ಕರ್ನಾಟಕ ರಾಜಕಾರಣದಲ್ಲಿ ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿ, ಅತಿ ದೀರ್ಘಾವಧಿ ಸಿಎಂ ಆಗಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಅಖಾಡದಲ್ಲಿ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ, ತಮ್ಮ ಐದು ದಶಕಗಳ ಚುನಾವಣಾ ಪಯಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಮಾಜಿ ಸ್ಪೀಕರ್ ದಿ. ಕೆ.ಆರ್.ಪೇಟೆ ಕೃಷ್ಣ ಅವರ 86ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಶಾಕಿಂಗ್ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವೇದಿಕೆ ಮೇಲಿದ್ದಂತೆಯೇ ಮುಂದಿನ ಎಲೆಕ್ಷನ್‌ಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳುತ್ತಿದ್ದಂತೆ, ಸಭೆಯಲ್ಲಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರು ತಕ್ಷಣವೇ ನೀವು ಇನ್ನು 10 ವರ್ಷ ರಾಜಕೀಯದಲ್ಲಿ ಇರಬೇಕು ಎಂದು ಗಟ್ಟಿಯಾಗಿ ಕೂಗಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಅಭಿಮಾನಿಗಳ ಒತ್ತಾಯಕ್ಕೂ ಜಗ್ಗದ ಸಮಾಜವಾದಿ ನಾಯಕ, ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದರು.
ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ ಚುನಾವಣೆಗೆ ಗುಡ್‌ಬೈ
ನಿವೃತ್ತಿಯ ನಿರ್ಧಾರಕ್ಕೆ ಸೂಕ್ತ ಕಾರಣ ನೀಡಿದ ಸಿದ್ದರಾಮಯ್ಯ, ಈಗ ನನಗೆ 79 ವರ್ಷ. ಈ ಸರ್ಕಾರದ ಅವಧಿ ಮುಗಿಯುವಾಗ ನನಗೆ 81-82 ವರ್ಷ ದಾಟಿರುತ್ತದೆ. 2028ರ ವೇಳೆಗೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣಗೊಳ್ಳುತ್ತವೆ. ಆ ವಯಸ್ಸಿನಲ್ಲಿ ಮೊದಲಿ ನಂತೆ ಉತ್ಸಾಹದಿಂದ ಕೆಲಸ ಮಾಡಲು ಆರೋಗ್ಯ ಸಹಕರಿಸುವುದಿಲ್ಲ. ಎಷ್ಟು ಅಂತ ಓಡಾಡೋದು? ಸಾಕು ಎನಿಸಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಇಂದಿನ ರಾಜಕಾರಣ ಕಲುಷಿತಗೊಂಡಿದೆ: ಬೇಸರ ವ್ಯಕ್ತಪಡಿಸಿದ ಮಾಜಿ ಸಿಎಂ
ಇದೇ ವೇಳೆ ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ತೀವ್ರ ಬೇಸರ ಹೊರಹಾಕಿದ ಸಿದ್ದರಾಮಯ್ಯ, 1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ನಾನು ರಾಜಕೀಯ ಆರಂಭಿಸಿದ್ದೆ. ಅಂದಿನ ಕಾಲದಲ್ಲಿ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಇವತ್ತು ರಾಜಕಾರಣ ಕಲುಷಿತಗೊಂಡಿದೆ. ನಾವೇ ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ, ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಚುನಾವಣಾ ಸ್ಪರ್ಧೆಯಿಂದ ದೂರ ಉಳಿಯಲಿದ್ದು, ಸಕ್ರಿಯ ರಾಜಕಾರಣದಲ್ಲಿದ್ದು ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದರು.
1983 ರಿಂದ 2023: ಚಾಮುಂಡೇಶ್ವರಿಯಿಂದ ವರುಣಾವರೆಗಿನ ಸುದೀರ್ಘ ಪಯಣ
1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಸಿದ್ದರಾಮಯ್ಯ, ಅಲ್ಲಿಂದ ಆರಂಭಿಸಿ ಒಟ್ಟು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಾಮುಂಡೇಶ್ವರಿಯಲ್ಲಿ 5 ಬಾರಿ ಗೆದ್ದು, ನಂತರ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ತಲುಪಿದ್ದರು. 2018ರಲ್ಲಿ ಬಾದಾಮಿಯಿಂದ ಗೆದ್ದು ವಿರೋಧ ಪಕ್ಷದ ನಾಯಕರಾಗಿದ್ದ ಅವರು, 2023ರಲ್ಲಿ ಪುತ್ರ ಯತೀಂದ್ರ ಬಿಟ್ಟುಕೊಟ್ಟ ವರುಣ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಎರಡು ಅವಧಿಯ ಸಿಎಂ, ದೀರ್ಘಾವಧಿ ಆಡಳಿತ ನಡೆಸಿದ ದಾಖಲೆ
ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಮೊದಲ ಅವಧಿಯಲ್ಲಿ 2013 ರಿಂದ 2018ರ ವರೆಗೆ 5 ವರ್ಷಗಳ ಪೂರ್ಣಾವಧಿ ಪೂರೈಸಿದ್ದ ಅವರು, ಎರಡನೇ ಅವಧಿಯಲ್ಲಿ 2023 ರಿಂದ 2026ರ ಮೇ ವರೆಗೆ ಸಿಎಂ ಆಗಿ ಒಟ್ಟು 8 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಹಿಂದೆಯೂ ನೀಡಿದ್ದರು ಕೊನೆಯ ಚುನಾವಣೆಯ ಸುಳಿವು
ಸಿದ್ದರಾಮಯ್ಯ ಅವರು ಚುನಾವಣಾ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2013ರ ಚುನಾವಣೆಯ ಸಂದರ್ಭದಲ್ಲಿ ಹಾಗೂ 2018ರಲ್ಲಿ ಚಾಮುಂಡೇಶ್ವರಿ-ಬಾದಾಮಿಯಿಂದ ಸ್ಪರ್ಧಿಸುವ ಮುನ್ನವೂ “ಇದೇ ನನ್ನ ಕೊನೆಯ ಚುನಾವಣೆ” ಎಂದು ಹೇಳಿದ್ದರು. ಆದರೆ, ಈ ಬಾರಿ ವಯಸ್ಸು, ಆರೋಗ್ಯ ಮತ್ತು ರಾಜಕೀಯ ಪಯಣ 50 ವರ್ಷ ಪೂರೈಸುವ ಮೈಲಿಗಲ್ಲನ್ನು ಮುಟ್ಟಿರುವುದರಿಂದ, 2028ರ ಎಲೆಕ್ಷನ್‌ಗೆ ನಿಲ್ಲದಿರಲು ಅವರು ದೃಢ ನಿರ್ಧಾರ ತಳೆದಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರನ ನಿರ್ಧಾರಕ್ಕೆ ಅಭಿಮಾನಿಗಳಲ್ಲಿ ಬೇಸರ
ದೇವಿಕೋಟಿ ಮತ್ತು ಅರಸು ಅವರ ಹಾದಿಯಲ್ಲಿ ‘ಸಾಮಾಜಿಕ ನ್ಯಾಯದ ಧ್ವನಿ’ಯಾಗಿ, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಆತ್ಮಗೌರವದ ಸಂಕೇತವಾಗಿ ಬೆಳೆದ ನಾಯಕ ಸಿದ್ದರಾಮಯ್ಯ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಚುನಾವಣಾ ರಾಜಕೀಯಕ್ಕೂ ನಿವೃತ್ತಿ ಘೋಷಿಸಿರುವುದು ಅವರ ಕೋಟ್ಯಂತರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ನಿರಾಶೆ ಮೂಡಿಸಿದೆ.



