ಬೆಂಗಳೂರಿನಲ್ಲಿ ಖದೀಮರ ಕೈಚಳಕ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ ಚೈನ್ ಸ್ನ್ಯಾಚಿಂಗ್, ಬೀಗ ಹಾಕಿದ ಮನೆಗಳ ಕಳ್ಳತನ ಮಾಡ್ತಿದ್ದ ಕಳ್ಳರು ಈಗ ಸೀದಾ ಕೋಟಿ ಕೋಟಿ ಲೂಟಿ ಹೊಡೆಯಲು ಖತರ್ನಾಕ್ ಸ್ಕೆಚ್ ಹಾಕುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ರಾಜಧಾನಿಯ ಹೃದಯಭಾಗವಾದ ಮಲ್ಲೇಶ್ವರದಲ್ಲಿ ಹಾಡಹಗಲೇ ಅಪ್ಪಟ ಸಿನಿಮೀಯ ಶೈಲಿಯಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಭಾರಿ ದರೋಡೆ ನಡೆದಿದೆ. ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನಾಟಕವಾಡಿ ಉದ್ಯಮಿಯನ್ನೇ ನಂಬಿಸಿದ ಮೂವರು ಖದೀಮರು, ಬರೋಬ್ಬರಿ 1 ಕೆಜಿ 850 ಗ್ರಾಂ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಾರೆ.
ಮೇ 16 ರಂದು ನಡೆದ ಈ ಹಗಲು ದರೋಡೆಯ ರೋಚಕ ದೃಶ್ಯಗಳು ಕಚೇರಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಪ್ಲೀಟ್ ಆಗಿ ಸೆರೆಯಾಗಿವೆ. ವಂಚನೆ ನೆಡೆಸಿರುವ ಆ ಮೂವರು ಅಂತರಾಷ್ಟ್ರೀಯ ಮಟ್ಟದ ಕಿಲಾಡಿಗಳನ್ನು ಪರೇಶ್ ಸೋನಿ, ಶ್ಯಾಮ್ ಮತ್ತು ಚಂದ್ರಶೇಖರ್ ರಾವ್ ಎಂದು ಪೊಲೀಸರು ಗುರುತಿಸಿದ್ದಾರೆ. ಈ ಹೈಪ್ರೊಫೈಲ್ ವಂಚನೆಗೆ ಸಂಬಂಧಿಸಿದಂತೆ ”ಮೆಹ್ತಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್” ಸಂಸ್ಥೆಯ ಮಾರಾಟ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಸದ್ಯ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಕಳ್ಳತನದ ಕಥೆ ಶುರುವಾಗಿದ್ದೇ ಒಂದು ಫೋನ್ ಕರೆಯಿಂದ. ಆರೋಪಿಗಳ ಪೈಕಿ ಪರೇಶ್ ಸೋನಿ ಎಂಬಾತ ತಾನು ದೊಡ್ಡ ಹೋಲ್‌ಸೇಲ್ ಚಿನ್ನದ ವ್ಯಾಪಾರಿ ಅಂತ ಮೆಹ್ತಾ ಗೋಲ್ಡ್ ಕಂಪನಿಗೆ ಕರೆ ಮಾಡಿದ್ದ. ತನಗೆ ಮದುವೆ ಮತ್ತು ಬ್ಯುಸಿನೆಸ್ ಆರ್ಡರ್ ಒಂದಕ್ಕೆ ಬರೋಬ್ಬರಿ 3 ಕೆಜಿ ಚಿನ್ನದ ಆಭರಣಗಳು ಬೇಕಿವೆ ಎಂದು ನಂಬಿಸಿದ್ದ. ಅಲ್ಲದೆ, ನಂಬಿಕೆ ಬರಲಿ ಎಂದು ಮಲ್ಲೇಶ್ವರದ ಬಿಡುವಿಲ್ಲದ ಸಂಪಿಗೆ ರಸ್ತೆಯಲ್ಲಿರುವ ತನ್ನ ಹೈಟೆಕ್ ಆಫೀಸ್‌ಗೇ ಆಭರಣಗಳ ಸ್ಯಾಂಪಲ್ ತರುವಂತೆ ಕಂಪನಿ ಮಾಲೀಕರಿಗೆ ಸೂಚಿಸಿದ್ದ.
ದೊಡ್ಡ ಬ್ಯುಸಿನೆಸ್ ಸಿಗುತ್ತದೆ ಎಂಬ ಆಸೆಯಿಂದ ಆತನ ಮಾತನ್ನು ನಂಬಿದ ಮೆಹ್ತಾ ಗೋಲ್ಡ್ ಕಂಪನಿಯ ಹಿರಿಯ ಸಿಬ್ಬಂದಿ ಮಹೇಂದ್ರ ಕುಮಾರ್ ಜೈನ್ ಹಾಗೂ ಮತ್ತೊಬ್ಬ ಉದ್ಯೋಗಿ, ವಿವಿಧ ಡಿಸೈನ್‌ಗಳ ಸುಮಾರು 3 ಕೆಜಿ ತೂಕದ ಅಪ್ಪಟ ಚಿನ್ನಾಭರಣಗಳೊಂದಿಗೆ ಆರೋಪಿಯ ಕಚೇರಿಗೆ ತೆರಳಿದ್ದರು. ಕಚೇರಿಯಲ್ಲಿ ಕುಳಿತು ಪ್ರತಿಯೊಂದು ಆಭರಣವನ್ನು ಸೂಕ್ಷ್ಮವಾಗಿ ಪರಿಶೀಲಿಸುವ ನಾಟಕವಾಡಿದ ಪರೇಶ್ ಸೋನಿ, ತನಗೆ ಇಷ್ಟವಾದ ಕೆಲವು ಆಭರಣಗಳನ್ನು ಸೈಡ್ ಎತ್ತಿಟ್ಟುಕೊಂಡಿದ್ದ.
ಸುಮಾರು ಅರ್ಧಗಂಟೆ ಕಳೆದ ಬಳಿಕ, ಜೊತೆಯಲ್ಲಿದ್ದ ಶ್ಯಾಮ್ ಹಾಗೂ ಚಂದ್ರಶೇಖರ್ ಎಂಬುವವರು ಮೊಬೈಲ್‌ನಲ್ಲಿ ಆಭರಣಗಳ ಫೋಟೋ ತೆಗೆದುಕೊಳ್ಳಲು ಶುರು ಮಾಡಿದ್ದರು. ನಂತರ ಇವುಗಳ ಶುದ್ಧತೆಯನ್ನು (Purity) ಪಕ್ಕದ ಕ್ಯಾಬಿನ್‌ನಲ್ಲಿರುವ ಯಂತ್ರದ ಮೂಲಕ ಟೆಸ್ಟ್ ಮಾಡುವುದಾಗಿ ಹೇಳಿ, ಶ್ಯಾಮ್ ಆ ಒಡವೆಗಳನ್ನು ಮತ್ತೊಬ್ಬ ಆರೋಪಿ ಚಂದ್ರಶೇಖರ್ ರಾವ್ ಕೈಗೆ ನೀಡಿದ್ದ. ಆಭರಣಗಳನ್ನು ಕೈಗೆ ಪಡೆದ ಚಂದ್ರಶೇಖರ್ ರಾವ್, ಕಂಪನಿ ಸಿಬ್ಬಂದಿ ನೋಡ ನೋಡುತ್ತಿದ್ದಂತೆಯೇ ಸುಮಾರು 1 ಕೆಜಿ 850 ಗ್ರಾಂ ಚಿನ್ನದೊಂದಿಗೆ ಕಚೇರಿಯ ಹಿಂಬಾಗಿಲಿನಿಂದ ಕಣ್ಮರೆಯಾಗಿದ್ದಾನೆ.
ಒಳಗೆ ಹೋದ ಚಂದ್ರಶೇಖರ ರಾವ್ ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇದ್ದಾಗ ಅನುಮಾನಗೊಂಡ ಕಂಪನಿ ಸಿಬ್ಬಂದಿ ಮ್ಯಾನೇಜರ್ ಸೋನಿಯನ್ನು ವಿಚಾರಿಸಿದ್ದಾರೆ. ಅದಕ್ಕೆ ಬಹಳ ಚಾಣಾಕ್ಷತನದಿಂದ ಉತ್ತರಿಸಿದ ಪರೇಶ್ ಸೋನಿ ಮತ್ತು ಶ್ಯಾಮ್, ಆತ ಈಗ ಬರ್ತಾನೆ, ಫೋನ್ ಮಾಡ್ತೀನಿ ಎಂದು ಸುಮಾರು ಹೊತ್ತು ಟೈಮ್ ಪಾಸ್ ಮಾಡಿದ್ದಾರೆ. ಕೊನೆಗೆ ಆತನನ್ನು ನಾವೇ ಹುಡುಕಿಕೊಂಡು ಬರುವುದಾಗಿ ಹೇಳಿ ಇಬ್ಬರೂ ಕಚೇರಿಯಿಂದ ಹೊರನಡೆದು ಆ ಕ್ಷಣವೇ ಕಾಲ್ಕಿತ್ತಿದ್ದಾರೆ. ಮೂವರೂ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಪ್ಪಿಸಿಕೊಂಡಾಗಲೇ ತಮಗೆ ಕೋಟಿ ಕೋಟಿ ಮೋಸವಾಗಿರುವ ಅಸಲಿ ಸತ್ಯ ಕಂಪನಿ ಸಿಬ್ಬಂದಿಗೆ ಅರಿವಾಗಿದೆ.
ಖದೀಮರು ಕದ್ದೊಯ್ದಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳು ಮಲ್ಲೇಶ್ವರಂನಲ್ಲಿ ಕಚೇರಿಯನ್ನು ಬಾಡಿಗೆಗೆ ಪಡೆದು, ಅತ್ಯಂತ ಪೂರ್ವಯೋಜಿತವಾಗಿ ಸ್ಕೆಚ್ ಹಾಕಿ ಈ ಹೈಟೆಕ್ ಕಳ್ಳತನ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಈ ಕಿಲಾಡಿ ಕಳ್ಳರ ಪತ್ತೆಗಾಗಿ ಮಲ್ಲೇಶ್ವರ ಪೊಲೀಸರು ಹತ್ತಾರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಇಟ್ಟುಕೊಂಡು ತಮಿಳುನಾಡು ಹಾಗೂ ಮುಂಬೈ ಭಾಗದಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ.



