ!
ಈ ಆಸಿಡ್ ಪ್ರಕರಣದಲ್ಲಿ ಲೋಕೇಶ್‌ಗೆ ನ್ಯಾಯಾಲಯವು 8 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಆದರೆ 4 ವರ್ಷ ಕಳೆಯುವಷ್ಟರಲ್ಲಿ ಗೌಡರ ತಮ್ಮನಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆ ಕಷ್ಟದ ಸ್ಥಿತಿಯನ್ನು ಕಂಡು ಮರುಗಿದ ಹೆಚ್.ಡಿ. ದೇವೇಗೌಡರು, ತಾವೊಬ್ಬ ಮಾಜಿ ಪ್ರಧಾನಿ ಎಂಬುದನ್ನೂ ಬದಿಗೊತ್ತಿ ಹೈಕೋರ್ಟ್ ಜಡ್ಜ್‌ಗೆ ಫೋನ್ ಮಾಡಿ ತನ್ನ ಮೇಲೆಯೇ ದಾಳಿ ಮಾಡಿದವನನ್ನು ಬಿಡುಗಡೆ ಮಾಡಲು ಕೋರಿದರು. ಜಡ್ಜ್ ಆಶ್ಚರ್ಯಪಟ್ಟಾಗ, “ನನ್ನ ತಮ್ಮ ಕೊನೆಗಾಲದಲ್ಲಿ ಮಗನ ಜೊತೆ ಇರಲಿ” ಎಂದು ಮಾನವೀಯತೆ ಮೆರೆದರು. ಇಷ್ಟೆಲ್ಲಾ ಆದರೂ ಪತ್ನಿ ಚೆನ್ನಮ್ಮ ಕಿಂಚಿತ್ತೂ ಬೇಸರ ಮಾಡಿಕೊಳ್ಳದೆ ಪತಿಯ ನಿರ್ಧಾರಕ್ಕೆ ಬೆಂಬಲವಾಗಿ ನಿಂತು, ತನ್ನನ್ನು ವಿಕಾರಗೊಳಿಸಿದವನನ್ನು ಮನಸಾರ ಕ್ಷಮಿಸಿಬಿಟ್ಟಿದ್ದರು.
‘ಅವಳು ಅಪ್ಪಟ ಗಟ್ಟಿಗಿತ್ತಿ’ ಎಂದ ಸಿದ್ದರಾಮಯ್ಯ: ಇತಿಹಾಸದಲ್ಲಿ ಉಳಿಯಲಿದೆ ಈ ಧೈರ್ಯದ ಬದುಕು!
ಚೆನ್ನಮ್ಮ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಚೆನ್ನಮ್ಮನವರು ಕಷ್ಟ ನೋವುಗಳಿಗೆ ಕುಗ್ಗದೆ ಧೈರ್ಯದಿಂದ ಎದುರಿಸಿದ ಅಪ್ಪಟ ಗಟ್ಟಿಗಿತ್ತಿ” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಜನತಾ ಪರಿವಾರದ ದಿನಗಳಿಂದ ಗೌಡರ ಕುಟುಂಬದ ಜೊತೆಗಿನ ನಿಕಟ ಒಡನಾಟವನ್ನು ನೆನಪಿಸಿಕೊಂಡ ಅವರು, ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಇಡೀ ದೊಡ್ಡ ಸಂಸಾರವನ್ನು ಪೊರೆದ ಆದರ್ಶ ಗೃಹಿಣಿ ಅವರು ಎಂದು ಕೊಂಡಾಡಿದ್ದಾರೆ. ತಮ್ಮ ಮೇಲಾದ ಆಸಿಡ್ ದಾಳಿಯ ಕ್ರೌರ್ಯವನ್ನು ಜೀರ್ಣಿಸಿಕೊಂಡು, 94ರ ಹರೆಯದಲ್ಲೂ ಗಂಡನಿಗೆ ಶಕ್ತಿಯಾಗಿ ಬದುಕಿದ ಚೆನ್ನಮ್ಮ ಅವರ 72 ವರ್ಷಗಳ ಅಪೂರ್ವ ದಾಂಪತ್ಯದ ಪಯಣ ಈಗ ಮುಗಿದಿದೆ. ದೈಹಿಕವಾಗಿ ಅವರು ಇಂದು ಮರೆಯಾಗಿದ್ದರೂ, ಅವರ ಧೈರ್ಯ,ತಾಳ್ಮೆ, ವ್ಯಕ್ತಿತ್ವ ಮತ್ತು ಕ್ಷಮಾಗುಣ ಸದಾ ಕಾಲ ಇತಿಹಾಸದಲ್ಲಿ ಹಸಿರಾಗಿರಲಿದೆ.



