ತಮಿಳುನಾಡು ಜನರಿಗೆ ವಿಜಯ್ ಸರ್ಕಾರದ ಬಂಪರ್ ಗಿಫ್ಟ್; ವರ್ಷಕ್ಕೆ 3 ಎಲ್ಪಿಜಿ ಸಿಲಿಂಡರ್ ಉಚಿತ, 1.30 ಕೋಟಿ ಕುಟುಂಬಗಳಿಗೆ ಲಾಭ
ಚೆನ್ನೈ: ತಮಿಳುನಾಡು ಜನರಿಗೆ ವರ್ಷಕ್ಕೆ ಮೂರು ಎಲ್ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಹೆಸರಿನಲ್ಲಿ ತಮಿಳುನಾಡು ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗಲಿದ್ದು, ಇದರಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಯೋಜನೆಗೆ ಅಂದಾಜು 4,000 ಕೋಟಿ ರೂ. ವೆಚ್ಚವಾಗಲಿದೆ.
ಯೋಜನೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಈ ಯೋಜನೆಯು ವಾರ್ಷಿಕ ಆದಾಯ 2.5 ಲಕ್ಷ ರೂ. ಮೀರದ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳು ಹಾಗೂ ಅಂಗವಿಕಲ ವ್ಯಕ್ತಿಗಳ ಕುಟುಂಬಗಳನ್ನು ಒಳಗೊಳ್ಳುತ್ತದೆ ಎಂದು ವಿವರಿಸಿದರು. ಅಡುಗೆ ಅನಿಲ ಸಿಲಿಂಡರ್ ವೆಚ್ಚವನ್ನು ಮರುಪಾವತಿಸಲಾಗುತ್ತಿದ್ದು, ಕಂಪನಿಗಳ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಬುಕಿಂಗ್ ಮತ್ತು ವಿತರಣೆಯ ಬಳಿಕ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಕೊಲ್ಲಿ ರಾಷ್ಟ್ರಗಳ ಸಂಘರ್ಷದ ಪರಿಣಾಮ ಅನಿಲ ಪೂರೈಕೆಯಲ್ಲಿ ಅಡಚಣೆ ಹಾಗೂ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆ ಬಿದ್ದಿದೆ ಎಂದು ಗಮನ ಸೆಳೆದ ಅವರು, ಇದರಿಂದಾಗಿ ಅನೇಕ ಕುಟುಂಬಗಳು ಪರ್ಯಾಯ ಇಂಧನಗಳತ್ತ ಮುಖ ಮಾಡಿರುವುದನ್ನು ಪರಿಗಣಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ‘ವೆಟ್ರಿ ಪಯಣಂ’ ಯೋಜನೆಯ ವ್ಯಾಪ್ತಿ ವಿಸ್ತರಿಸುವುದಾಗಿ ಘೋಷಿಸಿದ ಅವರು, ಮಹಿಳೆಯರು ಮಾತ್ರವಲ್ಲದೆ ತೃತೀಯ ಲಿಂಗಿಗಳಿಗೂ ಉಚಿತ ಬಸ್ ಪ್ರಯಾಣ ಯೋಜನೆ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು. ಮಹಾತ್ಮ ಗಾಂಧಿ ಜನ್ಮದಿನಾಚರಣೆಯಾದ ಅಕ್ಟೋಬರ್ 2ರಿಂದ ಈ ಯೋಜನೆ ವಿಸ್ತರಣೆಯಾಗಲಿದ್ದು, ಎಕ್ಸ್ಪ್ರೆಸ್, ಎಲ್ಎಸ್ಎಸ್ ಮತ್ತು ಡಿಲಕ್ಸ್ ಹಾಗೂ ಅಂತರ್ ಜಿಲ್ಲಾ ಬಸ್ಗಳಲ್ಲೂ ಫಲಾನುಭವಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.
‘ವೆಟ್ರಿ ಪಯಣಂ’ ಯೋಜನೆಯ ಅನುಷ್ಠಾನದಿಂದ ರಾಜ್ಯ ಖಜಾನೆಗೆ ವಾರ್ಷಿಕ ಸುಮಾರು 6,000 ಕೋಟಿ ರೂ. ವೆಚ್ಚವಾಗಲಿದ್ದು, ಈ ಯೋಜನೆಗೆ ಯಾವುದೇ ಆದಾಯ ಮಿತಿ ಅಥವಾ ಪ್ರವಾಸಗಳ ಸಂಖ್ಯೆಯ ಮಿತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.



