No menu items!
30.7 C
Munich
Saturday, June 20, 2026

ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಆಯ್ಕೆ: ಸಿಎಲ್ ಪಿ ಸಭೆಯಲ್ಲಿ ಅಧಿಕೃತ ಘೋಷಣೆ

Must read

ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಆಯ್ಕೆ: ಸಿಎಲ್ ಪಿ ಸಭೆಯಲ್ಲಿ ಅಧಿಕೃತ ಘೋಷಣೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗುವುದು ಬಹುತೇಕ ಖಚಿತವಾಗಿತ್ತು. ಇದೀಗ ಶಾಸಕಾಂಗ ಪಕ್ಷದ ಸಭೆಯ ಮೂಲಕ ಅವರ ಆಯ್ಕೆ ಅಧಿಕೃತಗೊಂಡಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳ ಕಾಲ ಉಪ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದರು.
ಸಿಎಲ್ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ನಿರ್ಣಯವನ್ನು ಸಿದ್ದರಾಮಯ್ಯ ಮಂಡಿಸಿದ್ದು, ಅದನ್ನು ಗೃಹ ಸಚಿವ ಜಿ. ಪರಮೇಶ್ವರ್ ಅನುಮೋದಿಸಿದ್ದಾರೆ. ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಶಾಸಕರು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಿದ್ದರು.
ಸಭೆಗೆ ಮುನ್ನ ವಿಧಾನಸೌಧದಲ್ಲಿರುವ ಕೊಠಡಿಯಲ್ಲಿ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್, ಬಳಿಕ ಸಿಎಲ್ಪಿ ಸಭೆಗೆ ಹಾಜರಾದ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಹಸ್ತಲಾಘವ ಮಾಡಿದ ದೃಶ್ಯ ಗಮನ ಸೆಳೆಯಿತು.
ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಶುಭ ಮುಹೂರ್ತದ ಆಧಾರದ ಮೇಲೆ ಈ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ನಡೆಯಲಿರುವ ಸರಳ ಸಮಾರಂಭದಲ್ಲಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮವು ಲೋಕಭವನದಲ್ಲಿ ಯಾವುದೇ ಆಡಂಬರವಿಲ್ಲದೆ ನಡೆಯಲಿದ್ದು, ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article