No menu items!
23.6 C
Munich
Monday, July 27, 2026

ನೀಟ್ ಪ್ರತಿಭಟನೆಯಲ್ಲಿ 989 ಕ್ರಿಮಿನಲ್ಸ್ ; ದೆಹಲಿ ಪೊಲೀಸ್ ವರದಿಯಲ್ಲಿ ಆಘಾತಕಾರಿ ವಿಚಾರ ಬಹಿರಂಗ

Must read

ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ (NEET) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮಾಹಿತಿಯೊಂದು ತನಿಖೆಯಿಂದ ಹೊರಬಿದ್ದಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಈ ಬೃಹತ್ ಹೋರಾಟದಲ್ಲಿ ವಿದ್ಯಾರ್ಥಿಗಳ ಜೊತೆಗೆ ಕೊಲೆ, ದರೋಡೆ, ಅತ್ಯಾಚಾರ, ಅಪಹರಣ ಹಾಗೂ ಡ್ರಗ್ಸ್‌ನಂತಹ ಘೋರ ಅಪರಾಧ ಹಿನ್ನೆಲೆಯುಳ್ಳ ನೂರಾರು ರೌಡಿಶೀಟರ್‌ಗಳು ಹಾಗೂ ಅಪರಾಧಿಗಳು ಭಾಗಿಯಾಗಿದ್ದರು ಎಂಬ ಶಾಕಿಂಗ್ ಸತ್ಯ ದೆಹಲಿ ಪೊಲೀಸರ ಆಂತರಿಕ ತನಿಖಾ ವರದಿಯಿಂದ ಬಯಲಾಗಿದೆ ಎಂದು ”ಇಂಡಿಯಾ ಟುಡೇ” ಎಕ್ಸ್‌ಕ್ಲೂಸಿವ್ ವರದಿಯನ್ನು ಮಾಡಿದೆ.

2,800ಕ್ಕೂ ಹೆಚ್ಚು ಜನರ ಬಯೋಡೇಟಾ ಸ್ಕ್ಯಾನ್: 989 ಕ್ರಿಮಿನಲ್‌ಗಳು ಪ್ರತ್ಯಕ್ಷ!

”’ಇಂಡಿಯಾ ಟುಡೇ” ವರದಿಯ ಪ್ರಕಾರ ಪ್ರತಿಭಟನಾ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿದ್ದ ಸುಮಾರು 2,873 ವ್ಯಕ್ತಿಗಳ ಗುರುತನ್ನು ದೆಹಲಿ ಪೊಲೀಸರು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಇದಕ್ಕಾಗಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಫುಟೇಜ್‌ಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋಗಳನ್ನು ಕಲೆಹಾಕಿ ತನಿಖೆ ನಡೆಸಲಾಗಿದೆ. ಈ ಪರಿಶೀಲನೆಯಲ್ಲಿ ಬರೋಬ್ಬರಿ 989 ಜನರು ಈ ಹಿಂದೆ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದವರು ಅಥವಾ ಎಫ್‌ಐಆರ್ ಎದುರಿಸುತ್ತಿರುವ ಕ್ರಿಮಿನಲ್‌ಗಳು ಎಂಬುದು ದೃಢಪಟ್ಟಿದೆ.

ಕೊಲೆ, ರೇಪ್, ಪೋಕ್ಸೋ ಕೇಸ್‌ಗಳ ಆರೋಪಿಗಳ ದಂಡು: ವರದಿಯಲ್ಲಿ ಯಾರಲ್ಲಿದ್ದಾರೆ?

ವರದಿಯಲ್ಲಿ ನೀಡಿರುವ ಅಂಕಿಸಂಖ್ಯೆಯ ಮಾಹಿತಿ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಸ್ಥಳದಲ್ಲಿದ್ದವರ ಪೈಕಿ 101 ಜನರು ಕೊಲೆ ಕೇಸ್, 62 ಜನರು ಕೊಲೆ ಯತ್ನ, 284 ಜನರು ದರೋಡೆ/ಕಳ್ಳತನ, 61 ಜನರು ಅತ್ಯಾಚಾರ, 25 ಜನರು ಲೈಂಗಿಕ ಕಿರುಕುಳ ಹಾಗೂ 6 ಜನರು ಕಠಿಣ ಪೋಕ್ಸೋ (POCSO) ಕಾಯ್ದೆಯಡಿ ಆರೋಪಿಗಳಾಗಿದ್ದಾರೆ. ಇದಲ್ಲದೆ 229 ಜನರು ಅಕ್ರಮ ಶಸ್ತ್ರಾಸ್ತ್ರ (Arms Act), 135 ಜನರು ಸರಗಳ್ಳತನ, 19 ಜನರು ಕಿಡ್ನ್ಯಾಪಿಂಗ್ ಹಾಗೂ 67 ಜನರು ಮಾದಕ ದ್ರವ್ಯ (NDPS) ನಿಯಂತ್ರಣ ಕಾಯ್ದೆಯಡಿ ಬುಕ್ ಆದವರಾಗಿದ್ದಾರೆ.

ಗಲಭೆಗೆ ಸ್ಕೆಚ್ ಹಾಕಿದ್ರಾ ಅಪರಾಧಿಗಳು?

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಈ ಕ್ರಿಮಿನಲ್‌ಗಳಲ್ಲಿ ಬಹುತೇಕರು ನಿರಂತರ ಅಪರಾಧಗಳಲ್ಲಿ ತೊಡಗಿಕೊಳ್ಳುವವರು ಎನ್ನುವುದು ಬೆಳಕಿಗೆ ಬಂದಿದೆ. ಕೊಲೆ ಆರೋಪ ಹೊತ್ತಿರುವ 101 ಜನರಲ್ಲಿ 42 ಜನರು ಎರಡಕ್ಕಿಂತ ಹೆಚ್ಚು ಕೇಸ್‌ಗಳಲ್ಲಿ ಮತ್ತು 12 ಜನರು 10ಕ್ಕೂ ಹೆಚ್ಚು ಹಳೆಯ ಅಪರಾಧ ಪ್ರಕರಣಗಳಲ್ಲಿ ದಾಖಲೆ ಹೊಂದಿದ್ದಾರೆ. ಅದೇ ರೀತಿ ದರೋಡೆ ಪ್ರಕರಣಗಳ 284 ಆರೋಪಿಗಳ ಪೈಕಿ 155 ಜನರು ಕನಿಷ್ಠ ಎರಡು ಹಾಗೂ 31 ಜನರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾದ ಹಳೆಯ ಖದೀಮರಾಗಿದ್ದಾರೆ.

ಬಲಪ್ರಯೋಗಕ್ಕೆ ಇದೇ ಕಾರಣ: ಜುಲೈ 20ರ ಲಾಠಿಚಾರ್ಜ್‌ಗೆ ಪೊಲೀಸರ ಸ್ಪಷ್ಟನೆ

ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ನಡೆದ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ನಮ್ಮ ನಡೆ ಅತ್ಯಂತ ಸಂಯಮದಿಂದ ಕೂಡಿತ್ತು. ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ಮಾತ್ರ ಅನುಮತಿ ಇತ್ತು. ಆದರೆ ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆ ಅತ್ಯಂತ ಹೈ-ಸೆಕ್ಯುರಿಟಿ ವಲಯಕ್ಕೆ ಮುನ್ನುಗ್ಗಲು ಈ ಗುಂಪು ಯತ್ನಿಸಿತು. ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಬಂದಾಗ ಪರಿಸ್ಥಿತಿ ಕೈಮೀರಿತ್ತು ಎಂದು ಹೇಳಿದ್ದಾರೆ.

ಪೊಲೀಸರು, ಮಾಧ್ಯಮಗಳ ಮೇಲೆ ಹಲ್ಲೆ: ವಾಹನಗಳ ಜಖಂ

ಪ್ರತಿಭಟನಾಕಾರರ ವೇಷದಲ್ಲಿದ್ದ ಕಿಡಿಗೇಡಿಗಳು ಪೊಲೀಸ್ ವಾಹನಗಳನ್ನು ಜಖಂಗೊಳಿಸಿ, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಸಿಬ್ಬಂದಿಯನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವರದಿ ಮಾಡಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ದೌರ್ಜನ್ಯ ಎಸಗಲಾಗಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ, ಬ್ಯಾರಿಕೇಡ್ ಮುರಿದು ದಾಳಿ ನಡೆಸಿದ ನಿರ್ದಿಷ್ಟ ಕಿಡಿಗೇಡಿಗಳನ್ನು ಗುರಿಯಾಗಿಸಿಕೊಂಡು ಮಾತ್ರ ‘ಲಿಮಿಟೆಡ್ ಲಾಠಿಚಾರ್ಜ್’ ಮಾಡಲಾಗಿದೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

36 ದಿನಗಳ ಸುದೀರ್ಘ ಪ್ರತಿಭಟನೆ: ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಹೋರಾಟ

ನೀಟ್ ಪರೀಕ್ಷಾ ಸೋರಿಕೆ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ನಡೆದ ಈ 36 ದಿನಗಳ ಸುದೀರ್ಘ ಪ್ರತಿಭಟನೆಯು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೂ ಕಾರಣವಾಗಿತ್ತು. ಆದರೆ ಈ ಹೋರಾಟದ ಹಿನ್ನೆಲೆಯಲ್ಲಿ ನಡೆದ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲನೆಯ ವೇಳೆ, ವಿದ್ಯಾರ್ಥಿಗಳ ಸೋಗಿನಲ್ಲಿ ಘೋರ ಅಪರಾಧಿಗಳು ನುಸುಳಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಯತ್ನಿಸಿದ್ದು ಸಾಬೀತಾಗಿದೆ. ಸದ್ಯ ಈ ಕಿಡಿಗೇಡಿಗಳ ನಿಜವಾದ ಉದ್ದೇಶವೇನಿತ್ತು ಎಂಬುದರ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article