No menu items!
17.9 C
Munich
Tuesday, August 25, 2026

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್: ತಮಿಳುನಾಡಿಗೆ 15 ದಿನ 9 ಸಾವಿರ ಕ್ಯೂಸೆಕ್ ನೀರು

Must read

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್: ತಮಿಳುನಾಡಿಗೆ 15 ದಿನ 9 ಸಾವಿರ ಕ್ಯೂಸೆಕ್ ನೀರು

ನವದೆಹಲಿ: ಕರ್ನಾಟಕಕ್ಕೆ ಮತ್ತೆ ಕಾವೇರಿ ನೀರಿನ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಸೂಚಿಸಿದೆ.
ಇಂದು ನಡೆದ CWRC ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿಂದೆ 12,000 ಕ್ಯೂಸೆಕ್ ನೀರು ಹರಿಸುವಂತೆ ನೀಡಿದ್ದ ಸೂಚನೆಯನ್ನು ಇದೀಗ 9,000 ಕ್ಯೂಸೆಕ್ಗೆ ಇಳಿಸಲಾಗಿದೆ. ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಇದು ಮೂರನೇ ಆದೇಶವಾಗಿದೆ. ಮೊದಲಿಗೆ 3,000 ಕ್ಯೂಸೆಕ್, ಬಳಿಕ 12,000 ಕ್ಯೂಸೆಕ್ ಹಾಗೂ ಇದೀಗ 9,000 ಕ್ಯೂಸೆಕ್ ನೀರು ಹರಿಸಲು ಸೂಚಿಸಲಾಗಿದೆ.
CWRC ಸೂಚನೆಯಂತೆ ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿ ಸೆಕೆಂಡ್ಗೆ 9,000 ಕ್ಯೂಸೆಕ್ ನೀರಿನ ಹರಿವು ಖಚಿತಪಡಿಸಬೇಕು. 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು ಸುಮಾರು 11.66 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸಮಿತಿ ತಿಳಿಸಿದೆ.
ಕರ್ನಾಟಕದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಒಳಹರಿವು 30 ವರ್ಷದ ಸರಾಸರಿಗಿಂತ ಶೇ.49.18ರಷ್ಟು ಕಡಿಮೆಯಾಗಿದೆ ಎಂದು ರಾಜ್ಯದ ಪರವಾಗಿ ವಾದ ಮಂಡಿಸಲಾಗಿದೆ. ಜುಲೈ 29ರಿಂದ ಆಗಸ್ಟ್ 23ರವರೆಗೆ ಬಿಳಿಗುಂಡ್ಲುವಿನಲ್ಲಿ 2,16,993 ಕ್ಯೂಸೆಕ್ ನೀರು ಹರಿದುಬಂದಿದ್ದು, ಆದೇಶಿತ 1,84,500 ಕ್ಯೂಸೆಕ್ಗಿಂತ 32,493 ಕ್ಯೂಸೆಕ್ ಹೆಚ್ಚುವರಿ ನೀರು ಹರಿದಿದೆ.
ಆದರೆ, ಜಲಾಶಯಗಳ ಒಟ್ಟು ಒಳಹರಿವು 77,048 ಕ್ಯೂಸೆಕ್ನಿಂದ ಕೇವಲ 9,282 ಕ್ಯೂಸೆಕ್ಗೆ ಕುಸಿದಿದೆ. ಹೀಗಾಗಿ ಬಿಳಿಗುಂಡ್ಲುವಿನಲ್ಲಿ ನಿರಂತರವಾಗಿ 12,000 ಕ್ಯೂಸೆಕ್ ನೀರು ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ ಎಂದು ಕರ್ನಾಟಕ ವಾದಿಸಿದೆ.
ಸಂಕಷ್ಟ ಪರಿಸ್ಥಿತಿ ಪರಿಗಣಿಸಲು ಕರ್ನಾಟಕದ ಮನವಿ
ಖಾರಿಫ್ ಬೆಳೆಗಳಿಗೆ ಕರ್ನಾಟಕಕ್ಕೆ 56.67 ಟಿಎಂಸಿ ನೀರಿನ ಅಗತ್ಯವಿದ್ದು, ಈವರೆಗೆ ಕೇವಲ 5.06 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ತಿಳಿಸಿದೆ. ಕುಡಿಯುವ ನೀರಿಗಾಗಿ ಸುಮಾರು 38 ಟಿಎಂಸಿ ಹಾಗೂ ಪರಿಸರದ ಹರಿವಿಗಾಗಿ 10 ಟಿಎಂಸಿ ನೀರನ್ನು ಕಾಯ್ದಿರಿಸುವ ಅಗತ್ಯವಿದೆ ಎಂದು ವಾದಿಸಿದೆ.
ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿನ ನೀರಿನ ಸಂಗ್ರಹ, ಅಂತರ್ಜಲ ಲಭ್ಯತೆ ಹಾಗೂ ಈಶಾನ್ಯ ಮುಂಗಾರಿನಿಂದ ನಿರೀಕ್ಷಿತ ಒಳಹರಿವನ್ನೂ ಪರಿಗಣಿಸಬೇಕು. ಸಂಕಷ್ಟದ ಹೊರೆ ಕೇವಲ ಕರ್ನಾಟಕದ ಜಲಾಶಯಗಳ ಮೇಲೆಯೇ ಬೀಳಬಾರದು. ಕಾವೇರಿ ಕೊಳ್ಳೆಯ ಎರಡೂ ರಾಜ್ಯಗಳ ನಡುವೆ ಸಂಕಷ್ಟದ ಹೊರೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಕರ್ನಾಟಕ ಮನವಿ ಮಾಡಿತ್ತು.
ಇದಕ್ಕಾಗಿ ಬಿಳಿಗುಂಡ್ಲುವಿನಲ್ಲಿ 12,000 ಕ್ಯೂಸೆಕ್ ಬದಲಿಗೆ ದಿನಕ್ಕೆ 6,000 ಕ್ಯೂಸೆಕ್ಗೆ ಹರಿವು ಇಳಿಸಿ, ಆಗಸ್ಟ್ 27ರವರೆಗೆ ಮಾತ್ರ ನೀರು ಹರಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಕೋರಿತ್ತು.
ಇನ್ನೊಂದೆಡೆ, ತಮಿಳುನಾಡು ಬಾಕಿ ಉಳಿದಿರುವ 17.49 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವು ಕಾಯ್ದುಕೊಳ್ಳಲು ಕೆಆರ್ಎಸ್ ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.
ತಮಿಳುನಾಡಿನ ವಾದದ ಪ್ರಕಾರ, ಆಗಸ್ಟ್ 24ರಿಂದ ಸೆಪ್ಟೆಂಬರ್ 7ರವರೆಗಿನ 15 ದಿನಗಳಲ್ಲಿ ಬಿಳಿಗುಂಡ್ಲುವಿಗೆ ಒಟ್ಟು 28.386 ಟಿಎಂಸಿ ನೀರು ತಲುಪಬೇಕು. ಇದರಲ್ಲಿ 17.49 ಟಿಎಂಸಿ ಬಾಕಿ ಪ್ರಮಾಣ ಹಾಗೂ 10.896 ಟಿಎಂಸಿ ಪ್ರೊ-ರಾಟಾ ಪಾಲು ಸೇರಿದೆ.
ಕರ್ನಾಟಕದ ಜಲಾಶಯಗಳಲ್ಲಿನ ಪ್ರಸ್ತುತ ನೀರಿನ ಸಂಗ್ರಹ, ಕೆಆರ್ಎಸ್ ಮತ್ತು ಕಬಿನಿಯ ಮೇಲ್ಭಾಗದಲ್ಲಿರುವ CWC ಕೇಂದ್ರಗಳ ಅಂಕಿ-ಅಂಶಗಳು ಹಾಗೂ ಮುಂದಿನ ಏಳು ದಿನಗಳ ಒಳಹರಿವಿನ ಮುನ್ಸೂಚನೆಗಳನ್ನು ಪರಿಗಣಿಸಿದ ಬಳಿಕ CWRC, ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ಬಿಳಿಗುಂಡ್ಲುವಿನಲ್ಲಿ 9,000 ಕ್ಯೂಸೆಕ್ ಹರಿವು ಖಚಿತಪಡಿಸುವಂತೆ ಸೂಚಿಸಿದೆ.
ಇನ್ನು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲೂ ಸವಾಲು ಮುಂದುವರಿಯಲಿದೆ. ನಾಳೆ CWMA ಸಭೆ ನಡೆಯಲಿದ್ದು, ಮುಂದಿನ ಸೋಮವಾರ ಸುಪ್ರೀಂ ಕೋರ್ಟ್ನಲ್ಲೂ ಕಾವೇರಿ ನೀರು ವಿಚಾರಣೆ ನಡೆಯಲಿದೆ.

- Advertisement -spot_img

More articles

- Advertisement -spot_img

Latest article