ಭಯೋತ್ಪಾದನೆ ನಮ್ಮ ದೇಶಕ್ಕೆ ತಗುಲಿರುವ ಶಾಪ. ಮುಂಬೈ ಮೇಲೆ ನಡೆದ ದಾಳಿ ಇರಲಿ.. ಸಂಸತ್ ಭವನ್ ಮೇಲೆ ಮಾಡಲಾದ ಹಲ್ಲೆ ಇರಲಿ.. ಹೈದರಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿರಲಿ.. ಪ್ರತಿ ಬಾರಿ ಬಾಂಬ್ ದಾಳಿ ನಡೆದಾಗ ಭಾರತೀಯರ ಎದೆ ಛಿದ್ರವಾಗುತ್ತೆ. ನೆತ್ತರಿಂದ ಮಣ್ಣು ಕೆಂಪಾಗುತ್ತೆ. ಗಾಯ ಮಾಸದೇ ಹಾಗೇ ಉಳಿಯುತ್ತೆ.
ಇನ್ನೂ ಪ್ರತಿ ಬಾರಿ ಬ್ಲ್ಯಾಸ್ಟ್ ಆದಾಗ್ಲೂ ಪ್ರತಿಯೊಬ್ಬರೂ, ಒಬ್ಬರ ಮೇಲೆ ಇನ್ನೊಬ್ಬರ ತಪ್ಪುಗಳನ್ನು ಹೋರಿಸಿ ಕೈ ತೊಳೆದುಕೊಂಡ್ಬಿಡ್ತಾರೆ. ಇನ್ನೊಂದಷ್ಟ್ ಸಲಾ ಅಪರಾಧಿಯನ್ನು ಹಿಡಿಯೋವಲ್ಲಿ ನಮ್ಮ ಸಿಸ್ಟಮ್ ಯಶಸ್ವಿಯಾಗುತ್ತೆ. ನಮ್ಮ ವ್ಯವಸ್ಥೆ ಶಿಕ್ಷೆಯನ್ನು ನೀಡುತ್ತೆ. ಇದಕ್ಕೆ ನಾಲ್ಕು ವರ್ಷದ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಬ್ಲ್ಯಾಸ್ಟ್ ಪ್ರಕರಣ ಸದ್ಯದ ಉದಾಹರಣೆ.
ಹೌದು, 2022ರ ನವೆಂಬರ್ 19ರಂದು ಕರುನಾಡು ಬೆಚ್ಚಿ ಬಿದ್ದಿತ್ತು. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿಯೇ ಕುಕ್ಕರ್ ನಲ್ಲಿ ಬಾಂಬ್ ಸಿಡಿದಿತ್ತು. ಉಗ್ರ ಮೊಹಮ್ಮದ್ ಶಾರೀಕ್ ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈಗ ನಾಲ್ಕು ವರ್ಷದ ನಂತರ ಮೊಹಮ್ಮದ್ ಶಾರೀಕ್‌ಗೆ ಶಿಕ್ಷೆಯಾಗಿದೆ. ಬೆಂಗಳೂರಿನ ಎನ್‌ಐಎ ಕೋರ್ಟ್ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 94 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಅಂದು ಏನಾಗಿತ್ತು?
2022ರ ನವೆಂಬರ್ 19ರ ಸಂಜೆ ಮಂಗಳೂರಿನ ಕಂಕನಾಡಿ ಹತ್ತಿರ ಈ ಘಟನೆ ನಡೆದಿತ್ತು. ಶಾರೀಕ್ ಐಇಡಿ ಬಾಂಬ್ ಇಟ್ಟಿದ್ದ ಕುಕ್ಕರ್ ಹಿಡಿದು ಆಟೋದಲ್ಲಿ ಹೋಗುತ್ತಿದ್ದ. ಯಾವುದೋ ಜನನಿಬಿಡ ಜಾಗದಲ್ಲಿ ಸ್ಫೋಟಿಸುವುದು ಅವನ ಪ್ಲಾನ್ ಆಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು, ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿದ್ದ ಆಟೋದಲ್ಲೇ ಬಾಂಬ್ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಇದರಿಂದ ಶಾರೀಕ್ ಮತ್ತು ಪುರುಷೋತ್ತಮ್ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದವು. ಒಂದು ವೇಳೆ ಇದು ಪ್ಲಾನ್ ಮಾಡಿದ ಜಾಗದಲ್ಲಿ ಸ್ಫೋಟಗೊಂಡಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿ ಆಗುತ್ತಿತ್ತು.
ತನಿಖೆ ಮತ್ತು ಶಿಕ್ಷೆ
ದೇಶದ ಭದ್ರತೆಗೆ ಸಂಚು ರೂಪಿಸಿದ ಈ ಕೇಸನ್ನು ಕೈಗೆತ್ತಿಕೊಂಡ ಎನ್‌ಐಎ (NIA), ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಶಾರೀಕ್ ಕೂಡ ಕೋರ್ಟ್‌ನಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಇದೀಗ ನ್ಯಾಯಾಲಯವು ಅವನ ಮೇಲೆ ದೇಶದ್ರೋಹ (IPC 121A), ಸ್ಫೋಟಕಗಳ ಸಂಗ್ರಹ (IPC 122) ಮತ್ತು ಯುಎಪಿಎ (UAPA) ಅಂತಹ ಗಂಭೀರ ಕಾಯ್ದೆಗಳ ಅಡಿ ಶಿಕ್ಷೆ ಪ್ರಕಟಿಸಿದೆ.
ರಾಜಕೀಯ ಕಿಡಿ
ಈ ತೀರ್ಪಿನ ಬೆನ್ನಲ್ಲೇ ರಾಜಕೀಯ ವಲಯದಲ್ಲೂ ಚರ್ಚೆ ಶುರುವಾಗಿದೆ. ಬಿಜೆಪಿ ನಾಯಕ ಸಿ.ಟಿ.ರವಿ ಅವರು ಪ್ರತಿಕ್ರಿಯಿಸಿ, “ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ಅಮಾಯಕರ ಪ್ರಾಣ ತೆಗೆಯಲು ಸಂಚು ರೂಪಿಸಿದವನಿಗೆ ಈ ಶಿಕ್ಷೆ ಸಾಲದು. ಇನ್ನು ಮುಂದೆ ಇಂತಹ ಕೆಲಸ ಮಾಡಲು ಯಾರಿಗೂ ಧೈರ್ಯ ಬರಬಾರದು ಅಂತಹ ಶಿಕ್ಷೆ ಆಗಬೇಕಿತ್ತು” ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



