ರಾಜ್ಯದ ಆರ್ಥಿಕತೆ ಹದಗೆಟ್ಟಿದೆ, ಡಿಕೆಶಿ ಅವಕಾಶ ಸದುಪಯೋಗಪಡಿಸಿಕೊಳ್ಳಲಿ: ಅರವಿಂದ್ ಬೆಲ್ಲದ್
ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇದೀಗ ಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅದನ್ನು ಸರಿಪಡಿಸುವ ದೊಡ್ಡ ಸವಾಲು ಎದುರಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಅಭಿಪ್ರಾಯಪಟ್ಟರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಜನರು ಭಾರೀ ಬಹುಮತ ನೀಡಿದ್ದರೂ ಕಳೆದ ಮೂರು ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡುಬಂದಿಲ್ಲ ಎಂದು ಟೀಕಿಸಿದರು.
“136 ಸ್ಥಾನಗಳನ್ನು ನೀಡಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದ ಜನರು ರಾಜ್ಯದ ಅಭಿವೃದ್ಧಿ ಮತ್ತು ಸುಭಿಕ್ಷೆಯನ್ನು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಗಳು ಸಾಕಾರವಾಗಿಲ್ಲ. ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳು ಕಂಡುಬಂದಿಲ್ಲ” ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಮಾಣ ಹೆಚ್ಚಾಗಿದ್ದು, ಹಿಂದೆಂದೂ ಕಾಣದ ಮಟ್ಟದಲ್ಲಿ ಅಕ್ರಮಗಳು ನಡೆದಿವೆ ಎಂದು ಬೆಲ್ಲದ್ ಆರೋಪಿಸಿದರು. ಸರ್ಕಾರವು ಸಮಗ್ರ ಅಭಿವೃದ್ಧಿಗಿಂತ ಕೆಲ ವರ್ಗಗಳನ್ನು ಓಲೈಸುವ ರಾಜಕಾರಣಕ್ಕೆ ಹೆಚ್ಚು ಆದ್ಯತೆ ನೀಡಿದೆ ಎಂದು ಅವರು ಟೀಕಿಸಿದರು.
“ಎಲ್ಲಾ ವರ್ಗಗಳನ್ನೂ ಸಮಾನವಾಗಿ ಕಾಣುವ ಆಡಳಿತ ಅಗತ್ಯ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಆ ರೀತಿಯ ಆಡಳಿತ ಕಂಡುಬಂದಿಲ್ಲ. ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲಸ ಮಾಡಬೇಕಿತ್ತು” ಎಂದು ಹೇಳಿದರು. ಹೊಸ ಮುಖ್ಯಮಂತ್ರಿ ಆಗಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದ ಬೆಲ್ಲದ್, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.



