ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಧರಿಸಬಾರದಂತೆ! ಯಾಕೆ ಗೊತ್ತೇ?
ಮಹಿಳೆಯರ ದಿನನಿತ್ಯದ ಉಡುಪಿನಲ್ಲಿ ಬ್ರಾ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಗಾತ್ರದ ಬ್ರಾ ಧರಿಸುವುದು ದೇಹದ ಆಕಾರವನ್ನು ಕಾಪಾಡಲು ಹಾಗೂ ಆರಾಮ ನೀಡಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ಮಲಗುವಾಗ ಬ್ರಾ ಧರಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಹಲವಾರು ಮಹಿಳೆಯರಲ್ಲಿ ಕಂಡುಬರುತ್ತದೆ. ತಜ್ಞರ ಪ್ರಕಾರ, ರಾತ್ರಿ ವೇಳೆ ಬಿಗಿಯಾದ ಬ್ರಾ ಧರಿಸಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ ಅಲ್ಲ.
ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಬೆವರು ಹೆಚ್ಚಾಗಿ ಬರುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳ ಅಪಾಯ ಹೆಚ್ಚಾಗಬಹುದು. ಇದರ ಪರಿಣಾಮವಾಗಿ ಚರ್ಮದಲ್ಲಿ ಉರಿ, ದದ್ದು, ಅಲರ್ಜಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಈ ಭಾಗದ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವೆಂದು ತಜ್ಞರು ಸೂಚಿಸುತ್ತಾರೆ.
ಚರ್ಮ ಮತ್ತು ರಕ್ತಸಂಚಾರಕ್ಕೆ ಸಮಸ್ಯೆ
ದಿನಪೂರ್ತಿ ಬಿಗಿಯಾದ ಬ್ರಾ ಧರಿಸಿದ ಬಳಿಕ ರಾತ್ರಿ ಅದನ್ನು ತೆಗೆದು ಮಲಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹೆಚ್ಚು ಸಮಯ ಬ್ರಾ ಧರಿಸುವುದರಿಂದ ಚರ್ಮಕ್ಕೆ ಗಾಳಿ ಸರಿಯಾಗಿ ತಲುಪದೆ ತೇವಾಂಶ ಹೆಚ್ಚಾಗಬಹುದು. ಇದರಿಂದ ಚರ್ಮದ ಸಮಸ್ಯೆಗಳು ಹಾಗೂ ಕೆಲವೊಮ್ಮೆ ಕಪ್ಪು ಮಚ್ಚೆಗಳೂ ಕಾಣಿಸಿಕೊಳ್ಳಬಹುದು.
ಇದೇ ವೇಳೆ ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಆ ಭಾಗದಲ್ಲಿ ರಕ್ತಸಂಚಾರ ಸರಿಯಾಗಿ ನಡೆಯದಿರುವ ಸಾಧ್ಯತೆಯೂ ಇದೆ. ಇದರಿಂದ ನೋವು, ಉಬ್ಬರ ಉಂಟಾಗಬಹುದು. ಜೊತೆಗೆ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
ನಿದ್ರೆಯ ಗುಣಮಟ್ಟಕ್ಕೂ ಪರಿಣಾಮ
ನಿದ್ರೆ ಮಾಡುವಾಗ ದೇಹ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕು. ಆದರೆ ಬಿಗಿಯಾದ ಉಡುಪುಗಳು ದೇಹದಲ್ಲಿ ಉಷ್ಣತೆ ಹಾಗೂ ಬೆವರನ್ನು ಹೆಚ್ಚಿಸಬಹುದು. ಇದರಿಂದ ನಿದ್ರೆ ಸರಿಯಾಗಿ ಆಗದೆ ಬೆಳಿಗ್ಗೆ ದಣಿವು ಮತ್ತು ಆಯಾಸ ಉಂಟಾಗುವ ಸಾಧ್ಯತೆ ಇದೆ.
ಆದರೆ ಇದು ಎಲ್ಲಾ ಮಹಿಳೆಯರಿಗೂ ಒಂದೇ ರೀತಿಯಲ್ಲಿ ಅನ್ವಯಿಸುವುದಿಲ್ಲ. ಕೆಲ ಮಹಿಳೆಯರಿಗೆ ಬ್ರಾ ಧರಿಸಿದರೆ ಮಾತ್ರ ಆರಾಮವಾಗುತ್ತದೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿರುವವರು ಅಥವಾ ಹೆಚ್ಚಿನ ಬೆಂಬಲ ಅಗತ್ಯವಿರುವವರು ಸಡಿಲವಾದ ಸ್ಲೀಪ್ ಬ್ರಾ, ಕಾಟನ್ ಅಥವಾ ಸಾಫ್ಟ್ ಫ್ಯಾಬ್ರಿಕ್‌ನ ಬ್ರಾಗಳನ್ನು ಧರಿಸಿ ಮಲಗಬಹುದು.
ಬ್ರಾ ಧರಿಸಿ ಮಲಗಿದರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ?
ಕೆಲವರು ಬ್ರಾ ಧರಿಸಿ ಮಲಗುವುದರಿಂದ ಬ್ರೆಸ್ಟ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಆದರೆ ಈ ಕುರಿತು ಸ್ಪಷ್ಟವಾದ ವೈಜ್ಞಾನಿಕ ಸಾಕ್ಷ್ಯಗಳು ಇನ್ನೂ ಲಭ್ಯವಿಲ್ಲ. ಆದರೂ ದೇಹದ ಆರಾಮಕ್ಕಾಗಿ ರಾತ್ರಿ ಬ್ರಾ ತೆಗೆದು ಮಲಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಗಮನದಲ್ಲಿರಲಿ ಈ ಸಲಹೆಗಳು
ಸರಿಯಾದ ಗಾತ್ರದ ಬ್ರಾ ಆಯ್ಕೆ ಮಾಡಿಕೊಳ್ಳಿ
ತುಂಬಾ ಬಿಗಿಯಾದ ಬ್ರಾಗಳನ್ನು ದಿನಪೂರ್ತಿ ಧರಿಸಬೇಡಿ
ರಾತ್ರಿ ಸಡಿಲ ಉಡುಪು ಧರಿಸಿ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ
ಚರ್ಮ ಸ್ವಚ್ಛವಾಗಿ ಮತ್ತು ಒಣಗಿರಲು ಗಮನ ನೀಡಿ






