ಯಶ್ ಕನ್ನಡದ ಸ್ಟಾರ್ ಅಲ್ಲ. ನ್ಯಾಶನಲ್ ಸ್ಟಾರ್ ಅಲ್ಲ. ರಾಕಿಂಗ್ ಸ್ಟಾರ್ ಕೂಡ ಅಲ್ಲ. ಬದಲಿಗೆ ಹಾಲಿವುಡ್ ಸ್ಟಾರ್. ಈ ಮಾತು ಯಶ್ ಹೇಳದಿದ್ದರೂ ಅವರ ಕೃತಿಯಲ್ಲಿ ಹಾಲಿವುಡ್ ಕಬ್ಜಾ ಮಾಡಬೇಕೆಂಬ ಇರಾದೆಯಂತು ಕಾಣ್ತಿದೆ. ಇಲ್ಲವಾದಲ್ಲಿ ಕೆಜಿಎಫ್ 2 ಬಂದು 4 ವರ್ಷವಾದರೂ ಯಶ್ ತಮ್ಮ ”ಟಾಕ್ಸಿಕ್” ಬಿಡುಗಡೆ ಮಾಡಲು ಇಷ್ಟೊಂದು ಕವಡೆ ಹಾಕುತ್ತಿರಲಿಲ್ಲ.
ಆದರೆ.. ಈ ಲೆಕ್ಕಾಚಾರ ನೋಡುಗರಿಗೆ ಅಥವಾ ಅಭಿಮಾನಿಗಳಿಗೆ ಅರ್ಥ ಆಗಲ್ಲ. ಅರ್ಥ ಮಾಡಿಕೊಳ್ಳುವ ಆಸೆಯೂ ಅವರಲ್ಲಿ ಇಲ್ಲ. ಅವರದ್ದೇನೇ ಇದ್ದರೂ ಆದಷ್ಟು ಬೇಗ ಬೆಳ್ಳಿಪರದೆಯ ಮೇಲೆ ಯಶ್ ಅವರನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ.
ವಿಪರ್ಯಾಸ ಈ ಆಸೆಯ ಮೇಲೆ ಈಗ ಇನ್ನೊಮ್ಮೆ ಯಶ್ ತಣ್ಣೀರೆರಚಿದ್ದಾರೆ. ಹೌದು, ಈ ಮೊದಲು ”ಟಾಕ್ಸಿಕ್” ಬಿಡುಗಡೆಗೆ ಮಾರ್ಚ್‌ನಲ್ಲಿ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದರು. ಆ ನಂತರ ಜೂನ್ 4 ಅಂದ್ರು. ಈಗ ನೋಡಿದ್ರೆ ಜೂನ್ ನಲ್ಲಿ ಕೂಡ ಬಣ ಬಣ. ತಮ್ಮ ಚಿತ್ರದ ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಿದ್ದಾರೆ ಯಶ್.
ಅಂದ್ಹಾಗೆ ಈ ಹಿಂದೆ ಯುದ್ಧದ ನೆಪ ಹೇಳಿ ತಮ್ಮ ಚಿತ್ರದ ಬಿಡುಗಡೆಯನ್ನು ಯಶ್ ಮುಂದೂಡಿದ್ದರು. ಆದರೆ ಈಗ “ಗ್ಲೋಬಲ್ ರಿಲೀಸ್”, “ಹಾಲಿವುಡ್ ಡಿಸ್ಟ್ರಿಬ್ಯೂಷನ್”, “ವಾರ್ನರ್ ಬ್ರದರ್ಸ್” ಅಂತೆಲ್ಲಾ ಹೇಳೋಕೆ ಯಶ್ ಶುರು ಮಾಡಿದ್ಧಾರೆ. ಇದೆಲ್ಲಾ ಕೇಳೋಕೆ ಚೆನ್ನಾಗಿರುತ್ತೆ. ಆದ್ರೆ ಥಿಯೇಟರ್ ಮುಂದೆ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡೋಕೆ ಕಾಯ್ತಿರೋ ಹುಡುಗರಿಗೆ ಇದು ಬರೀ ನೆಪಗಳಂತೆ ಕಾಣ್ತಿದೆ.
ಇನ್ನು ಇತ್ತೀಚೆಗೆ ನಡೆದ ‘ಸಿನಿಮಾ ಕಾನ್’ನಲ್ಲಿ 9 ನಿಮಿಷದ ಶೋ-ರೀಲ್‌ಗೆ ಫಿದಾ ಆಗಿರೋ ಹಾಲಿವುಡ್ ಮಂದಿ ಈ ಸಿನಿಮಾವನ್ನು ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕು ಅಂತ ಪಟ್ಟು ಹಿಡಿದಿದ್ದಾರಂತೆ. ಇದೇ ಕಾರಣಕ್ಕೆ ಯಶ್ ಮತ್ತು ಟೀಮ್ ಈಗ ಇಡೀ ಪ್ಲ್ಯಾನ್ ಬದಲಿಸಿದೆ.
ಅಂತರಾಷ್ಟ್ರೀಯ ಮಟ್ಟದ ವಿತರಣೆ ಮತ್ತು ಸಹಭಾಗಿತ್ವಕ್ಕೆ ಇನ್ನೂ ಕಾಲಾವಕಾಶ ಬೇಕಿರೋದ್ರಿಂದ ಜೂನ್ 4ರ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಯಶ್ ಅವರು ತಾಳ್ಮೆಯಿಂದ ಕಾಯಿರಿ, ಹೆಮ್ಮೆ ಪಡುವ ಸಿನಿಮಾ ಕೊಡ್ತೀನಿ ಅಂತ ಸಂದೇಶ ಕೊಟ್ಟಿದ್ದಾರೆ. ಆದ್ರೆ, ತಾಳ್ಮೆಗೂ ಒಂದು ಮಿತಿ ಇಲ್ವಾ ಬಾಸ್?

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಅಂತಹ ಘಟಾನುಘಟಿ ನಟಿಯರಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೂಟ್ ಮಾಡಿರೋದು ದೊಡ್ಡ ಸಾಧನೆಯೇ ಇರಬಹುದು, ಆದ್ರೆ ಒಬ್ಬ ನಟನಿಗೆ ಅಡಿಪಾಯವೇ ಆತನ ಅಭಿಮಾನಿಗಳು. ಈಗ ಆ ಅಭಿಮಾನಿಗಳೇ ಯಶ್ ಅವರ ಈ ಅತಿ ಹೆಚ್ಚಿನ ”ಗ್ಲೋಬಲ್ ದಾಹ”ದಿಂದ ಬೇಸತ್ತು ಹೋಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಂತೂ ಯಶ್ ವಿರುದ್ಧ ಫ್ಯಾನ್ಸ್ ಕಿಡಿಕಾರ್ತಿದ್ದಾರೆ. ನಮಗೆ ಗ್ಲೋಬಲ್ ಸಿನಿಮಾ ಬೇಡ, ನಮ್ಮ ರಾಕಿ ಭಾಯ್ ಸ್ಕ್ರೀನ್ ಮೇಲೆ ಬಂದ್ರೆ ಸಾಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಕೊಡಬೇಕಿದ್ದ ಸ್ಟಾರ್ ನಟರು, ಈಗ ಮೂರು-ನಾಲ್ಕು ವರ್ಷಕ್ಕೊಂದು ಸಿನಿಮಾ ಕೊಡೋಕು ಮೀನಾಮೇಷ ಎಣಿಸುತ್ತಿರೋದು ಸ್ಯಾಂಡಲ್‌ವುಡ್‌ಗೆ ದೊಡ್ಡ ಹೊಡೆತ.
ಟಾಕ್ಸಿಕ್ ಟೀಮ್ ಈಗ ಅಂತರಾಷ್ಟ್ರೀಯ ಮಾರ್ಕೆಟ್ ಕಡೆ ಗಮನ ಹರಿಸ್ತಿರೋದು ಸರಿ, ಆದ್ರೆ ಇಲ್ಲಿರೋ ಲೋಕಲ್ ಫ್ಯಾನ್ಸ್ ಮನಸ್ಥಿತಿಯನ್ನೂ ಅರ್ಥ ಮಾಡ್ಕೋಬೇಕಿದೆ. ಒಟ್ಟಿನಲ್ಲಿ, ‘ಟಾಕ್ಸಿಕ್’ ಬರೋದು ಲೇಟಾಗೋದು ಈಗ ಫಿಕ್ಸ್ ಆಗಿದೆ. ಅದು ಯಾವಾಗ ಬರುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲದ ಯಕ್ಷಪ್ರಶ್ನೆ.
ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ ಅಂತ ಯಶ್ ಹೇಳಿರೋದು ಸರಿ, ಆದ್ರೆ ಅಭಿಮಾನಿಗಳು ಇನ್ನೂ ಎಷ್ಟು ದಿನ ಅಂತ ಖಾಲಿ ಥಿಯೇಟರ್ ನೋಡ್ಕೊಂಡು ಕಾಯ್ಬೇಕು? ಯಶ್ ಅವರೇ, ಗ್ಲೋಬಲ್ ಮಟ್ಟದಲ್ಲಿ ಇಂಡಿಯನ್ ಸಿನಿಮಾದ ಧ್ವನಿ ಕೇಳಿಸೋ ನಿಮ್ಮ ಹಠಕ್ಕೆ ನಮ್ಮ ಬೆಂಬಲ ಇದೆ, ಆದ್ರೆ ಅಭಿಮಾನಿಗಳ ಸಹನೆಯನ್ನು ಇಷ್ಟೊಂದು ಪರೀಕ್ಷಿಸಬೇಡಿ ಅನ್ನೋದೇ ಎಲ್ಲರ ಕಳಕಳಿ.



