No menu items!
36.4 C
Munich
Thursday, July 30, 2026

40 ಲಕ್ಷ ಕೊಟ್ಟರೆ ಮಾತ್ರ ಮದುವೆ, ವರನ ಎದುರು ಬೇಡಿಕೆ ; ಮಗಳಿಗೆ ಚಾಕುವಿನಿಂದ ಇರಿದ ಹಣದಾಹಿ ತಂದೆ

Must read

ಹತ್ತಾರು ಆಸೆಗಳನ್ನು ಹೊತ್ತು, ಕಷ್ಟಪಟ್ಟು ಓದಿ ದೊಡ್ಡ ಹುದ್ದೆಗೆ ಏರಿದ ಹೆಣ್ಣುಮಗಳಿಗೆ ಹೆತ್ತ ತಂದೆಯೇ ಶತ್ರುವಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಮಗಳ ಮದುವೆ ಮಾಡಿ ಕಳಿಸಬೇಕಾಗಿದ್ದ ಅಪ್ಪ, ಆಕೆಯನ್ನೇ ವ್ಯಾಪಾರದ ವಸ್ತುವನ್ನಾಗಿ ಮಾಡಲು ಹೊರಟಿದ್ದ. ಹಣದಾಸೆಗೆ ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿನ ಚೇಂಬರ್‌ಗೆ ನುಗ್ಗಿ, ಎದೆ-ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಭೀಕರ ಘಟನೆ ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

ಮಗಳ ಮದುವೆ, ಅಪ್ಪನ ದುರಾಸೆ

ಘಟನೆಯ ವಿವರಕ್ಕೆ ಹೋದರೆ, ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಲಕ್ಷ್ಮೀದುರ್ಗಾ ಕೆಲಸ ಮಾಡುತ್ತಿದ್ದರು. ನಾಲ್ಕು ಹೆಣ್ಣುಮಕ್ಕಳನ್ನು ಹೊಂದಿರುವ ಕ್ಯಾಬ್ ಚಾಲಕ ನಾಗೇಂದ್ರ, ಎರಡನೇ ಮಗಳಾದ ಲಕ್ಷ್ಮೀದುರ್ಗಾಗೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದ. ಇತ್ತೀಚೆಗಷ್ಟೇ ಹುಡುಗನ ಕಡೆಯವರು ಬಂದು ಹುಡುಗಿಯನ್ನು ನೋಡಿ, ಮದುವೆಗೆ ಸಂಪೂರ್ಣ ಸಮ್ಮತಿ ಸೂಚಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ತಂದೆ ನಾಗೇಂದ್ರನ ವಿಕೃತ ಬುದ್ಧಿ ಬಯಲಾಯ್ತು

40 ಲಕ್ಷ ರೂ. ಕೊಡಿ, ಮಗಳ ಸಂಬಳವೂ ನನಗೇ ಬೇಕು

ಹುಡುಗನ ಕಡೆಯವರು ಒಪ್ಪಿಕೊಳ್ಳುತ್ತಿದ್ದಂತೆ ತಂದೆ ನಾಗೇಂದ್ರ ತನ್ನ ವರಸೆ ಶುರು ಮಾಡಿದ. ನನ್ನ ಮಗಳನ್ನು ಕಷ್ಟಪಟ್ಟು ಓದಿಸಿ, ಅಸಿಸ್ಟೆಂಟ್ ಪ್ರೊಫೆಸರ್ ಮಾಡಿದ್ದೇನೆ. ಆಕೆಯನ್ನು ಮದುವೆಯಾಗಬೇಕಾದರೆ ನೀವು ನನಗೆ 40 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಹುಡುಗನ ಕಡೆಯವರ ಬಳಿ ನೇರವಾಗಿಯೇ ಡಿಮ್ಯಾಂಡ್ ಇಟ್ಟಿದ್ದ. ಅಷ್ಟೇ ಅಲ್ಲದೆ, ಮದುವೆಯಾದ ಮೇಲೆಯೂ ಆಕೆಯ ಪ್ರತಿ ತಿಂಗಳ ಸಂಬಳವನ್ನು ನನಗೇ ಕೊಡಬೇಕು ಎಂದು ಷರತ್ತು ವಿಧಿಸಿದ್ದ.

ಹಣದಾಸೆಗೆ ಎದುರಾಯ್ತು ಮನೆಯಲ್ಲೇ ಪ್ರತಿರೋಧ

ತಂದೆಯ ಈ ಅಸಹ್ಯಕರ ಹಣದಾಸೆ ಮತ್ತು ವಿಕೃತ ಬೇಡಿಕೆಯನ್ನು ಕಂಡು ಮಗಳು ಲಕ್ಷ್ಮೀದುರ್ಗಾ ಹಾಗೂ ತಾಯಿ ತೀವ್ರವಾಗಿ ವಿರೋಧಿಸಿದ್ದರು. ಕಷ್ಟಪಟ್ಟು ಸಂಪಾದಿಸುತ್ತಿರುವ ಮಗಳನ್ನು ಈ ರೀತಿ ಮಾರಾಟ ಮಾಡಲು ಹೊರಟಿದ್ದೀಯಾ? ಎಂದು ಪ್ರಶ್ನಿಸಿದ್ದರು. ಇದರಿಂದ ಕುಟುಂಬದಲ್ಲಿ ಪ್ರತಿದಿನ ಜಗಳ, ಕಿರಿಕಿರಿ ಶುರುವಾಗಿ ವೈಮನಸ್ಸು ತಾರಕಕ್ಕೇರಿತ್ತು. ಮಗಳ ವಿರುದ್ಧವೇ ಹಗೆತನ ಸಾಧಿಸಲು ಶುರುಮಾಡಿದ ನಾಗೇಂದ್ರ, ಆಕೆಯನ್ನು ಮುಗಿಸಿಬಿಡಲು ಸಂಚು ರೂಪಿಸಿದ್ದ.

ಮಾತನಾಡುವ ನೆಪದಲ್ಲಿ ಚೇಂಬರ್‌ಗೆ ಎಂಟ್ರಿ

ಕಳೆದ ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ, ಲಕ್ಷ್ಮೀದುರ್ಗಾ ಕರ್ತವ್ಯದಲ್ಲಿದ್ದ ಕಾಲೇಜಿಗೆ ನಾಗೇಂದ್ರ ಬಂದಿದ್ದ. ಹೆಚ್‌ಒಡಿ (HOD) ಕ್ಯಾಬಿನ್ ಬಳಿ ಹೋಗಿ, ನನ್ನ ಮಗಳ ಜೊತೆ ತುರ್ತಾಗಿ ಮಾತನಾಡಬೇಕು, ಆಕೆಯನ್ನು ಕರೆಯಿರಿ ಎಂದು ಹೇಳಿದ್ದ. ತಂದೆ ಬಂದಿದ್ದಾನೆ ಎಂದು ನಂಬಿ ಚೇಂಬರ್‌ಗೆ ಆಗಮಿಸಿದ ಲಕ್ಷ್ಮೀದುರ್ಗಾ ಮೇಲೆ, ನಾಗೇಂದ್ರ ಯಾವುದೇ ಮುನ್ಸೂಚನೆಯಿಲ್ಲದೆ ದಿಢೀರನೆ ಮುಗಿಬಿದ್ದಿದ್ದಾನೆ.

ಚಾಕುವಿನಿಂದ ಇರಿದು ಮಗಳನ್ನು ಮುಗಿಸಲು ಯತ್ನ

ತನ್ನ ಬಳಿ ಬಚ್ಚಿಟ್ಟುಕೊಂಡು ತಂದಿದ್ದ ಚಾಕುವನ್ನು ಹೊರತೆಗೆದ ನಾಗೇಂದ್ರ, ಮಗಳ ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಕ್ರೂರವಾಗಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹೋದ್ಯೋಗಿಗಳು ಮತ್ತು ಕಾಲೇಜು ಸಿಬ್ಬಂದಿ ಲಕ್ಷ್ಮೀದುರ್ಗಾ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸಹೋದ್ಯೋಗಿಯ ದೂರು, ಜೈಲು ಪಾಲಾದ ಕಟುಕ ಅಪ್ಪ

ಈ ಭೀಕರ ದಾಳಿಯ ಕುರಿತು ಕಾಲೇಜಿನ ಮತ್ತೊಬ್ಬ ಅಸಿಸ್ಟೆಂಟ್ ಪ್ರೊಫೆಸರ್ ನೀಡಿದ ದೂರಿನ ಮೇರೆಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ತಂದೆ ನಾಗೇಂದ್ರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಗಳು ಆಸ್ಪತ್ರೆಗೆ, ತಂದೆ ಜೈಲಿಗೆ: ಸಮಾಜ ತಲೆತಗ್ಗಿಸುವ ದುರಂತ

ಹೆತ್ತ ಮಗಳನ್ನು ಸಾಕಿ-ಸಲಹಿ ಅವರ ಬದುಕನ್ನು ದಡ ತಲುಪಿಸಬೇಕಾದ ತಂದೆಯೇ, ಹಣದಾಸೆಗೆ ಬಿದ್ದು ಆಕೆಯನ್ನೇ ಬಲಿ ಪಡೆಯಲು ಹೊರಟಿದ್ದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮಗಳು ಆಸ್ಪತ್ರೆಯ ಬೆಡ್ ಮೇಲಿದ್ದರೆ, ಆಕೆಯ ಕನ್ಯಾದಾನ ಮಾಡಬೇಕಿದ್ದ ತಂದೆ ಜೈಲಿನ ಕಂಬಿ ಎಣಿಸುತ್ತಿರುವುದು ದುರಂತವೇ ಸರಿ.

- Advertisement -spot_img

More articles

- Advertisement -spot_img

Latest article