ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತಿರೂಪ. ಹೀಗಾಗಿ ಭಾಷೆ ಮೊದಲು ಮಿಕ್ಕಿದ್ದೆಲ್ಲಾ ಆಮೇಲೆ ಎಂಬ ಮಾತು ಕೇಳಿ ಬರುತ್ತೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬೆಂಗಳೂರು ವಲಸಿಗರ ಪಾಲಿನ ನೆಚ್ಚಿನ ಊರು. ಎಲ್ಲೆಲ್ಲಿಂದಲೋ ಬಂದು ಇಲ್ಲಿ ಹಲವರು ಬದುಕು ರೂಪಿಸಿಕೊಂಡಿದ್ದಾರೆ. ಇದರಿಂದ ಸ್ಥಳಿಯರಿಗೆ ಕರುನಾಡಿನಲ್ಲೇ ಉದ್ಯೋಗ ಸಿಗದಂತಹ ವಾತಾವರಣ ಇದೆ.
ಇನ್ನು ಹೀಗೆ ವಲಸೆ ಬರುವರಾದರೂ ಕನ್ನಡ ಕಲಿಯುತ್ತಾರಾ ..? ಅಂದರೆ ಅದು ಇಲ್ಲ. ಯಾಕೆಂದರೆ ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಇಲ್ಲಿ ಕನ್ನಡ ಕಲಿಯಲು ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಹೀಗಿದ್ದಾಗ ವಲಸಿಗರು ತಾನೇ ಹೇಗೆ ಕಲಿಯಲು ಸಾಧ್ಯ..?
ಹೀಗಾಗಿಯೇ ಭಾಷೆ ಮತ್ತು ವಲಸೆ ಹಾಗೂ ದುಡಿಮೆಯ ವಿಚಾರವನ್ನು ಗಮನದಲ್ಲಿಟ್ಕೊಂಡು ರಾಜ್ಯದಲ್ಲಿ ಆಟೋ ಮತ್ತು ಕ್ಯಾಬ್ ಚಾಲನೆ ಮಾಡುವ ಚಾಲಕರಿಗೆ ಕಡ್ಡಾಯವಾಗಿ ಕನ್ನಡ ಗೊತ್ತಿರಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿದೆ. ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆ ಕಡ್ಡಾಯ ಎಂದು ಹೊರಡಿಸಿದ್ದ ಆದೇಶವನ್ನು ಉದಾಹರಣೆಯನ್ನಾಗಿ ನೀಡಿದೆ.
ಆದರೆ ಇದಕ್ಕೆ ಈಗ ಆಟೋ ಮತ್ತು ಕ್ಯಾಬ್ ಚಾಲಕರ ಸಂಘದಲ್ಲಿಯೇ ಭಿನ್ನಾಭಿಪ್ರಾಯದ ಅಲೆ ಇದ್ದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಪ್ರಧಾನ ಕಾರ್ಯದರ್ಶಿ ಡಿ. ರುದ್ರಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ಧಾರೆ. ಬೆಂಗಳೂರು ನಗರಕ್ಕೆ ಈ ನಿಯಮ ಅಗತ್ಯವಿಲ್ಲ ಎಂದು ಹೇಳಿದ್ಧಾರೆ.
ಆಟೋ ಓಡಿಸಲು ಕನ್ನಡ ಗೊತ್ತಿರಲೇಬೇಕೆಂಬ ಅನಿವಾರ್ಯತೆ ಇಲ್ಲ ಎಂದು ಹೇಳಿರುವ ಡಿ ರುದ್ರಮೂರ್ತಿ ಬಹುತೇಕ ಚಾಲಕರಿಗೆ ಬಹುಭಾಷಾ ಜ್ಞಾನ ಇದೆ ಎಂದು ಹೇಳಿದ್ದಾರೆ. ಇಂತಹ ನಿಯಮದಿಂದಾಗಿ ಅಸಂಖ್ಯಾತ ಆಟೋ ಚಾಲಕರ ಜೀವನೋಪಾಯ ಕಸಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.
ಆದರೆ ಕ್ಯಾಬ್ ಚಾಲಕರು ಮಾತ್ರ ಈ ಮಾತನ್ನು ಒಪ್ಪುತ್ತಿಲ್ಲ. ಬದಲಿಗೆ ಭಾಷೆಯ ಮೂಲಕ ನಿಯಂತ್ರಣ ಮಾಡುವ ಅಗತ್ಯ ಇದೆ ಎಂದು ಹೇಳಿದ್ಧಾರೆ. ”ಡೆಕ್ಕಾನ್ ಹೆರಾಲ್ಡ್” ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ ಈ ವರ್ಷ ಸುಮಾರು 5,000 ಕೇರಳದ ಕ್ಯಾಬ್ ಚಾಲಕರು ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ್ದಾರೆ ಎಂದು ಓಲಾ-ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ. ಪಂಜಾಬ್‌ನಿಂದಲೂ ಹಲವರು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಹೊರರಾಜ್ಯದ ಚಾಲಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಉದಾಹರಣೆಗಳೂ ಇವೆ ಎಂದು ಹೇಳಿರುವ ತನ್ವೀರ್ ಪಾಷಾ ಭಾಷೆ ಸಂಬಂಧಿತ ನಿಯಮ ಅಥವಾ ಕಠಿಣ ನಿಯಂತ್ರಣ ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ ಎಂದು ”ಡೆಕ್ಕನ್ ಹೆರಾಲ್ಡ್” ತನ್ನ ವರದಿಯಲ್ಲಿ ಉಲ್ಲೇಖಿಸಿದೆ.



