ಬದಲಾದ ಈ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಬರುವುದೇ ದುಸ್ತರ ಎನ್ನುವಂತಾಗಿದೆ. ಯಾಕೆಂದರೆ.. ಸುತ್ತ-ಮುತ್ತ ಹಲವರು ಕಾಮಾಂಧರು ಕಾಯುತ್ತಿರುತ್ತಾರೆ. ಹೊಂಚು ಹಾಕಿ ಕುಳಿತಿರುತ್ತಾರೆ. ಹೀಗಾಗಿ ರಾಮ ರಾಜ್ಯದ ಕನಸು ಕಂಡಿದ್ದ ಗಾಂಧಿಯ ನಾಡಿನಲ್ಲಿ ಹೆಣ್ಣುಮಕ್ಕಳನ್ನು ಹಲವರು ಮನೆಯಿಂದ ಒಬ್ಬಂಟಿಯಾಗಿ ಕಳಿಸುವುದೇ ಇಲ್ಲ. ಅದರಲ್ಲಿಯೂ ಪಕ್ಕದ ಊರಿಗೆ ಅಥವಾ ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡುವುದು ಹೆಣ್ಣು ಮಕ್ಕಳ ಪಾಲಿಗೆ ಯುದ್ಧ ಮಾಡಿದಂತೆಯೇ.
ರಸ್ತೆಯಲ್ಲಿ ಅಸಭ್ಯವಾಗಿ ಮಾತನಾಡುತ್ತಾ, ಅಶ್ಲೀಲ ಸನ್ನೆಗಳನ್ನು ಮಾಡುವ ಈ ಕಾಮುಕರು ಆಟೋ ಮತ್ತು ಕ್ಯಾಬ್ ಡ್ರೈವರ್ ಸೋಗಿನಲ್ಲಿಯೂ ಇರುತ್ತಾರೆ. ಯಾಮಾರಿದರೆ ಕಥೆ ಖತಂ. ಇದಕ್ಕೆ ಕೈಗನ್ನಡಿ ಎಂಬಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಅದೆಷ್ಟೋ ಕೇಸ್‌ಗಳಲ್ಲಿ ಕ್ರಿಮಿನಲ್‌ಗಳು ಪೊಲೀಸರಿಗೆ ಸಿಗುವುದೇ ಇಲ್ಲ, ಅಥವಾ ಸಿಗುವಷ್ಟರಲ್ಲಿ ಅನಾಹುತ ನಡೆದು ಹೋಗಿರುತ್ತದೆ. ಇಂತಹ ಆತಂಕದ ನಡುವೆ, ತಂತ್ರಜ್ಞಾನ ಮತ್ತು ಸಮಯಪ್ರಜ್ಞೆ ಹೇಗೆ ಪ್ರಾಣ ಉಳಿಸಬಲ್ಲದು ಎಂಬುದಕ್ಕೆ ವಿಜಯವಾಡದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಹೌದು, ಅಸಲಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವತಿಯೊಬ್ಬರು ವಿಜಯವಾಡದ ಬಸ್ ನಿಲ್ದಾಣಕ್ಕೆ ಏಪ್ರಿಲ್ 24ರಂದು ಬಂದಿಳಿದಿದ್ದರು. ರಾತ್ರಿ 12-30ರ ಸಮಯ ಅದು. ಈ ಸಮಯದಲ್ಲಿ ಫಣೀಂದ್ರ ಎಂಬ ಆಟೋ ಚಾಲಕ ಬಾಡಿಗೆಗೆ ಬೆನ್ನು ಬಿದ್ದಿದ್ದಾನೆ. ಬೇಡ ಅಂದರೂ ಕೇಳದೇ ಸತಾಯಿಸಿದ್ದಾನೆ. ಹೀಗಾಗಿ ಬೇರೆ ದಾರಿ ಇಲ್ಲದೇ ಯುವತಿ ಆಟೋ ಹತ್ತಿದ್ದರು.
ಆದರೆ ಆಟೋ ಹತ್ತುವ ಮುನ್ನ ಆಟೋದ ನಂಬರ್ ಪ್ಲೇಟ್‌ನ ಫೋಟೊ ಕ್ಲಿಕ್ ಮಾಡಿದ್ದ ಯುವತಿ ”ಶಕ್ತಿ ಆಪ್”ನಲ್ಲಿ ಆ ಫೋಟೊವನ್ನು ಅಪ್ಲೋಡ್ ಮಾಡಿದ್ದರು. ಇದನ್ನರಿಯದ ಚಾಲಕ ಫಣೀಂದ್ರ ವಿಜಯವಾಡದಿಂದ ಡಿಜಿಪಿ ಕಚೇರಿಯತ್ತ ಬರುತ್ತಿದ್ದಂತೆಯೇ ಬಾಲ ಬಿಚ್ಚುವ ಪ್ರಯತ್ನ ಮಾಡಿದ್ದಾನೆ. ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ಧಾನೆ.
ಇದರಿಂದ ಬೆಚ್ಚಿ ಬಿದ್ದ ಯುವತಿ ಕೂಡಲೇ ಆಪ್‌ನಲ್ಲಿ ತನ್ನೆಲ್ಲಾ ಸಂಪೂರ್ಣ ವಿವರ ಹಾಕಿದ್ದರು. ಯುವತಿಯ ನಡೆಯಿಂದ ಅನುಮಾನಗೊಂಡ ಫಣೀಂದ್ರ ಮೊಬೈಲ್ ಬಳಕೆಯ ಬಗ್ಗೆ ವಿಚಾರಿಸಿದಾಗ ಮನೆಗೆ ಕರೆ ಮಾಡುತ್ತಿರುವುದಾಗಿ ಯುವತಿ ಸುಳ್ಳು ಹೇಳಿದ್ದರು.
ಇನ್ನೊಂದೆಡೆ ಯುವತಿ ಆ್ಯಪ್‌ನಲ್ಲಿ ಮಾಹಿತಿ ನೀಡುತ್ತಿದ್ದಂತೆ ಅಲರ್ಟ್ ಆದ ಮಂಗಳಗಿರಿ ಎಸ್‌ಐ ವೆಂಕಟ್ ಜಿಪಿಎಸ್ ಮೂಲಕ ಆಟೋ ಎಲ್ಲಿದೆ ಎಂದು ಟ್ರ್ಯಾಕ್ ಮಾಡಲಾರಂಭಿಸಿದರು. ಕಾಜಾ ಟೋಲ್ ಪ್ಲಾಜಾ ದಾಟಿ ಆಟೋ ನಿರ್ಜನ ಪ್ರದೇಶದತ್ತ ಹೋಗುತ್ತಿದ್ದಾಗ, ಮಂಗಳಗಿರಿ ಎಸ್‌ಐ ವೆಂಕಟ್ ಮತ್ತು ತಂಡ ಸರಿಯಾದ ಸಮಯಕ್ಕೆ ಆಟೋವನ್ನು ಅಡ್ಡಗಟ್ಟಿದ್ದಾರೆ. ಅನಾಹುತ ನಡೆಯುವ ಮುನ್ನವೇ ಯುವತಿಯನ್ನು ರಕ್ಷಿಸಿ, ಕಾಮುಕ ಚಾಲಕ ಫಣೀಂದ್ರನನ್ನು ಅರೆಸ್ಟ್ ಮಾಡಿದ್ದಾರೆ.
ಯುವತಿಯ ಯಶಸ್ವಿ ರಕ್ಷಣೆಯ ನಂತರ, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರು ಮಂಗಳಗಿರಿ ಗ್ರಾಮಾಂತರ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ತಂತ್ರಜ್ಞಾನ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದಿದ್ದಾರೆ.
ಇನ್ನು ಫಣೀಂದ್ರ ಬಂಧನದ ನಂತರ ಮಾತನಾಡಿರುವ ಮಂಗಳಗಿರಿ ಡಿಎಸ್‌ಪಿ ಮುರಳಿ ಕೃಷ್ಣ, ಚಾಲಕ ಫಣೀಂದ್ರ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಕಡ್ಡಾಯವಾಗಿ ”ಶಕ್ತಿ ಆ್ಯಪ್” ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿರುವ ಮುರಳಿ ಕೃಷ್ಣ ಯುವತಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ ಎಂದು ಹೇಳಿದ್ದಾರೆ.



