ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಗೊತ್ತಲ್ಲವಾ ..? ಒಂದು ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಥಾನದಲ್ಲಿನ ಪ್ರಮುಖ ಸದಸ್ಯ. ದರ್ಶನ್ ಅವರನ್ನು ಆಗ ನೆರಳಿನಂತೆ ಹಿಂಬಾಲಿಸಿಕೊಂಡೆ, ದರ್ಶನ್ ಡೇಟ್ಸ್ ಗಳಿಂದ ಹಿಡಿದು, ತೂಗುದೀಪ ಡಿಸ್ಟ್ರಿಬ್ಯೂಷನ್ ನ ಕೆಲಸವನ್ನೆಲ್ಲ ನೋಡಿಕೊಳ್ಳುತ್ತಿದ್ದ ಮಲ್ಲಿ ಕೇವಲ ದರ್ಶನ್ ಮಾತ್ರವಲ್ಲದೇ ಅರ್ಜುನ್ ಸರ್ಜಾ ಅವರನ್ನೊಳಗೊಂಡಂತೆ ಚಿತ್ರರಂಗದ ಹಲವರಿಗೆ ಉಂಡೆನಾಮ ತೀಡಿ ಎಸ್ಕೇಪ್ ಆಗಿದ್ದರು. ಅಜ್ಞಾತವಾಸದಲ್ಲಿದ್ದರು.
ಆದರೆ ಈಗ 8 ವರ್ಷದ ಅಜ್ಞಾತವಾಸ ಮುಗಿದಿದೆ. ಮಲ್ಲಿ ಮತ್ತೆ ಕರುನಾಡಿಗೆ ಮರಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಕೂಡ ಮಾಡಿ ತಾವು ಓಡಿ ಹೋಗಿದ್ದೇಕೆ..? ಎನ್ನುವುದನ್ನು ಸವಿಸ್ತಾರವಾಗಿ ಹೇಳಿದ್ದಾರೆ. ಎಲ್ಲರ ಹಣವನ್ನು ಕೂಡ ಮರಳಿ ಕೊಡುವ ಮಾತುಗಳನ್ನಾಡಿದ್ದಾರೆ.
ಇಷ್ಟೇ ಅಲ್ಲ ದರ್ಶನ್ ಅವರ ಹೃದಯವಂತಿಕೆ, ದಿನಕರ್ ತೂಗದೀಪ್ ಅವರ ನೇರವಂತಿಕೆ, ಕುರಿತು ಕೂಡ ಮಾತನಾಡಿರುವ ಮಲ್ಲಿ ತಮ್ಮ ಮಾತುಗಳಲ್ಲಿ ತೂಗುದೀಪ ನಿರ್ಮಾಣ ಸಂಸ್ಥೆಯ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ತಮ್ಮ ಮುಂದಿನ ಯೋಜನೆ-ಯೋಚನೆಯ ಕುರಿತು ಕೂಡ ಮುಕ್ತವಾಗಿ ಮಾತನಾಡಿದ್ದಾರೆ.
ದರ್ಶನ್ ಒಳಗಡೆ ಇರುವ ಈ ಸಮಯದಲ್ಲಿ ತಮ್ಮನ್ನು ಯಾರು ಪ್ರಶ್ನೆ ಮಾಡಲಾರರು ಎನ್ನುವ ಯೋಚನೆ ಬಹುಶಃ ಮಲ್ಲಿಕಾರ್ಜುನ್ ಅವರದ್ದಾಗಿರಬಹುದು. ಹೀಗಾಗಿಯೇ ಸಮಯ ನೋಡಿಕೊಂಡು ಮಲ್ಲಿಕಾರ್ಜುನ್ ಬಂದಿರಬಹುದು. ಆದರೆ ಮಲ್ಲಿ ಮೇಲಿನ ಕೋಪ-ತಾಪ ದರ್ಶನ್ ಅವರಿಗಾಗಲಿ.. ದಿನಕರ್ ತೂಗುದೀಪ ಅವರಿಗಾಗಲಿ.. ಕಡಿಮೆಯಾಗಿಲ್ಲ. ಬದಲಿಗೆ ಮನದಲ್ಲಿನ ನೋವು ಮತ್ತು ಬೇಸರ ಇನ್ನೂ ಹಾಗೇ ಇದೆ.
ಇದಕ್ಕೆ ಪುರಾವೆ ಎನ್ನುವಂತೆ ಒಂದು ಕಾಲದಲ್ಲಿ ತಮ್ಮ ನಿರ್ಮಾಣ ಸಂಸ್ಥೆಯ ಆಧಾರ ಸ್ತಂಭದಂತೆ ಇದ್ದ ಮಲ್ಲಿಕಾರ್ಜುನ್ ವಿರುದ್ಧ ಸಾಕ್ಷಾತ್ ದಿನಕರ್ ತೂಗುದೀಪ ಅವರೇ ಗುಡುಗಿದ್ದಾರೆ. ಮಲ್ಲಿ ಮಹಾ ಮೋಸಗಾರ ಯಾರು ಅವನನ್ನೂ ನಂಬಬೇಡಿ ಎಂದು ಹೇಳಿದ್ಧಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾದ ಬರಹವನ್ನು ಕೂಡ ಹಂಚಿಕೊಂಡಿದ್ದಾರೆ.
ದಿನಕರ್ ತೂಗುದೀಪ ಬರಹ
ಮಲ್ಲಿಕಾರ್ಜುನ ಗದಗ ಅಲಿಯಾಸ್ ಚೀಟರ್ ಮಲ್ಲು ಎಂಬ ಫ್ರಾಡ್ ಎಂಟು ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ, ನನ್ನ ಹೆಸರನ್ನು, ದರ್ಶನ್ ರವರ ಹೆಸರನ್ನು ಮತ್ತು ನಮ್ಮ ತೂಗುದೀಪ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕ ವ್ಯಕ್ತಿಗಳ ಬಳಿ ಸುಳ್ಳು ಹೇಳಿ, ಹಣ ಪಡೆದು ವಂಚಿಸಿ ಪರಾರಿಯಾಗಿದ್ದವನು ಈಗ ದಿಢೀರನೆ ಪ್ರತ್ಯಕ್ಷನಾಗಿ 16-04-2026 ರಂದು ಪತ್ರಿಕಾಗೋಷ್ಠಿ ನಡೆಸಿರುತ್ತಾನೆ. ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿರುತ್ತಾನೆ.
ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತ ಆಯಿತು ಎಂದು ಹೇಳಿರುವುದಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ರವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ.
ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು. ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ. ಅದನ್ನು ಪಡೆಯಲು ಈತ ಹೇಳುವುದೇ ಕಟ್ಟು ಕತೆಗಳು ಇವನನ್ನು ಯಾರು ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ರವರು ಯಾರು ಈತನನ್ನು ಸೇರಿಸುವುದಿಲ್ಲ.
ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಈತ ಎಲ್ಲಾದರೂ ನಮ್ಮಗಳ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ… ದರ್ಶನ್ ರವರ ಹೆಸರನ್ನು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರ ಅಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗ ಬೇಡಿ. ಇಂತಿ ನಿಮ್ಮ ದಿನಕರ್ ತೂಗುದೀಪ.
ಹೀಗೆ ದಿನಕರ್ ತೂಗುದೀಪ ಸದ್ಯ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಂಡ ಕಾರಿದ್ದು, ಮಲ್ಲಿ ತಮ್ಮ ಒಂದ್ಕಾಲದ ಸ್ನೇಹಿತ, ಗುರು, ಸಹೋದರ ದಿನಕರ್ ತೂಗುದೀಪ ಅವರಿಗೆ ಉತ್ತರ ಕೊಡುತ್ತಾರಾ..? ಈ ವಿವಾದ ಎಲ್ಲಿ ಹೋಗಿ ತಲುಪುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ.



