No menu items!
13.4 C
Munich
Friday, September 11, 2026

ಖರ್ಗೆ ಟ್ರಸ್ಟ್ʼಗೆ ಭೂಮಿ ಹಂಚಿಕೆ ಪ್ರಕರಣ; ಕ್ರಮ ಕೈಗೊಳ್ಳದ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ನಿಂದ ಶಾಕ್

Must read

ಖರ್ಗೆ ಟ್ರಸ್ಟ್ʼಗೆ ಭೂಮಿ ಹಂಚಿಕೆ ಪ್ರಕರಣ; ಕ್ರಮ ಕೈಗೊಳ್ಳದ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ನಿಂದ ಶಾಕ್

ಬೆಂಗಳೂರು: ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ಭೂಮಿ ಹಂಚಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ.
ದೂರುದಾರ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ದೂರು ದಾಖಲಾಗಿತ್ತು.
ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಸೇರಿದ ಟ್ರಸ್ಟ್ ಎಂಬ ಕಾರಣ ನೀಡಿ ಶೇ.50ರಷ್ಟು ರಿಯಾಯಿತಿ ಪಡೆಯಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಏರೋಸ್ಪೇಸ್ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದಿದ್ದರೂ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಟ್ರಸ್ಟ್ಗೆ ಭೂಮಿ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಬಿಟಿಎಂ ಬಡಾವಣೆಯಲ್ಲಿ ಶೇ.50ರಷ್ಟು ಸಬ್ಸಿಡಿ ಪಡೆದು ಎರಡು ಎಕರೆ ಬಿಡಿಎ ಜಮೀನು ಹಂಚಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ವಿವಾದ ಉಂಟಾದ ಬಳಿಕ ಜಮೀನನ್ನು ಹಿಂತಿರುಗಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಧೀನ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಬೇಕಿತ್ತು. ಆದರೆ, ಸಲ್ಲಿಸಲಾಗಿದ್ದ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ತನಿಖೆಗೆ ಆದೇಶಿಸದೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಎನ್ಎಸ್ಎಸ್ ಸೆಕ್ಷನ್ 223ರ ಅಡಿಯಲ್ಲಿ ನೇರವಾಗಿ ವಿಚಾರಣೆಗೆ ಮುಂದಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಾದ ಆಲಿಸಿದ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

- Advertisement -spot_img

More articles

- Advertisement -spot_img

Latest article