ರೇಷ್ಮಾ ಖುರೇಷಿ. ಫ್ಯಾಷನ್ ಲೋಕದಲ್ಲಿ ಹೊಸ ಭಾಷ್ಯ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ . ರೇಷ್ಮಾ ಖುರೇಷಿ ಅವರಿಗೆ ಆಗಿನ್ನೂ 17ರ ಹರೆಯ. ಮೂವರು ಕಿರಾತಕರು ಅವರ ಬಾಳನ್ನೇ ನರಕ ಮಾಡಿಬಿಟ್ಟಿದ್ರು. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಆ್ಯಸಿಡ್ ಎರಚಿದ್ದರು. ಆ ಮೂವರು ಕ್ರೂರಿಗಳಲ್ಲಿ ರೇಷ್ಮಾ ಅವರ ತಂಗಿಯ ಪತಿಯೂ ಇದ್ದ.
ಕಾಲೇಜಿಗೆ ಹೋಗುತ್ತಿದ್ದ ರೇಷ್ಮಾ ಖುರೇಷಿ, ಪರೀಕ್ಷೆ ಬರೆಯಲೆಂದು ಅಲಹಾಬಾದ್ ಗೆ ಬಂದಿದ್ರು. ಆದಷ್ಟು ಬೇಗ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಬೇಕೆಂಬುದು ಅವರ ಮಹದಾಸೆ. ಆದ್ರೆ ಆ ದಿನ ರೇಷ್ಮಾ ಖುರೇಷಿ ಅವರ ಬದುಕು ಬದಲಾಗಿಹೋಯ್ತು. ಆ್ಯಸಿಡ್ ದಾಳಿಗೆ ತುತ್ತಾಗಿ ಅವರ ಮುಖ ಸಂಪೂರ್ಣ ಸುಟ್ಟು ಹೋಯ್ತು. ಅಷ್ಟೇ ಅಲ್ಲ ಶಾಶ್ವತವಾಗಿ ರೇಷ್ಮಾ ತಮ್ಮ ಒಂದು ಕಣ್ಣನ್ನು ಕಳೆದುಕೊಂಡ್ರು.
ಒಂದು ವರ್ಷ ದೈಹಿಕ ಮತ್ತು ಮಾನಸಿಕವಾಗಿ ಅಪಾರ ನೋವುಂಡ ರೇಷ್ಮಾ, ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗಾಗಿಯೇ ಭಾರತದಲ್ಲಿರುವ ‘ಮೇಕ್ ಲವ್ ನಾಟ್ ಸ್ಕೇರ್ಸ್’ ಎಂಬ NGO ಸೇರಿಕೊಂಡ್ರು. ಭಾರತದಲ್ಲಿ ಆ್ಯಸಿಡ್ ಅನ್ನೋದು ಲಿಪ್ಸ್ಟಿಕ್ನಷ್ಟು ಸುಲಭವಾಗಿ ದೊರೆಯುತ್ತಿದೆ ಅನ್ನೋ ಕಹಿ ಸತ್ಯವನ್ನುಳ್ಳ ಸಂದೇಶವನ್ನು ಕಳೆದ ವರ್ಷ ವಿಶಿಷ್ಟವಾಗಿ ಜನರಿಗೆ ತಲುಪಿಸಿದ ರೇಷ್ಮಾ ಮನೆಮಾತಾದ್ರು.
ಇದೀಗ ರೇಷ್ಮಾ ಖುರೇಷಿ ಮತ್ತೊಂದು ಸಾಧನೆ ಮಾಡಿದ್ದಾರೆ. ಗೌರವಾನ್ವಿತ ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ರೇಷ್ಮಾ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಫ್ಯಾಷನ್ ಅನ್ನೋ ಪದಕ್ಕೆ ಹೊಸ ಅರ್ಥವನ್ನೇ ಕೊಟ್ಟಿದ್ದಾರೆ. ಆ್ಯಸಿಡ್ ದಾಳಿ ಸಂತ್ರಸ್ಥೆಯರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ.
ಅರ್ಧಕ್ಕೆ ನಿಂತಿರುವ ಓದನ್ನು ಮುಂದುವರಿಸಿದ್ದಾರೆ. ಆ್ಯಸಿಡ್ ದಾಳಿ ಸಂತ್ರಸ್ಥೆಯರಿಗೆಲ್ಲ ಮಾದರಿಯಾಗಿದ್ದಾರೆ. ನೋಡಿ, ನಾವ್ಯಾಕೆ ನಮ್ಮ ಜೀವನವನ್ನು ಎಂಜಾಯ್ ಮಾಡಬಾರದು? ನಮಗೆ ಬಂದಿರುವ ಈ ಸ್ಥಿತಿಗೆ ನಾವು ಕಾರಣರಲ್ಲ. ಇದರಲ್ಲಿ ನಮ್ಮ ತಪ್ಪಿಲ್ಲ. ಇದನ್ನೆಲ್ಲ ಮರೆತು ನಾವು ಬದುಕಿನಲ್ಲಿ ಮುಂದೆ ಸಾಗಬೇಕು” ಅನ್ನೋದು ರೇಷ್ಮಾ ಅವರ ಅಭಿಪ್ರಾಯ.
ಆ್ಯಸಿಡ್ ದಾಳಿಗಳು ವಿವಾಹ ನಿರಾಕರಣೆ, ಲೈಂಗಿಕ ಸಂಬಂಧಕ್ಕೆ ನಿರಾಕರಣೆ, ವರದಕ್ಷಿಣೆ ಕಿರುಕುಳಕ್ಕೆ ನಡೆಯುತ್ತಿವೆ. ಭೂಮಿ, ಆಸ್ತಿ ಪಾಸ್ತಿ ವಿವಾದ, ಉದ್ಯಮದಲ್ಲಿನ ಭಿನ್ನಾಭಿಪ್ರಾಯದ ಕಾರಣಗಳಿಂದ್ಲೂ ಶೇ.20ರಷ್ಟು ದಾಳಿಗಳು ನಡೆಯುತ್ತವೆ. ದಾಳಿಗೊಳಗಾದವರಲ್ಲಿ ಕೆಲವರು ಬದುಕುಳಿದ್ರೆ, ಇನ್ನು ಕೆಲವರು ಪ್ರಾಣ ಕಳೆದುಕೊಳ್ತಾರೆ. ಆದರೆ, ಯಾವುದೇ ಕಾರಣಕ್ಕೂ ಎದೆಗುಂದಬಾರದು ರೇಷ್ಮಾ ಅವರ ನಿಲುವು.
ಇನ್ನು ಆ್ಯಸಿಡ್ ದಾಳಿಗೆ ಒಳಗಾದವರೂ ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕತ್ತಲಲ್ಲಿ, ಒಂಟಿಯಾಗಿ ಬದುಕು ಸವೆಸುತ್ತಾರೆ. ಕೆಲವರು ಬದುಕಿನ ಮೇಲೆ ಭರವಸೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ರೇಷ್ಮಾ ಖುರೇಷಿ ಮಾತ್ರ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಧೀರೆ.
ರೇಷ್ಮಾ ಖುರೇಷಿ ಅವರು ತಾವೊಬ್ಬ ಆ್ಯಸಿಡ್ ಸಂತ್ರಸ್ಥೆ ಎಂದು ಮುಜುಗರಪಟ್ಟುಕೊಳ್ಳದೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಅವರ ಹೆಜ್ಜೆ ಮತ್ತಷ್ಟು ವಿಸ್ತಾರವಾಗಲಿ ಅಲ್ಲವೇ.