No menu items!
12.1 C
Munich
Wednesday, May 20, 2026

ತಮಿಳುನಾಡು ಸಿಎಂ ವಿಜಯ್‌ಗೆ ಪ್ರಚಾರದ ಹುಚ್ಚು ?ಸೆಲ್ಫಿ ವಿಡಿಯೋ ವೈರಲ್ – ಇಲ್ಲಿದೆ ಸತ್ಯ

Must read

ತಮಿಳುನಾಡಿನಲ್ಲಿ ಸಿನಿಮಾ ರಂಗದಿಂದ ಬಂದು ಇತ್ತೀಚೆಗಷ್ಟೇ ತಮಿಳುನಾಡಿನ ಸಿಎಂ ಸೀಟು ಅಲಂಕರಿಸಿರುವ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ದಳಪತಿ ವಿಜಯ್ ಅವರ ಅಧಿಕೃತ ಚೇಂಬರ್ ಒಳಗಡೆಯ ಸೆಕ್ಯೂರಿಟಿ ಪ್ರೋಟೋಕಾಲ್ ಮೇಲೀಗ ಪ್ರಶ್ನೆ ಎದ್ದಿದೆ. ಯಾಕೆಂದರೆ ಸಿಎಂ ವಿಜಯ್ ಸಭೆ ನಡೆಸುತ್ತಿದ್ದಾಗಲೇ ಸದ್ದಿಲ್ಲದೆ ಶೂಟ್ ಮಾಡಲಾದ ರಹಸ್ಯ ಸೆಲ್ಫಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ತಮಿಳುನಾಡು ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಒಳಗೆ ಮೊಬೈಲ್ ತಗೊಂಡು ಹೋಗಿ ವಿಡಿಯೋ ಮಾಡುವುದು ಇರಲಿ, ಒಂದು ಫೋಟೋ ಕ್ಲಿಕ್ ಮಾಡಬೇಕಾದರೂ ಹತ್ತಾರು ಪರ್ಮಿಷನ್ ಬೇಕು. ಹಿರಿಯ ಸಾಂವಿಧಾನಿಕ ಹುದ್ದೆಯಲ್ಲಿರುವವರ ಸುರಕ್ಷತೆ ಮತ್ತು ಸಚಿವಾಲಯದ ಗೌರವದ ದೃಷ್ಟಿಯಿಂದ ಈ ಹೈಪ್ರೊಫೈಲ್ ರೂಲ್ಸ್ ದೇಶಾದ್ಯಂತ ಜಾರಿಯಲ್ಲಿದೆ.

ಆದರೆ ಸಿಎಂ ವಿಜಯ್ ಚೇಂಬರ್‌ನಲ್ಲಿ ಈ ನಿಯಮ ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ಸಿಎಂ ಮುಖ ಕವರ್ ಆಗುವಂತೆ ವ್ಯಕ್ತಿಯೊಬ್ಬ ರಹಸ್ಯವಾಗಿ ಮಾಡಿರೋ ಸೆಲ್ಫಿ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಸಚಿವಾಲಯದ ಭದ್ರತಾ ಸಿಬ್ಬಂದಿಯ ನಿದ್ದೆ ಗೆಡಿಸಿದೆ.

ಮೊದಲಿಗೆ ಈ ವಿಡಿಯೋ ಹೊರಬಂದಾಗ, ಸಿಎಂ ಕಚೇರಿಯಲ್ಲಿರೋ ಯಾವುದೋ ಸರ್ಕಾರಿ ಅಧಿಕಾರಿಯೇ ಪ್ರಚಾರಕ್ಕಾಗಿ ಈ ‘ರೀಲ್ಸ್’ ಮಾಡಿ ಹರಿಬಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸರ್ಕಾರದ ಅತ್ಯಂತ ರಹಸ್ಯ ಮತ್ತು ಗಂಭೀರ ಸಭೆಗಳನ್ನು ಕೇವಲ ವೈಯಕ್ತಿಕ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಸಿಎಂ ವಿಜಯ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ವಿವಾದ ತಾರಕಕ್ಕೇರಿ ಸಿಎಂ ಕಚೇರಿಗೆ ಮುಜುಗುರ ತರುತ್ತಿದ್ದಂತೆ, ಈ ವಿಡಿಯೋದ ಅಸಲಿ ಸತ್ಯ ಕೊನೆಗೂ ಹೊರಬಿದ್ದಿದೆ.

ಅಸಲಿಗೆ ಆ ವಿಡಿಯೋ ಮಾಡಿದ್ದು ಯಾವುದೇ ಸರ್ಕಾರಿ ಅಧಿಕಾರಿಯಲ್ಲ. ತಮಿಳುನಾಡು ವಿಕಲಚೇತನರ ಹಕ್ಕುಗಳ ಒಕ್ಕೂಟದ (TNDFCT) ಅಧ್ಯಕ್ಷ ಹಾಗೂ ಖ್ಯಾತ ಸಮಾಜ ಸೇವಕ ಡಾ. ಪಿ. ಸಿಮ್ಮಚಂದ್ರನ್ ಅವರ ನೇತೃತ್ವದ ನಿಯೋಗವೊಂದು ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಸಚಿವಾಲಯದಲ್ಲಿ ಸಿಎಂ ವಿಜಯ್ ಅವರನ್ನು ಭೇಟಿಯಾಗಿತ್ತು. ಈ ವೇಳೆ ಸಿಮ್ಮಚಂದ್ರನ್ ಸಿಎಂ ಸೆಲ್ಫಿ ವಿಡಿಯೋ ಶೂಟ್ ಮಾಡಿಕೊಂಡಿದ್ದಾರೆ. ಖುದ್ದು ಸಿಎಂ ಅವರ ಅನುಮತಿ ಪಡೆದೇ ತಾವು ಈ ವಿಡಿಯೋ ಮಾಡಿದ್ದಾಗಿ ಸಿಮ್ಮಚಂದ್ರನ್ ಸ್ಪಷ್ಟಪಡಿಸಿದ್ದಾರೆ.

ಆದರೆ ಹೀಗೆ ಮಾಡಲಾದ ವಿಡಿಯೋ ಆ ನಂತರ ಸಂಘಟನೆಯ ಮತ್ತೊಬ್ಬ ಸದಸ್ಯ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದೇ ತಡ, ಅದು ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಇನ್ನೇನು..? ಸರ್ಕಾರದ ಅತ್ಯಂತ ರಹಸ್ಯ ಮತ್ತು ಗಂಭೀರ ಸಭೆಗಳನ್ನು ಕೇವಲ ವೈಯಕ್ತಿಕ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಸಿಎಂ ವಿಜಯ್ ವಿರುದ್ಧ ಮುಗಿಬಿದ್ದಿದ್ದವು. ವಿವಾದ ತಾರಕಕ್ಕೇರಿ ಸಿಎಂ ಕಚೇರಿಗೆ ಮುಜುಗರಕ್ಕೀಡು ಮಾಡಿತು.

ಈ ಹಿನ್ನೆಲೆ ಇದೊಂದು ಕೇವಲ ಅಂಧಾಭಿಮಾನ ಹಾಗೂ ಎಕ್ಸೈಟ್‌ಮೆಂಟ್‌ನಲ್ಲಿ ನಡೆದ ಘಟನೆಯಷ್ಟೇ. ಆದರೆ ರಾಜಕೀಯ ವಿರೋಧಿಗಳು ಇದರ ಸುತ್ತ ಸುಳ್ಳು ಕಥೆಗಳನ್ನು ಕಟ್ಟಿ, ಸಿಎಂ ಇಮೇಜ್ ಹಾಳು ಮಾಡಲು ವಿನಾಕಾರಣ ದೊಡ್ಡ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ವಿಕಲಚೇತನರ ಒಕ್ಕೂಟದ ನಾಯಕರು ತೀವ್ರ ಬೇಸರ ಹೊರಹಾಕಿದ್ದಾರೆ.

ಇತ್ತ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಇಟ್ಟುಕೊಂಡು ಭರ್ಜರಿ ಡಿಜಿಟಲ್ ವಾರ್ ಶುರುವಾಗಿದೆ. ವಿಜಯ್ ಅವರ ಫ್ಯಾನ್ಸ್ ನಮ್ಮ ಸಿಎಂ ಎಷ್ಟು ಸರಳ, ಜನಸಾಮಾನ್ಯರ ಜೊತೆ ಹೇಗೆ ಬೆರೆಯುತ್ತಾರೆ ನೋಡಿ ಎಂದು ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಆದರೆ ರಾಜಕೀಯ ವಿಶ್ಲೇಷಕರು ಮತ್ತು ಸೆಕ್ಯೂರಿಟಿ ಎಕ್ಸ್‌ಪರ್ಟ್‌ಗಳು ಮಾತ್ರ, ಅಭಿಮಾನದ ಹೆಸರಲ್ಲಿ ಸಿಎಂ ಕಚೇರಿಯ ಪ್ರೋಟೋಕಾಲ್ ಮುರಿಯುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಇಂದು ವಿಡಿಯೋ ಮಾಡಿದವರು ನಾಳೆ ಇನ್ನೇನು ಮಾಡಲ್ಲ? ಭದ್ರತಾ ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಏನು ಮಾಡುತ್ತಿದ್ದರು? ಎಂದು ಖಡಕ್ ಆಗಿ ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ, ಸಿಎಂ ಚೇಂಬರ್‌ನ ಈ ಸೆಲ್ಫಿ ವಿಡಿಯೋ ಹಂಗಾಮಾ ಡಿಜಿಟಲ್ ಯುಗದ ರಾಜಕಾರಣ ಮತ್ತು ಸೆಕ್ಯೂರಿಟಿ ಲೋಪದ ಬಗ್ಗೆ ದೊಡ್ಡ ಮಟ್ಟದ ಡಿಬೇಟ್‌ಗೆ ಮುನ್ನುಡಿ ಬರೆದಿದೆ. ವಿಜಯ್ ಈ ಮೂಲಕ ವಿರೋಧ ಪಕ್ಷಗಳಿಗೆ ಮಾತ್ರವಲ್ಲ ಟ್ರೋಲಿಗರಿಗೂ ಆಹಾರವಾದಂತಾಗಿದೆ.

- Advertisement -spot_img

More articles

- Advertisement -spot_img

Latest article