No menu items!
13.5 C
Munich
Saturday, July 25, 2026

ಕರುನಾಡಿನ ನಾಯಿಗಳನ್ನು ಹಿಡಿಯಲು ಅಸ್ಸಾಂನಿಂದ ಬರ್ತಿದ್ದಾರೆ ಜನ ; ರಾಜ್ಯದಲ್ಲಿ ಬೀದಿ ನಾಯಿ ಸಂತಾನಹರಣ ಅಭಿಯಾನ

Must read

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ನೆಮ್ಮದಿಯಾಗಿ ಓಡಾಡಲು ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಶಾಶ್ವತ ಮುಕ್ತಿ ನೀಡಲು ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಬೃಹತ್ ಸಂತಾನಹರಣ ಅಭಿಯಾನಕ್ಕೆ (Stray Dog Sterilisation) ಮಾಸ್ಟರ್ ಪ್ಲಾನ್ ರೂಪಿಸಿವೆ. ಆದರೆ, ಕೋಟಿ ಕೋಟಿ ರೂಪಾಯಿ ವೆಚ್ಚದ ಯೋಜನೆಗಳು, ಹೈಟೆಕ್ ಕೇಂದ್ರಗಳು ಸಿದ್ಧವಾಗಿದ್ದರೂ, ಕಾರ್ಯಾಚರಣೆ ಮಾತ್ರ ಅಸ್ಸಾಂನಿಂದ ಬರಬೇಕಾದ ‘ವಿಶೇಷ ಪಡೆ’ಯ ಹಾದಿ ಕಾಯುತ್ತಿದೆ.

ಕೋಟಿ ಕೋಟಿ ವೆಚ್ಚ, ಹೈಟೆಕ್ ಸೆಂಟರ್ ಸಿದ್ಧ

ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ವ್ಯಾಪ್ತಿಯಲ್ಲೇ ಬರೋಬ್ಬರಿ 25,000ಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ದಂಡನ್ನು ನಿಯಂತ್ರಿಸಲು ಪಾಲಿಕೆ ರೂ. 1.98 ಕೋಟಿ ವೆಚ್ಚದಲ್ಲಿ ದೊಡ್ಡ ಮಟ್ಟದ ಪ್ರಾಣಿ ಜನನ ನಿಯಂತ್ರಣ (ABC) ಟೆಂಡರ್ ನೀಡಿದೆ. ಜೊತೆಗೆ, ಶಿವಳ್ಳಿ ಬಳಿ ರೂ. 98 ಲಕ್ಷ ವೆಚ್ಚದಲ್ಲಿ ಏಕಕಾಲಕ್ಕೆ 160 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಬಹುದಾದ ಅತ್ಯಾಧುನಿಕ ಸಂತಾನಹರಣ ಕೇಂದ್ರವನ್ನೂ ನಿರ್ಮಿಸಲಾಗಿದೆ. ಇಲ್ಲಿ ಹೈಟೆಕ್ ಆಪರೇಷನ್ ಥಿಯೇಟರ್‌ಗಳು, ಪ್ರತ್ಯೇಕ ಚಿಕಿತ್ಸಾ ವಲಯಗಳು ಮತ್ತು ಕೀಟ ನಿಯಂತ್ರಣ ವ್ಯವಸ್ಥೆಗಳೆಲ್ಲವೂ ಮೇ ಅಂತ್ಯಕ್ಕೇ ರೆಡಿಯಾಗಿವೆ.

ಅಸ್ಸಾಂ ತಂಡವೇ ಯಾಕೆ ಬೇಕು?

ಪ್ರಾಣಿದಯಾ ಸಂಘಗಳ (AWBI) ಕಟ್ಟುನಿಟ್ಟಿನ ನಿಯಮಾವಳಿಗಳ ಪ್ರಕಾರ ಬೀದಿ ನಾಯಿಗಳನ್ನು ಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ನಾಯಿಗಳಿಗೆ ಯಾವುದೇ ರೀತಿ ಗಾಯ ಅಥವಾ ಹಿಂಸೆಯಾಗದಂತೆ ವೈಜ್ಞಾನಿಕ ವಿಧಾನದಲ್ಲಿ ಸುರಕ್ಷಿತವಾಗಿ ಹಿಡಿಯಬೇಕಾಗುತ್ತದೆ. ನಮ್ಮಲ್ಲಿ ಇಂತಹ ಕೌಶಲ್ಯವಿರುವ ಸಿಬ್ಬಂದಿಯ ಅಭಾವವಿರುವುದರಿಂದ, ಟೆಂಡರ್ ಪಡೆದ ಸಂಸ್ಥೆಗಳು ಅಸ್ಸಾಂನಿಂದ ಪರಿಣಿತ ‘ಡಾಗ್ ಕ್ಯಾಚರ್ಸ್’ ತಂಡವನ್ನು ಕರೆಸಿಕೊಳ್ಳುತ್ತಿವೆ. ದೊಡ್ಡ ಮಟ್ಟದ ಆಪರೇಷನ್‌ಗೆ ಕನಿಷ್ಠ 25 ಜನ ತರಬೇತಿ ಪಡೆದ ಸಿಬ್ಬಂದಿ ಅಗತ್ಯವಿದೆ.

ಅಧಿಕಾರಿಗಳು ಹೇಳೋದೇನು?

ಹಬ್ಬದ ಕಾರಣ ಅಸ್ಸಾಂನಿಂದ ಬರಬೇಕಿದ್ದ ಸಿಬ್ಬಂದಿ ಆಗಮನ ತುಸು ವಿಳಂಬವಾಗಿದೆ. ಅವರು ಇನ್ನು ಕೆಲವೇ ದಿನಗಳಲ್ಲಿ ಇಲ್ಲಿಗೆ ತಲುಪಲಿದ್ದಾರೆ. ಕೇಂದ್ರಕ್ಕೆ ಅಗತ್ಯವಿದ್ದ ನೀರು ಸರಬರಾಜು ಸಂಪರ್ಕ ಹಾಗೂ ನಾಯಿಗಳನ್ನು ಸುರಕ್ಷಿತವಾಗಿ ಸಾಗಿಸಲು ಬೇಕಾದ 4 ವಿಶೇಷ ಮಾರ್ಪಡಿಸಿದ ವಾಹನಗಳ ವ್ಯವಸ್ಥೆಯೂ ಈಗ ಸಂಪೂರ್ಣವಾಗಿ ಪೂರ್ಣಗೊಂಡಿದೆ. ತಂಡ ಬಂದ ತಕ್ಷಣವೇ ಬೃಹತ್ ಕಾರ್ಯಾಚರಣೆಗೆ ಅಫಿಶಿಯಲ್ ಚಾಲನೆ ಸಿಗಲಿದೆ” ಎಂದು HDMC ಅಭಿವೃದ್ಧಿ ಆಯುಕ್ತ ವಿಜಯಕುಮಾರ್ ಆರ್ ತಿಳಿಸಿದ್ದಾರೆ.

ಆರೈಕೆ ಮತ್ತು ಲಸಿಕೆ

ಈ ಅಭಿಯಾನದ ಮುಖ್ಯ ಉದ್ದೇಶ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸುವುದು ಮಾತ್ರವಲ್ಲ, ರೇಬೀಸ್ ನಂತಹ ಭಯಾನಕ ರೋಗ ಹರಡುವುದನ್ನು ತಡೆಯುವುದಾಗಿದೆ. ಹಿಡಿದ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬೀಸ್ ನಿರೋಧಕ ಲಸಿಕೆ ಹಾಕಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಗಂಡು ನಾಯಿಗಳನ್ನು 3 ದಿನ ಹಾಗೂ ಹೆಣ್ಣು ನಾಯಿಗಳನ್ನು 5 ದಿನಗಳ ಕಾಲ ಪ್ರತ್ಯೇಕ ಕೇಂದ್ರಗಳಲ್ಲಿಟ್ಟು ವಿಶೇಷ ಆರೈಕೆ ಮಾಡಲಾಗುತ್ತದೆ. ಅವು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ, ಅವುಗಳನ್ನು ಯಾವ ಜಾಗದಿಂದ ಹಿಡಿಯಲಾಗಿತ್ತೋ ಅದೇ ಜಾಗಕ್ಕೆ ತಂದು ಬಿಡಲಾಗುತ್ತದೆ.

ಗ್ರಾಮಸ್ಥರ ವಿರೋಧ ಮತ್ತು ಆಶ್ರಯ ತಾಣ

ಇನ್ನೊಂದೆಡೆ, ಸುಪ್ರೀಂ ಕೋರ್ಟ್ ಆದೇಶದಂತೆ ಶಾಲೆಗಳು, ಆಸ್ಪತ್ರೆಗಳಂತಹ ಸಾಂಸ್ಥಿಕ ಆವರಣಗಳಿಂದ ನಾಯಿಗಳನ್ನು ಸ್ಥಳಾಂತರಿಸಲು ಶಿವಳ್ಳಿ ಬಳಿ ರೂ. 2.57 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ನಾಯಿ ಆಶ್ರಯ ಸೌಲಭ್ಯ (Dog Shelter) ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೀತಿದೆ. ಆದರೆ, ಈಗಾಗಲೇ ಅಲ್ಲಿ ತ್ಯಾಜ್ಯದಿಂದ ಗ್ಯಾಸ್ ತಯಾರಿಸುವ ಬಿಪಿಸಿಎಲ್ ಸ್ಥಾವರ ಇರುವುದರಿಂದ ಶಿವಳ್ಳಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಈ ಭೂಮಿಗೆ ಹೋಗುವ ರಸ್ತೆ ಊರಿನ ಒಳಗಡೆಯಿಂದ ಹಾದುಹೋಗುವುದಿಲ್ಲ ಎಂಬುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ನಿರೀಕ್ಷೆಯಲ್ಲಿ ಸಾರ್ವಜನಿಕರು

ಪ್ರಸ್ತುತ ಸಲಕಿನಕೊಪ್ಪದಲ್ಲಿರುವ ಹಳೆಯ ಕೇಂದ್ರದಲ್ಲಿ ದಿನಕ್ಕೆ ಕೇವಲ 15ರಿಂದ 20 ನಾಯಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿದೆ. ಇದು ಸಮುದ್ರಕ್ಕೆ ಮಳೆ ನೀರು ಸುರಿದಂತೆ. ಹಾಗಾಗಿ, ಅಸ್ಸಾಂ ತಂಡ ಆದಷ್ಟು ಬೇಗ ಬಂದು ಈ ಬೃಹತ್ ಆಪರೇಷನ್ ಶುರುವಾದರೆ ಮಾತ್ರವೇ ಸಾರ್ವಜನಿಕರಿಗೆ ಬೀದಿ ನಾಯಿಗಳ ಕಾಟದಿಂದ ನಿಜವಾದ ರಿಲೀಫ್ ಸಿಗಲಿದೆ.

- Advertisement -spot_img

More articles

- Advertisement -spot_img

Latest article