ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶ ಹೆಮ್ಮೆಪಡುವಂತೆ ಮಾಡಬೇಕೆಂಬ ಕನಸು ಕಂಡಿದ್ದ 17 ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಒಬ್ಬರು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದ ಈ ಘಟನೆ ಇಡೀ ಕ್ರೀಡಾ ವಲಯವನ್ನೇ ದಿಗ್ಭ್ರಮೆಗೊಳಿಸಿದೆ. ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (VCA) ತಂಡಕ್ಕೆ ಆಯ್ಕೆಯಾಗದ ಕಾರಣ ತೀವ್ರ ನಿರಾಶೆಗೆ ಒಳಗಾಗಿದ್ದ ಈ ಯುವತಿ, ಕೊನೆಗೆ ಸಾವಿನ ಹಾದಿ ಹಿಡಿದಿರುವುದು ತೀವ್ರ ದುಃಖಕ್ಕೆ ಕಾರಣವಾಗಿದೆ.
ಅದಿತಿ ಚೌಖಂಡೆ ದುರಂತ ಅಂತ್ಯ
ಆತುರದ ನಿರ್ಧಾರ ತೆಗೆದುಕೊಂಡ ಈ ಪ್ರತಿಭಾವಂತ ಕ್ರಿಕೆಟರ್ ಹೆಸರು ಅದಿತಿ ಮೋರೇಶ್ವರ್ ಚೌಖಂಡೆ. ಮೂಲತಃ ಮಹಾರಾಷ್ಟ್ರದ ಅಕೋಲಾ ಮೂಲದವರಾದ ಅದಿತಿ, ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಒಂದೇ ಒಂದು ಧೇಯ್ಯದೊಂದಿಗೆ ತಮ್ಮ ತಾಯಿ ಹಾಗೂ ಸಹೋದರನ ಜೊತೆ ನಾಗ್‌ಪುರದ ಲಕ್ಷ್ಮಿ ನಗರದಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅವರು, ದಿನವಿಡೀ ಮೈದಾನದಲ್ಲಿ ಬೆವರು ಹರಿಸಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು.
ನಾನು ಸೆಲೆಕ್ಟ್ ಆಗಲಿಲ್ಲ: ಡೆತ್‌ನೋಟ್‌ನಲ್ಲೇನಿದೆ..?
ಸ್ಥಳಕ್ಕೆ ದೌಡಾಯಿಸಿದ ಬಜಾಜ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಅದಿತಿ ಬರೆದಿಟ್ಟಿದ್ದರೆನ್ನಲಾದ ಡೆತ್‌ನೋಟ್ ಸಿಕ್ಕಿದೆ. ನಾನು ತಂಡಕ್ಕೆ ಸೆಲೆಕ್ಟ್ ಆಗಲಿಲ್ಲ, ನನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯ ಮಾತುಗಳು ಅದರಲ್ಲಿವೆ. ಜೊತೆಗೆ, ತಂದೆ-ತಾಯಿಗೆ ಹೆಮ್ಮೆ ತರಲು ಸಾಧ್ಯವಾಗಲಿಲ್ಲವೆಂಬ ನೋವನ್ನು ತೋಡಿಕೊಂಡಿರುವ ಅವರು, ತಮ್ಮ ಸಹೋದರನಿಗೆ ಅಣ್ಣಾ, ನೀನು ತುಂಬಾ ಚೆನ್ನಾಗಿ ಆಡ್ತಿಯಾ.. ಅಪ್ಪ-ಅಮ್ಮನಿಗೆ ನೀನಾದರೂ ಒಳ್ಳೆ ಹೆಸರು ತಾ ಎಂದು ಬರೆದಿಟ್ಟು ಇಡೀ ಕುಟುಂಬವನ್ನೇ ಶೋಕಸಾಗರದಲ್ಲಿ ಮುಳುಗಿಸಿದ್ದಾರೆ.
ಎರಡು ವರ್ಷಗಳ ಸುದೀರ್ಘ ಪರಿಶ್ರಮ ನೀರು ಪಾಲು
ಕಳೆದ ಎರಡು ವರ್ಷಗಳಿಂದ ಅದಿತಿ ನಾಗ್‌ಪುರದ ಪ್ರಸಿದ್ಧ ‘ಸುರ್ವೆ ಕ್ರಿಕೆಟ್ ಅಕಾಡೆಮಿ’ಯಲ್ಲಿ ತರಬೇತಿ ಪಡೆಯುತ್ತಿದ್ದರು. ಬಿಸಿಸಿಐ (BCCI) ಸಂಯೋಜಿತ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಮುಂದಿನ ಹಂತಕ್ಕೆ ಏರಬೇಕೆಂಬುದು ಅವರ ಬಹುದೊಡ್ಡ ಕನಸಾಗಿತ್ತು. ತಮ್ಮ ಸಹೋದರ ಪ್ರಬಲ್ ಚೌಖಂಡೆ ಕೂಡ ಉದಯೋನ್ಮುಖ ಕ್ರಿಕೆಟರ್ ಆಗಿದ್ದರಿಂದ, ಇಬ್ಬರೂ ಜೊತೆಯಾಗಿಯೇ ಅಭ್ಯಾಸ ನಡೆಸುತ್ತಿದ್ದರು. ಆದರೆ, ಕಠಿಣ ಪರಿಶ್ರಮದ ನಂತರವೂ ಸೆಲೆಕ್ಷನ್ ಲಿಸ್ಟ್‌ನಲ್ಲಿ ಹೆಸರು ಬರದಿರುವುದು ಅದಿತಿ ಅವರನ್ನು ತೀವ್ರ ಮಾನಸಿಕ ಖಿನ್ನತೆಗೆ ದೂಡಿತ್ತು.
ಬುಧವಾರ ರಾತ್ರಿ ನಡೆದಿದ್ದೇನು?
ಬುಧವಾರ ರಾತ್ರಿ ಅದಿತಿ ತಮ್ಮ ತಾಯಿಯೊಂದಿಗೆ ಎಂದಿನಂತೆ ಊಟ ಮಾಡಿದ್ದರು. ಆ ನಂತರ ತಮ್ಮ ಕೊಠಡಿಗೆ ತೆರಳಿದ್ದರು. ಆದರೆ ಗುರುವಾರ ಬೆಳಿಗ್ಗೆ ತಾಯಿ ನೋಡಿದಾಗ ಅದಿತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಸಮಯದಲ್ಲಿ ಅವರ ಸಹೋದರ ನಾಗ್‌ಪುರದಿಂದ ಹೊರಗೆ ತೆರಳಿದ್ದರು. ಮಗಳ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಅಕೋಲಾದಲ್ಲಿ ಸಿವಿಲ್ ಗುತ್ತಿಗೆದಾರರಾಗಿರುವ ತಂದೆ ಹಾಗೂ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.
ಪೊಲೀಸರ ತನಿಖೆ ಚುರುಕು: ಎಲ್ಲಾ ಆಯಾಮದಲ್ಲೂ ಸರ್ಚ್
ವಿಷಯ ತಿಳಿಯುತ್ತಿದ್ದಂತೆಯೇ ಬಜಾಜ್ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಜರು ಪ್ರಕ್ರಿಯೆ ಮುಗಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಮುಖ ತಂಡಕ್ಕೆ ಆಯ್ಕೆಯಾಗದ ಕಾರಣ ಉಂಟಾದ ತೀವ್ರ ನಿರಾಶೆಯಿಂದಲೇ ಈ ಹೆಜ್ಜೆ ಇಟ್ಟಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯಕ್ಕೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟ್‌ಮಾರ್ಟಮ್ ವರದಿ ಬಂದ ನಂತರ ಮತ್ತಷ್ಟು ವಿವರ ಲಭ್ಯವಾಗಲಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಚೇತನ್ ಚೌಹಾಣ್ ತಿಳಿಸಿದ್ದಾರೆ.
ಕ್ರೀಡಾಪಟುಗಳ ಮೇಲಿನ ಆತಂಕಕಾರಿ ಮಾನಸಿಕ ಒತ್ತಡ
ಈ ದುರಂತ ಘಟನೆಯಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ತೀವ್ರ ಸ್ಪರ್ಧೆ ಮತ್ತು ಮಾನಸಿಕ ಒತ್ತಡದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇವಲ ಒಂದು ಸೆಲೆಕ್ಷನ್ ಲಿಸ್ಟ್ ಸಾಧನೆಯ ಅಳತೆಗೋಲಲ್ಲ ಹಾಗೂ ಸೋಲು-ಗೆಲುವುಗಳ ನಡುವೆ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂಬ ಜಾಗೃತಿ ಮೂಡಿಸುವ ಅಗತ್ಯವನ್ನು ಈ ದುರಂತ ಮತ್ತೊಮ್ಮೆ ಸಾರಿದೆ.



