ದೇಶಾದ್ಯಂತ ತೀವ್ರ ಕೋಲಾಹಲ ಹಾಗೂ ಕಾಡ್ಗಿಚ್ಚಿನಂತೆ ಹಬ್ಬಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹತ್ವದ ರಾಜಕೀಯ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿಗಳ ಆಕ್ರೋಶ, ದೇಶವ್ಯಾಪಿ ಹೋರಾಟ ಹಾಗೂ ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಅಂತಿಮವಾಗಿ ಕೇಂದ್ರ ಸರ್ಕಾರ ಮಣಿದಿದೆ. ವಿದ್ಯಾರ್ಥಿಗಳ ನೈತಿಕ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ
ದೆಹಲಿಯ ಜಂತರ್ ಮಂತರ್‌ನಲ್ಲಿ ಜಂಟಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಸೇರಿದಂತೆ ದೇಶಾದ್ಯಂತ ನಡೆದ ಸಾಲು ಸಾಲು ಪ್ರತಿಭಟನೆಗಳು ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಇಕ್ಕಟ್ಟಿಗೆ ಸಿಲುಕಿಸಿದ್ದವು. “ಶಿಕ್ಷಣ ಸಚಿವರ ವಿಕೆಟ್ ಬೀಳುವವರೆಗೂ ಅಖಾಡ ಖಾಲಿ ಮಾಡಲ್ಲ” ಎಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳ ಆಕ್ರೋಶದ ತಾಪ ತಟ್ಟುತ್ಯಿದ್ದಂತೆಯೇ ಧರ್ಮೇಂದ್ರ ಪ್ರಧಾನ್ ಶನಿವಾರ (ಜುಲೈ 25) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣವೇ ಅಂಗೀಕರಿಸಿದ್ದಾರೆ.
ಕನ್ನಡಿಗ ಪ್ರಲ್ಹಾದ್ ಜೋಶಿಗೆ ಶಿಕ್ಷಣ ಇಲಾಖೆಯ ಬಿಗ್ ರೆಸ್ಪಾನ್ಸಿಬಿಲಿಟಿ
ಧರ್ಮೇಂದ್ರ ಪ್ರಧಾನ್ ನಿರ್ಗಮನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ. ಕಷ್ಟಕಾಲದಲ್ಲಿ ನಂಬಿಕಸ್ಥ ನಾಯಕನಿಗೆ ಬೆಂಬಲವಾಗಿ ನಿಲ್ಲುವ ಮೋದಿ, ಇದೀಗ ಇಡೀ ದೇಶವೇ ಕಣ್ಣಿಟ್ಟಿರುವ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಕರ್ನಾಟಕದ ಹಿರಿಯ ನಾಯಕ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೆಗಲಿಗೆ ಏರಿಸಿದ್ದಾರೆ. ಪ್ರಧಾನಿ ಮೋದಿ ಅವರ ಖುದ್ದು ನಿರ್ದೇಶನದ ಮೇರೆಗೆ ಜೋಶಿ ಅವರು ಈ ಮಹತ್ವದ ಖಾತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಖಾಕಿ, ಕಲ್ಲಿದ್ದಲಿನಿಂದ ಹಿಡಿದು ಶಿಕ್ಷಣದವರೆಗೆ: ಜೋಶಿ ಮೇಲಿದೆ ಭಾರಿ ಭರವಸೆ
ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಲ್ಹಾದ್ ಜೋಶಿ ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ (MNRE) ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೋದಿ ಆಡಳಿತದಲ್ಲಿ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳಂತಹ ಸಂಕಷ್ಟದ ಇಲಾಖೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದ ಅವರ ಅನುಭವ ಹಾಗೂ ಸಂಕಟ ನಿರ್ವಹಣೆ (Crisis Management) ಸಾಮರ್ಥ್ಯವನ್ನು ಗುರುತಿಸಿ, ಪ್ರಧಾನಿ ಈ ಬಿಕ್ಕಟ್ಟಿನ ಸಮಯದಲ್ಲಿ ಅವರಿಗೆ ಶಿಕ್ಷಣ ಖಾತೆಯನ್ನು ಹಸ್ತಾಂತರಿಸಿದ್ದಾರೆ.
ರಾಷ್ಟ್ರೀಯ ಯೋಜನೆಗಳ ರೂವಾರಿ ಈಗ ಶಿಕ್ಷಣ ಕ್ಷೇತ್ರದ ರಕ್ಷಕ
ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್ ಹಾಗೂ ‘ಪಿಎಂ ಸೂರ್ಯ ಘರ್ ಮುಫ್ತಿ ಬಿಜಲಿ’ಯಂತಹ ಪ್ರಮುಖ ಯೋಜನೆಗಳ ಹಿಂದೆ ಅಹೋರಾತ್ರಿ ಶ್ರಮವಹಿಸಿ ಯಶಸ್ಸು ಕಂಡಿದ್ದ ಪ್ರಲ್ಹಾದ್ ಜೋಶಿ, ಅಂತರರಾಷ್ಟ್ರೀಯ ಸೌರ ಒಕ್ಕೂಟದ (ISA) ಅಧ್ಯಕ್ಷರಾಗಿಯೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇಂತಹ ಸವಾಲಿನ ದಿನಗಳಲ್ಲಿ, ಪಾರದರ್ಶಕತೆ ಕಳೆದುಕೊಂಡು ದಿಕ್ಕುತಪ್ಪಿರುವ ಶಿಕ್ಷಣ ಇಲಾಖೆಗೆ ಮರಳಿ ಶಿಸ್ತು ತರಲು ಜೋಶಿ ಅವರ ಆಡಳಿತಾತ್ಮಕ ಪವರ್ ಮತ್ತು ಅನುಭವವೇ ಸೂಕ್ತ ಎಂಬ ನಿರ್ಧಾರಕ್ಕೆ ಪ್ರಧಾನಿ ತಲುಪಿದ್ದಾರೆ.
ಇಡೀ ದೇಶದ ಚಿತ್ತ ಈಗ ಜೋಶಿ ಕೈಗೊಳ್ಳೋ ನಿರ್ಧಾರಗಳ ಮೇಲೆ
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿ ತಳ್ಳಿರುವ ನೀಟ್ ಪರೀಕ್ಷಾ ಅಕ್ರಮದ ತನಿಖೆ, ಎನ್‌ಟಿಎ (NTA) ವ್ಯವಸ್ಥೆಯ ಸಂಪೂರ್ಣ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿ ಕಳೆದುಹೋಗಿರುವ ಭರವಸೆಯನ್ನು ಮರುಕಳಿಸುವಂತೆ ಮಾಡುವುದು ಈಗ ಪ್ರಲ್ಹಾದ್ ಜೋಶಿ ಅವರ ಮುಂದಿರುವ ಬಹುದೊಡ್ಡ ಹಿಮಾಲಯನ್ ಸವಾಲು. ಶಿಕ್ಷಣ ಇಲಾಖೆಯಲ್ಲಿ ತಕ್ಷಣವೇ ಯಾವ ರೀತಿಯ ಕ್ರಾಂತಿಕಾರಿ ಬದಲಾವಣೆಗಳನ್ನು ಜೋಶಿ ತರಲಿದ್ದಾರೆ ಮತ್ತು ವಿದ್ಯಾರ್ಥಿಗಳ ಆಕ್ರೋಶವನ್ನು ಹೇಗೆ ಶಮನ ಮಾಡಲಿದ್ದಾರೆ ಎಂಬುದನ್ನು ಇಡೀ ದೇಶವೇ ಕಾದುನೋಡುತ್ತಿದೆ.
ಸಂಪುಟ ಪುನಾರಚನೆಯಾಗುವವರೆಗೆ ಹೆಚ್ಚುವರಿ ಹೊಣೆಗಾರಿಕೆ
ಕೇಂದ್ರ ಸಂಪುಟದಲ್ಲಿ ಶೀಘ್ರದಲ್ಲೇ ಪ್ರಮುಖ ಬದಲಾವಣೆಗಳು ಹಾಗೂ ಪುನಾರಚನೆ ನಡೆಯಲಿದೆ ಎಂಬ ಚರ್ಚೆಗಳು ದೆಹಲಿ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಹೊಸ ಮುಖಗಳಿಗೆ ಮಣೆ ಹಾಕುವ ಅಥವಾ ಇಲಾಖೆಗಳ ಮರುಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪ್ರಲ್ಹಾದ್ ಜೋಶಿ ಅವರೇ ಈ ಮಹತ್ವದ ಶಿಕ್ಷಣ ಖಾತೆಯ ಉಸ್ತುವಾರಿಯನ್ನು ಮುನ್ನಡೆಸಲಿದ್ದಾರೆ. ಒಟ್ಟಿನಲ್ಲಿ, ನೀಟ್ ಅಕ್ರಮದ ದಗೆಯ ನಡುವೆಯೇ ಸಚಿವಾಲಯಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡಿಗ ಜೋಶಿ ಅವರಿಗೆ ಇದು ನಿಜವಾದ ಅಗ್ನಿಪರೀಕ್ಷೆಯಾಗಿದೆ!



