No menu items!
17.7 C
Munich
Monday, April 27, 2026

ಪ್ರಯಾಣಿಕರೇ ದಯವಿಟ್ಟು ಗಮನಿಸಿ ; ಇನ್ಮುಂದೆ ಬಸ್ ಮತ್ತು ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್

Must read

ಬೆಂಗಳೂರಿನಲ್ಲಿ ಸಂಚರಿಸಲು ತುಂಬಾನೇ ಸಹನೆ ಮತ್ತು ತಾಳ್ಮೆ ಬೇಕು. ಅದರಲ್ಲಿಯೂ ಸಾರ್ವಜನಿಕ ಸಾರಿಗೆ ಸಾಹಸವೇ ಸರಿ. ಯಾಕೆಂದರೆ.. ಚಿಲ್ಲರೆ ಸಮಸ್ಯೆ. ಈಗ ಕ್ಯೂಆರ್ ಕೋಡ್ ವ್ಯವಸ್ಥೆ ಬಸ್‌ನಲ್ಲಿದೆ. ಆದರೂ ಈ ವ್ಯವಸ್ಥೆಯ ದುರ್ಬಳಕೆ ಮಾಡಿಕೊಂಡು ನಿಗಮದ ಕ್ಯೂಆರ್‌ ಕೋಡ್‌ ಗಳನ್ನು ತೆಗೆದು ತಮ್ಮ ವೈಯಕ್ತಿಕ ಖಾತೆಯ ಕ್ಯೂಆರ್‌ ಮೂಲಕ ಟಿಕೆಟ್‌ ಹಣ ಪಡೆದ ಉದಾಹರಣೆಗಳಿವೆ. ಕನ್ನಡ ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಉಚಿತ ಟಿಕೆಟ್‌ ನೀಡಿ ಹಣ ಪಡೆದು ಕಳ್ಳಾಟವಾಡಿರುವುದು ಕೂಡ ಬಯಲಾಗಿದೆ.

ಇನ್ನೂ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಬೇಕು. ಇದಕ್ಕೂ ಇದರದ್ದೇ ಆದ ಸಮಸ್ಯೆಗಳಿವೆ. ಉದಾಹರಣೆಗೆ ರಿಚಾರ್ಜ್ ಸಮಸ್ಯೆ. ಹೀಗಿರುವಾಗ ಇದೀಗ ಮೆಟ್ರೋ ಮತ್ತು ಬಿಎಂಟಿಸಿ ಎರಡಕ್ಕೂ ಒಂದೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಬಿಎಂಟಿಸಿ ಮತ್ತು ಬಿಎಂಆರ್ ಸಿ ಎಲ್ ಮುಂದಾಗಿವೆ.

ಹೌದು, ಈಗಾಗಲೇ ಈಗಾಗಲೇ ನಮ್ಮ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದೇ ಮಾದರಿಯನ್ನು ಈಗ ಬಿಎಂಟಿಸಿ ಬಸ್‌ಗಳಿಗೂ ವಿಸ್ತರಿಸಲಾಗುತ್ತಿದೆ. ಪ್ರಯಾಣಿಕರು ಒಂದೇ ಕಾರ್ಡ್ ರೀ-ಚಾರ್ಜ್ ಮಾಡಿಕೊಂಡು ಅದನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ಟೈಪ್ ಮಾಡಿ ಪ್ರಯಾಣಿಸಬಹುದು.

ಈ ಯೋಜನೆಯನ್ನು ಜಾರಿಗೊಳಿಸಲು ಬಿಎಂಟಿಸಿ ಸನ್ನದ್ಧವಾಗಿದ್ದು, ಶೀಘ್ರದಲ್ಲೇ ಎಲ್ಲಾ ಡಿಪೋಗಳಿಗೆ ಅತ್ಯಾಧುನಿಕ ಟಿಕೆಟ್ ಮಿಷನ್‌ಗಳು ತಲುಪಲಿವೆ. ಕಂಡಕ್ಟರ್ ಗಳಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ತರಬೇತಿಯನ್ನು ನೀಡಲು ಕೂಡ ಸಾರಿಗೆ ಇಲಾಖೆ ಮುಂದಾಗಿದೆ.

ಪ್ರಯಾಣಿಕರ ದೈನಂದಿನ ಪ್ರಯಾಣವನ್ನು ಇನ್ನೂ ಸರಳವಾಗಿಸುವ ದಿಸೆಯಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು ಇದರಿಂದ ಬಿಎಂಟಿಸಿ ಬಸ್‌ಗಳಲ್ಲಿ ನಡೆಯುತ್ತಿದ್ದ ಕ್ಯೂಆರ್ ಕೋಡ್ ದುರ್ಬಳಕೆಗೆ ಕಡಿವಾಣ ಬೀಳಲಿದೆ, ಆದಾಯ ಸಂಗ್ರಹದಲ್ಲಿ ಹೆಚ್ಚಿನ ಪಾರದರ್ಶಕತೆ ಇರಲಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಈ ಮಹತ್ವದ ಸಾರಿಗೆ ಯೋಜನೆ ಜಾರಿಗೆ ಬರಲಿದೆ.

- Advertisement -spot_img

More articles

- Advertisement -spot_img

Latest article