Gen Zಗೆ ಪ್ರಧಾನಿ ಮೋದಿ ಬಂಪರ್ ಗಿಫ್ಟ್; ಮುಂದಿನ ವರ್ಷ 1 ಕೋಟಿ ಯುವಕರಿಗೆ AI ತರಬೇತಿ ಘೋಷಣೆ
ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವಜನರಿಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ದೇಶದ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದಾರೆ.
ಭಾರತದ ಅಭಿವೃದ್ಧಿಯ ಪಯಣದಲ್ಲಿ ಯುವಜನರನ್ನು ಕೇಂದ್ರಬಿಂದುವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ, ದೇಶದ ಯುವ ಪೀಳಿಗೆಯ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ. ಯುವಶಕ್ತಿ, ಮಹಿಳೆಯರು, ರೈತರು ಹಾಗೂ ಕಾರ್ಮಿಕರ ಸಹಕಾರದೊಂದಿಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಭಾರತದ ಕನಸುಗಳನ್ನು ನನಸಾಗಿಸಲು Gen Z ನೆರವಾಗಲಿದೆ’ ಎಂದು ಹೇಳಿದ ಪ್ರಧಾನಿ, ದೇಶದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸುಧಾರಣೆಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ನನ್ನ ದೇಶದ ಯುವಜನರು, ತಾಯಂದಿರು ಮತ್ತು ಸಹೋದರಿಯರು, ರೈತರು ಹಾಗೂ ಕಾರ್ಮಿಕರ ಮೇಲೆ ನನಗೆ ನಂಬಿಕೆಯಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಭಾರತದ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಗೆ ವಿಶೇಷ ಸ್ಥಾನ ನೀಡಲಾಯಿತು. ಗೀತೆಯ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೆಂಪುಕೋಟೆಯ ಕಾರ್ಯಕ್ರಮದಲ್ಲಿ ವಿಶೇಷವಾಗಿ ‘ವಂದೇ ಮಾತರಂ’ ಪ್ರಸ್ತುತಪಡಿಸಲಾಯಿತು.
ಧ್ವಜಾರೋಹಣದ ಬಳಿಕ ಸೇನಾ ಬ್ಯಾಂಡ್ ‘ವಂದೇ ಮಾತರಂ’ ಗೀತೆಯನ್ನು ನುಡಿಸಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಕೂಡ ಗೀತೆಯನ್ನು ಹಾಡಿದರು. ಬಳಿಕ ರಾಷ್ಟ್ರಗೀತೆ ಮೊಳಗಿತು.
ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದರು. ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ 2,500 ಬಾಲಕ ಮತ್ತು ಬಾಲಕಿಯರ ಕ್ಯಾಡೆಟ್ಗಳು, ‘ಮೈ ಭಾರತ್’ ಸ್ವಯಂಸೇವಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜ್ಞಾನಪಥದಲ್ಲಿ ಕುಳಿತು ಕ್ಯಾಡೆಟ್ಗಳು ‘ವಂದೇ ಮಾತರಂ’ ಎಂಬ ಪದದ ಆಕಾರವನ್ನು ರೂಪಿಸುವ ಮೂಲಕ ಗಮನ ಸೆಳೆದರು. ಯುವಶಕ್ತಿಯ ಭಾಗವಹಿಸುವಿಕೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಿತು.



