No menu items!
20.8 C
Munich
Sunday, July 26, 2026

ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ : ‘ಎಸ್‌ಬಿಐ’ನಲ್ಲಿ ಕರುಣಾನಿಧಿ ಮೊಮ್ಮಗಳ ದರ್ಪ, ಎಫ್‌ಐಆರ್ ದಾಖಲು

Must read

ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಮೊಮ್ಮಗಳು ಹಾಗೂ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಮಗಳು ಕಯಲ್ವಿಳಿ, ಚೆನ್ನೈನ ಎಸ್‌ಬಿಐ (SBI) ಬ್ಯಾಂಕ್ ಮ್ಯಾನೇಜರ್‌ಗೆ ಸಾರ್ವಜನಿಕವಾಗಿ ಕೆನ್ನೆಗೆ ಬಾರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಚೆನ್ನೈನ ಅಡ್ಯಾರ್‌ನಲ್ಲಿರುವ ಎಸ್‌ಬಿಐ ಎನ್‌ಆರ್‌ಐ ಬ್ರಾಂಚ್‌ನಲ್ಲಿ ಜುಲೈ 20 ರಂದು ನಡೆದಿದ್ದ ಈ ಘಟನೆಯ ದೃಶ್ಯಗಳು ಈಗ ತಡವಾಗಿ ಬಯಲಾಗಿವೆ.

ಚೆನ್ನೈನ ಪ್ರತಿಷ್ಠಿತ ಎಸ್‌ಬಿಐ ಬ್ಯಾಂಕ್‌ನಲ್ಲಿ ಹೈಡ್ರಾಮಾ

ಅಸಲಿಗೆ ಈ ಬ್ಯಾಂಕ್‌ ಇರುವುದು ಕಯಲ್ವಿಳಿ ಒಡೆತನದ ಬಿಲ್ಡಿಂಗ್‌ನಲ್ಲೇ. ಈ ಕಟ್ಟಡದಲ್ಲಿದ್ದ ಲಿಫ್ಟ್ ಪದೇಪದೇ ತಾಂತ್ರಿಕ ದೋಷದಿಂದ ಕೆಟ್ಟುಹೋಗುತ್ತಿತ್ತು. ಇದೇ ವಿಷಯವಾಗಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಕಟ್ಟಡದ ಮಾಲೀಕರಾದ ಕಯಲ್ವಿಳಿ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಜಟಾಪಟಿ ನಡೆಯುತ್ತಿತ್ತು.

ಲಿಫ್ಟ್ ಸಮಸ್ಯೆಗೆ ಕೆಂಡಾಮಂಡಲ, ಮ್ಯಾನೇಜರ್‌ಗೆ ನೇರ ವಾರ್ನಿಂಗ್!

ಲಿಫ್ಟ್ ನಿರ್ವಹಣೆ ವಿಚಾರವಾಗಿ ಮಾತನಾಡಲು ಕಯಲ್ವಿಳಿ ಅವರು ಜುಲೈ 20 ರಂದು ನೇರವಾಗಿ ಬ್ಯಾಂಕ್ ಮ್ಯಾನೇಜರ್ ಚೇಂಬರ್‌ಗೆ ಎಂಟ್ರಿ ಕೊಟ್ಟಿದ್ದರು. ಮ್ಯಾನೇಜರ್ ಜೊತೆ ಮಾತುಕತೆ ಶುರುಮಾಡಿದ ಕೆಲವೇ ಸೆಕೆಂಡ್‌ಗಳಲ್ಲಿ ವಾತಾವರಣ ಕಾವೇರಿದೆ. ಕಟ್ಟಡದ ಸಮಸ್ಯೆ ಬಗ್ಗೆ ಮ್ಯಾನೇಜರ್ ಪ್ರಶ್ನೆ ಮಾಡುತ್ತಿದ್ದಂತೆಯೇ ಕಯಲ್ವಿಳಿ ಅವರ ಕೋಪ ನೆತ್ತಿಗೇರಿದೆ. ಸೌಜನ್ಯದಿಂದ ಮಾತನಾಡುವುದನ್ನು ಬಿಟ್ಟು ಮ್ಯಾನೇಜರ್ ಮೇಲೆಯೇ ರೇಗಾಡಲು ಶುರುಮಾಡಿದ್ದಾರೆ.

ನಿಂತಿದ್ದ ಶೈಲಿ ಅಣಕಿಸಿ ಕೆನ್ನೆಗೆ ಬಾರಿಸಿದ ಪ್ರಭಾವಿ ಮಹಿಳೆ!

ಸಿಸಿಟಿವಿ ಫೂಟೇಜ್‌ನಲ್ಲಿ ಕಾಣಿಸುವಂತೆ, ಬ್ಯಾಂಕ್ ಮ್ಯಾನೇಜರ್ ನಿಂತಿದ್ದ ಭಂಗಿಯನ್ನೇ ಕಯಲ್ವಿಳಿ ಅಣಕಿಸಿ, ಅಪಹಾಸ್ಯ ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ, ಆಕ್ರೋಶದಲ್ಲಿ ಏಕಾಏಕಿ ಬ್ಯಾಂಕ್ ಮ್ಯಾನೇಜರ್ ಕೆನ್ನೆಗೆ ಬಾರಿಸಿದ್ದಾರೆ. ಜೊತೆಯಲ್ಲಿದ್ದ ವ್ಯಕ್ತಿಯೊಬ್ಬರು ತಕ್ಷಣ ಕಯಲ್ವಿಳಿ ಅವರ ಕೈ ಹಿಡಿದು ‘ಬೇಡ’ ಎಂದು ತಡೆಯಲು ಹರಸಾಹಸ ಪಟ್ಟಿರುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ.

ಎಸ್‌ಬಿಐ ಕಂಪ್ಲೇಂಟ್, ಕಯಲ್ವಿಳಿ ವಿರುದ್ಧ ಎಫ್‌ಐಆರ್ ಬಿಸಿ

ತಮ್ಮ ಅಧಿಕಾರಿಯ ಮೇಲಾದ ಈ ಹಲ್ಲೆಯನ್ನು ಎಸ್‌ಬಿಐ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ಬೆನ್ನಲ್ಲೇ ಎಸ್‌ಬಿಐ ಹಿರಿಯ ಅಧಿಕಾರಿಗಳು ಪೊಲೀಸ್ ಸ್ಟೇಷನ್‌ಗೆ ತೆರಳಿ ಅಧಿಕೃತ ದೂರು ನೀಡಿದ್ದಾರೆ. ಸರ್ಕಾರಿ ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿದ್ದು ಮತ್ತು ಕೆಲಸಕ್ಕೆ ಅಡ್ಡಿಪಡಿಸಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಕಯಲ್ವಿಳಿ ವಿರುದ್ಧ ಎಫ್‌ಐಆರ್ (FIR) ದಾಖಲು ಮಾಡಿದ್ದಾರೆ.

ಸಿಸಿಟಿವಿ ವಶಕ್ಕೆ ಪಡೆದ ಅಡ್ಯಾರ್ ಖಾಕಿ ಪಡೆ

ಸ್ವಾಧೀನಪಡಿಸಿಕೊಂಡ ಬ್ಯಾಂಕ್‌ನ ಸಿಸಿಟಿವಿ ಫೂಟೇಜ್ ಇಟ್ಟುಕೊಂಡು ಅಡ್ಯಾರ್ ಪೊಲೀಸರು ಈಗ ತನಿಖೆ ಚುರುಕುಗೊಳಿಸಿದ್ದಾರೆ. ರಾಜಕೀಯ ಪ್ರಭಾವ ಮತ್ತು ಕಟ್ಟಡದ ಮಾಲೀಕರಾಗಿದ್ದರೂ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯ ಮೇಲೆ ಕೈಮಾಡಿದ ಕಯಲ್ವಿಳಿ ಅವರಿಗೆ ಕಾನೂನಿನ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.

ನೆಟ್ಟಿಗರ ತೀವ್ರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಯಲ್ವಿಳಿ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಗುತ್ತಿವೆ. ರಾಜಕೀಯ ಹಿನ್ನೆಲೆ ಇದೆ ಎಂಬ ಕಾರಣಕ್ಕೆ ಸಾಮಾನ್ಯ ನೌಕರರ ಮೇಲೆ ಹೀಗೆ ದೌರ್ಜನ್ಯ ಎಸಗುವುದು ಎಷ್ಟು ಸರಿ? ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ, ಲಿಫ್ಟ್ ಗಲಾಟೆಗೆ ಬ್ಯಾಂಕ್ ಮ್ಯಾನೇಜರ್‌ಗೆ ಹೊಡೆದು ಮೆರೆದ ಕರುಣಾನಿಧಿ ಮೊಮ್ಮಗಳಿಗೆ ಈಗ ಲೀಗಲ್ ಶಾಕ್ ಖಚಿತವಾಗಿದೆ.

- Advertisement -spot_img

More articles

- Advertisement -spot_img

Latest article