No menu items!
14.1 C
Munich
Monday, May 11, 2026

ಹೇಳೋರಿಲ್ಲ, ಕೇಳೋರಿಲ್ಲ ; ಯಶವಂತಪುರದಲ್ಲಿ ವಲಸಿಗರ ಭೀಕರ ಗ್ಯಾಂಗ್ ವಾರ್- ರಾಡ್-ಕಲ್ಲುಗಳಿಂದ ರಸ್ತೆಯಲ್ಲೇ ಬಡಿದಾಟ

Must read

ಬೆಂಗಳೂರು ಅಂದ್ರೆ ಅದು ಶಾಂತಿ ಮತ್ತು ಸಹನೆಯ ತವರೂರು ಅನ್ನೋ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆ ಮಾತು ಸುಳ್ಳಾಗುತ್ತಿದೆಯೇನೋ ಅನ್ನೋ ಅನುಮಾನ ಕಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನಗರದ ಯಶವಂತಪುರ ಲಾರಿ ಸ್ಟ್ಯಾಂಡ್ ಪ್ರದೇಶದಲ್ಲಿ ನಡುರಸ್ತೆಯಲ್ಲೇ ನಡೆದ ಭೀಕರ ಗ್ಯಾಂಗ್ ವಾರ್ ಈಗ ಕನ್ನಡಿಗರ ನಿದ್ದೆಗೆಡಿಸಿದೆ. ವಲಸಿಗ ಕಾರ್ಮಿಕರ ಗುಂಪೊಂದು ಪರಸ್ಪರ ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ಬಡಿದಾಡಿಕೊಂಡಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಯಶವಂತಪುರದ ಈ ರಸ್ತೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದ್ದು,ರಸ್ತೆಯಲ್ಲಿ ಓಡಾಡೋ ಜನರಿಗೂ ಬೆಲೆ ಇಲ್ಲ, ಕಾನೂನು-ಸುವ್ಯವಸ್ಥೆಗೂ ಬೆಲೆ ಇಲ್ಲ ಅನ್ನೋ ಹಾಗೆ ಈ ಕಿರಾತಕರು ವರ್ತಿಸಿದ್ದಾರೆ. ಕೈಗೆ ಸಿಕ್ಕ ಸಿಕ್ಕ ಆಯುಧಗಳನ್ನು ಹಿಡಿದು ಒಬ್ಬರಿಗೊಬ್ಬರು ಪ್ರಾಣ ತೆಗೆಯೋಕೆ ಮುಂದಾದ ದೃಶ್ಯಗಳು ಎಂಥವರನ್ನೂ ಬೆಚ್ಚಿಬೀಳಿಸುತ್ತವೆ. ಈ ಗಲಾಟೆಯಿಂದಾಗಿ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರೋ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ನಗರದಲ್ಲಿ ಹೆಚ್ಚುತ್ತಿರುವ ವಲಸಿಗರ ಅತಿರೇಕದ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಇವರು ಇದನ್ನು ಕರ್ನಾಟಕ ಅಂದುಕೊಂಡಿದ್ದಾರೋ ಅಥವಾ ಉತ್ತರ ಭಾರತದ ಗುಂಡಾ ಸಂಸ್ಕೃತಿಯ ರಾಜ್ಯಗಳು ಎಂದುಕೊಂಡಿದ್ದಾರೋ..? ಎಂದು ರೂಪೇಶ್ ರಾಜಣ್ಣ ಕಿಡಿ ಕಾರಿದ್ದಾರೆ. ಇದು ಕನ್ನಡಿಗರ ಅಸ್ಮಿತೆ ಮತ್ತು ಭದ್ರತೆಯ ಮೇಲೆ ಆಗ್ತಿರೋ ದಾಳಿ ಅನ್ನೋದು ಅವರ ಮಾತಿನ ಆಂತರ್ಯ.

ಬೆಂಗಳೂರು ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿರೋ ರೂಪೇಶ್ ರಾಜಣ್ಣ, ಕೇವಲ ದೂರು ನೀಡೋದಕ್ಕೆ ಸೀಮಿತವಾಗದೆ “ಕನ್ನಡಿಗರೇ ಎಚ್ಚರ” ಅಂತ ಒಂದು ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬರೋರು ಇಲ್ಲಿನ ನೆಲದ ಕಾನೂನನ್ನು ಗೌರವಿಸಬೇಕು. ಅದನ್ನು ಬಿಟ್ಟು ಬೆಂಗಳೂರನ್ನ ಬಿಹಾರ್ ಅಥವಾ ರಾಜಸ್ಥಾನದ ಬೀದಿ ಕಾಳಗದ ಅಖಾಡ ಮಾಡಿಕೊಳ್ಳೋಕೆ ಹೊರಟರೆ ಪರಿಣಾಮ ನೆಟ್ಟಗಿರಲ್ಲ ಅನ್ನೋ ಸಂದೇಶ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಅಸಲಿಗೆ ಲಾರಿ ಸ್ಟ್ಯಾಂಡ್ ಬಳಿ ನಡೆದ ಈ ಗಲಾಟೆಗೆ ಕಾರಣ ಯಾವುದೋ ಸಣ್ಣ ವಿಚಾರವಂತೆ. ಆದರೆ ಆ ಸಣ್ಣ ಕಿಡಿ ಇಡೀ ರಸ್ತೆಯನ್ನೇ ಹೊತ್ತಿ ಉರಿಯುವಂತೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಇಷ್ಟೊಂದು ಕ್ರೂರವಾಗಿ ಬಡಿದಾಡಿಕೊಳ್ಳುವ ಧೈರ್ಯ ಇವರಿಗೆ ಎಲ್ಲಿಂದ ಬಂತು? ಪೊಲೀಸರ ಗಸ್ತು ಮತ್ತು ಭಯ ಇಲ್ಲಿ ಇಲ್ವೇ ಇಲ್ಲವಾ? ಅನ್ನೋದು ಸ್ಥಳೀಯರ ಪ್ರಶ್ನೆ. ಬೆಂಗಳೂರನ್ನು ಬೇರೆ ರಾಜ್ಯಗಳ ಕ್ರಿಮಿನಲ್ ಸಂಸ್ಕೃತಿಗೆ ಹೋಲಿಸುವಂತೆ ಮಾಡುತ್ತಿರೋ ಇಂತಹ ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಲೇಬೇಕು ಅನ್ನೋ ಆಗ್ರಹ ಕೇಳಿಬಂದಿದೆ.

ನೆಟ್ಟಿಗರಂತೂ ಈ ವಿಡಿಯೋ ನೋಡಿ ಕೆರಳಿ ಕೆಂಡವಾಗಿದ್ದಾರೆ. ನಾವು ಅತಿಥಿ ದೇವೋಭವ ಅಂತ ಜಾಗ ಕೊಟ್ಟರೆ, ಇವರು ನಮ್ಮ ಮನೆಯಲ್ಲೇ ಗಲಾಟೆ ಮಾಡ್ತಿದ್ದಾರೆ. ಇವರಿಗೆ ಪೊಲೀಸರ ಭಯ ಇಲ್ಲದ ಮೇಲೆ ಜನ ಸಾಮಾನ್ಯರು ನೆಮ್ಮದಿಯಿಂದ ಇರೋಕೆ ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ಧಾರೆ. ಲಾರಿ ಸ್ಟ್ಯಾಂಡ್ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸದಾ ಕಾಲ ಪೊಲೀಸ್ ಬಿಗಿ ಬಂದೋಬಸ್ತ್ ಇರಲೇಬೇಕು ಎಂಬ ಒತ್ತಾಯವನ್ನು ಕೂಡ ಮಾಡುತ್ತಿದ್ಧಾರೆ.

ಒಟ್ಟಿನಲ್ಲಿ, ಅತಿಯಾದ ವಲಸೆ ಮತ್ತು ಇಲ್ಲಿನ ಕಾನೂನನ್ನು ಗಾಳಿಗೆ ತೂರುವ ಪ್ರವೃತ್ತಿ ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕನ್ನಡಿಗರು ತಮ್ಮದೇ ನೆಲದಲ್ಲಿ ಅಸುರಕ್ಷಿತ ಭಾವನೆ ಅನುಭವಿಸಬೇಕಾಗಬಹುದು. ಪೊಲೀಸರು ಈ ಕೂಡಲೇ ಎಚ್ಚೆತ್ತುಕೊಂಡು, ಗಲಾಟೆ ಮಾಡಿದ ಆ ಗುಂಪನ್ನು ಹೆಡೆಮುರಿ ಕಟ್ಟಿ ಕಠಿಣ ಶಿಕ್ಷೆ ವಿಧಿಸಬೇಕಿದೆ.

- Advertisement -spot_img

More articles

- Advertisement -spot_img

Latest article