No menu items!
7.8 C
Munich
Thursday, April 30, 2026

ನಮ್ಮ ಸಾಲು ಮರದ ತಿಮ್ಮಕ್ಕ ನಿಮ್ಗೆ ಗೊತ್ತು..ಮರಗಳ ರಾಮಯ್ಯ ಗೊತ್ತೇ?

Must read

ಇದು ತೆಲಂಗಾಣ ರಾಜ್ಯದ ಕಮ್ಮಮ್ ಜಿಲ್ಲೆಯ ರೆಡ್ಡಿಪಲ್ಲೆಯ ರಾಮಯ್ಯ ದರಿಪಲ್ಲಿಯವರ ಸ್ಫೂರ್ತಿದಾಯಕ ಕಥೆ. ರಾಮಯ್ಯ ಎಲ್ಲೇ ಹೋದ್ರು ತನ್ನ ಜೊತೆಗೆ ಗಿಡಮರಗಳ ಬೀಜಗಳನ್ನು ಮತ್ತು ಸಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನೂರಾರು ಕಿಲೋಮೀಟರ್ಗಳ ಪ್ರಯಾಣ ಮಾಡಿ, ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಬರುತ್ತಿದ್ದರು.
ಅಷ್ಟೇ ಅಲ್ಲ ಮುಂದಿನ ಪೀಳಿಗೆ ಸುಖವಾಗಿರಲಿ ಅಂತ ಮರಗಳನ್ನು ಬೆಳಸುವ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ರಾಮಯ್ಯ ಲಕ್ಷಾಂತರ ಮರಗಳನ್ನು ನೆಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ನಾನೆಷ್ಟು ಮರಗಳನ್ನು ನೆಟ್ಟಿದ್ದೇನೆ ಅನ್ನುವುದು ನೆನಪಿಲ್ಲ. ನನಗೆ ಇನ್ನೊಬ್ಬರಿಗೆ ಹೇಳಿ ಕೊಡುವುದರಲ್ಲಿ ನಂಬಿಕೆ ಇಲ್ಲ. ಮಾಡಿ ತೋರಿಸುವುದರಲ್ಲಿ ಮಾತ್ರ ಬಲವಾದ ನಂಬಿಕೆ ಇದೆ ಎನ್ನುವುದು ಅವರು ಅರಿತು ನಡೆಯುತ್ತಿರುವ ಹಾದಿ.


ರಾಮಯ್ಯ ಬಹುಶ, ಸರಿಸುಮಾರು ಒಂದು ಕೋಟಿಗಿಂತಲೂ ಅಧಿಕ ಮರಗಳನ್ನು ಬೆಳೆಸಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ರಾಮಯ್ಯ ತೆಲಂಗಾಣ ರಾಜ್ಯದ ಪ್ರತಿ ಮೂವರು ಪ್ರಜೆಗಳಿಗೆ ಒಂದು ಮರದಂತೆ ಸಸಿಗಳನ್ನು ನೆಟ್ಟಿದ್ದಾರೆ ಅಂದ್ರೆ ಅದು ದೊಡ್ಡ ಸಾಧನೆ ಅಲ್ಲದೆ ಮತ್ತೇನು..?
70 ವರ್ಷ ವಯಸ್ಸಿನ ರಾಮಯ್ಯರನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ‘ಮರಗಳ ರಾಮಯ್ಯ’ ಮತ್ತು ‘ ವನಜೀವಿ ರಾಮಯ್ಯ’ ಅಂದ್ರೆ ರೆಡ್ಡಿಪಲ್ಲೆ ಗ್ರಾಮದಲ್ಲಿ ದೊಡ್ಡ ಹೆಸರು. ರೆಡ್ಡಿಪಲ್ಲೆಯಲ್ಲಿರುವ ರಾಮಯ್ಯರ ಡಬಲ್ ಬೆಡ್ರೂಮ್ ಮನೆಯ ಸುತ್ತಲೂ ಪರಿಸರಕ್ಕೆ ಸಂಬಂಧ ಪಟ್ಟ ಸ್ಲೋಗನ್ಗಳು ಮತ್ತು ಬ್ಯಾನರ್ಗಳಿವೆ. ಈ ಮೂಲಕ ಉಳಿದವರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿದ್ದಾರೆ.
ಪರಿಸರ ಜೀವಿ ರಾಮಯ್ಯನವರ ಈ ಕೆಲಸ ಬಗ್ಗೆ ಹಲವರು ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡಿದ್ದಾರೆ. ಆದ್ರೆ ರಾಮಯ್ಯ ಇದಕ್ಕೆಲ್ಲಾ ತಲ ಕೆಡಿಸಿಕೊಂಡಿಲ್ಲ. ಖಾಲಿ ಜಾಗಕ್ಕೆ ಸೈಕಲ್ ಮೂಲಕ ತೆರಳಿ ಅಲ್ಲಿ ಸಸಿ ನೆಟ್ಟು ಬರುತ್ತಾರೆ. ಅಷ್ಟೇ ಅಲ್ಲ ಮುಂದೊಂದು ದಿನ ಖಾಲಿ ಜಾಗದಲ್ಲಿ ಹಲವು ಮರಗಳು ಬೆಳೆಯುತ್ತವೆ ಅನ್ನೋ ನಂಬಿಕೆಯನ್ನು ರಾಮಯ್ಯ ಇಟ್ಟುಕೊಂಡಿದ್ದಾರೆ. ಮರಗಳನ್ನು ಉಳಿಸಿ, ಅವುಗಳು ಜೀವ ಉಳಿಸುತ್ತವೆ ಅನ್ನೋದನ್ನ ರಾಮಯ್ಯ ಪ್ರತಿಯೊಬ್ಬರಿಗೂ ಹೇಳುತ್ತಾರೆ.


ರಾಮಯ್ಯ ತನ್ನ ಮೂರು ಎಕರೆ ಆಸ್ತಿಯನ್ನು ಮಾರಿ, ಗಿಡಗಳ ಬೀಜಗಳನ್ನು ಖರೀದಿ ಮಾಡಿದ್ದಾರೆ. ಬರ್ತ್ ಡೇ ಮತ್ತು ಮದುವೆ ವಾರ್ಷಿಕೋತ್ಸವಗಳಿಗೆ ಅಥವಾ ಇನ್ಯಾವುದೇ ಸಮಾರಂಭಗಳಿಗೆ ರಾಮಯ್ಯ ಹೋದರೆ ಸಸಿಗಳನ್ನು ಉಡುಗೊರೆ ನೀಡಿ ಬರುತ್ತಾರೆ. ರಾಮಯ್ಯ ಕೇವಲ 10ನೇ ತರಗತಿ ತನಕ ವ್ಯಾಸಂಕ ಮಾಡಿದ್ದರೂ, ಹಲವು ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಪರಿಸರ ಮತ್ತು ಮರಗಳ ಬಗ್ಗೆ ಓದಿದ ಲೇಖನಗಳ ಕ್ಲಿಪ್ಪಿಂಗ್ಗಳನ್ನು ಕೂಡ ರಾಮಯ್ಯ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ಈಗ ಸಾಧಕ ತೆಲಂಗಾಣ ರಾಮಯ್ಯ ಅವರು ಭಾರತದ ನಾಲ್ಕನೇ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಶ್ರೀ ಗೌರವ ಪಡೆದುಕೊಂಡಿದ್ದಾರೆ. ಆದ್ರೆ ರಾಮಯ್ಯ ಅವರೇ ಹೇಳುವಂತೆ ಈ ಶ್ರೇಷ್ಠ ಗೌರವ ಅವರ ಮೇಲೆ ಹೆಚ್ಚು ಜವಾಬ್ದಾರಿಗಳನ್ನು ಹೇರಿದೆ. ನನ್ನ ಕೆಲಸದಿಂದ ಜನರು ಸ್ಫೂರ್ತಿಗೊಂಡರೆ ಅದು ನನಗೆ ಕೊಟ್ಟ ಶ್ರೇಷ್ಠ ಗೌರವ ಅನ್ನೋದನ್ನ ರಾಮಯ್ಯ ಹೇಳುತ್ತಾರೆ.
ಏನೇ ಹೇಳಿ, ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಮರಗಳ ರಾಮಯ್ಯ ನಿಜಕ್ಕೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿ ಅನ್ನುವುದರಲ್ಲಿ ಅನುಮಾನವೇ ಇಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article