No menu items!
22.3 C
Munich
Tuesday, May 5, 2026

ಮಮತಾ ಬ್ಯಾನರ್ಜಿ ಭದ್ರ ಕೋಟೆ ಪುಡಿಪುಡಿ ; ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ ಎಂದ ಪ್ರಧಾನಿ ಮೋದಿ

Must read

ಗಂಗೆಯ ದಡದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಬಂಗಾಳದ ಅಖಾಡದಲ್ಲಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಕಮಲ ಅರಳಿದೆ. ದಶಕಗಳಿಂದ ಬಿಜೆಪಿ ಕಂಡ ಕನಸು ಕೊನೆಗೂ ನನಸಾಗಿದೆ. ಮೋದಿ-ಶಾ ಜೋಡಿಯ ‘ಚಾಣಕ್ಷ ನೀತಿ’ಗೆ ಬಂಗಾಳದ ಜನ ಬಹುಪರಾಕ್ ಹಾಕಿದ್ದಾರೆ. ಸಂದೇಶ್‌ಖಾಲಿಯ ದೌರ್ಜನ್ಯ ಮತ್ತು ಆರ್.ಜಿ.ಕರ್ ಆಸ್ಪತ್ರೆಯ ಘೋರ ಘಟನೆಗಳಿಂದ ಬೇಸತ್ತಿದ್ದ ಜನತೆ ದೀದಿಯ ಆಡಳಿತವನ್ನು ಕಿತ್ತೆಸೆದಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ಇದು ಗೆಲುವಲ್ಲ. ಬದಲಿಗೆ ಮಮತಾ ಬ್ಯಾನರ್ಜಿ ಸಾಮ್ರಾಜ್ಯದ ಪತನದ ಆರಂಭ.

ಇನ್ನೂ ಕೇವಲ ಪಶ್ಚಿಮ ಬಂಗಾಳ ಮಾತ್ರ ಅಲ್ಲ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಕೂಡ ಜನ ಮುಡಿದಿದ್ದು ಕಮಲವನ್ನೇ. ಐದರ ಪೈಕಿ ಮೂರರಲ್ಲಿ ಪ್ರಚಂಡ ಗೆಲುವು. ಸಂಭ್ರಮಾಚರಣೆಗೆ ಇದಕ್ಕಿಂತ ಇನ್ನೇನು ಬೇಕು. ಹೀಗಾಗಿಯೇ ಅತ್ತ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ.. ಕಮರ್ಷಿಯಲ್ ಗ್ಯಾಸ್ ಬೆಲೆ ಗಗನಕ್ಕೇರಿದ್ದರೂ.. ಜನಸಾಮಾನ್ಯರು ನಾನಾ ಸಮಸ್ಯೆಯಿಂದ ಹೈರಾಣಾಗಿದ್ದರೂ.. ಕ್ಯಾರೇ ಎನ್ನದ ಕೇಂದ್ರ ಸರ್ಕಾರ ಸದ್ಯ ದೊರೆತ ಈ ಜನಾದೇಶದಿಂದ ಗೆಲುವಿನ ಅಮಲಿನಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಜಯೋತ್ಸವದ ಭಾ‍ಷಣ ಕೇಳಿ ಒಂದು ವರ್ಗ ಇಂದು (ಮೇ 4 ) ಪುಳಕಿತಗೊಂಡಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯತ್ತ ಬಂಗಾಳಿ ಶೈಲಿಯ ಧೋತಿ ಉಟ್ಟು ಮೋದಿ ಹೆಜ್ಜೆ ಹಾಕುತ್ತಿದ್ದಾಗ, ಅಲ್ಲಿ ಸೇರಿದ್ದ ಕಾರ್ಯಕರ್ತರ ಕಣ್ಣಲ್ಲಿ ಹತ್ತಾರು ವರ್ಷಗಳ ಹತಾಶೆ ಗೆಲುವಾಗಿ ಬದಲಾದ ಸಮಾಧಾನವಿತ್ತು. ಮೋದಿಯವರು ಮೈಕ್ ಹಿಡಿದು “ಭಾರತ್ ಮಾತಾ ಕಿ ಜೈ” ಎನ್ನುತ್ತಿದ್ದಂತೆ ಇಡೀ ದೆಹಲಿ ಅಕ್ಷರಶಃ ನಡುಗಿಹೋಯಿತು. “ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಇಂದು ಕಮಲ ಅರಳಿದೆ” ಎಂದು ಘರ್ಜಿಸಿದ ಮೋದಿ, ಬಂಗಾಳದ ಈ ವಿಜಯವನ್ನು ಕೇವಲ ಒಂದು ಚುನಾವಣಾ ಗೆಲುವಾಗಿ ನೋಡದೆ, ಅದನ್ನೊಂದು ಪ್ರಜಾಪ್ರಭುತ್ವದ ಪುನರ್ಜನ್ಮ ಎಂದು ಬಣ್ಣಿಸಿದರು.

ಮುಂದುವರೆದು ಕಳೆದ ವರ್ಷ ನವೆಂಬರ್ 14 ರಂದು ಬಿಹಾರ ಚುನಾವಣಾ ಫಲಿತಾಂಶ ಬಂದಾಗಲೇ, ಗಂಗಾ ಬಿಹಾರದಿಂದ ಗಂಗಾಸಾಗರಕ್ಕೆ ಹರಿಯುತ್ತದೆ ಎಂದು ಹೇಳಿದ್ದೆ ಎಂದು ಹೇಳಿದ ಮೋದಿ, ಇಂದು ಬಂಗಾಳದಲ್ಲಿ ಗಂಗೋತ್ರಿಯಿಂದ-ಗಂಗಾಸಾಗರದವರೆಗೆ, ಕಮಲ ಎಲ್ಲೆಡೆ ಅರಳಿದೆ ಎಂದರು. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಳದಲ್ಲಿ, ಇಂದು ಗಂಗಾ ನದಿಯ ದಡದಲ್ಲಿರುವ ರಾಜ್ಯಗಳಲ್ಲಿ, ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ ಎಂದು ತಮ್ಮ ಸಂಭ್ರಮ ಹಂಚಿಕೊಂಡರು.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ತಲೆಮಾರುಗಳಿಂದ ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನ ಮತ್ತು ಹೋರಾಟಗಳಿಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಾಖಲೆಯ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಹಲವು ವರ್ಷಗಳಿಂದ ಅವರು ಎಲ್ಲಾ ರೀತಿಯ ಅಡೆ ತಡೆಗಳನ್ನು ದಾಟಿಕೊಂಡು ಪಕ್ಷದ ಅಭಿವೃದ್ಧಿಗೆ ತಳಮಟ್ಟದಲ್ಲಿ ಶ್ರಮಿಸಿದ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಎಂದರು.

ಗಂಗಾ ಮಾತೆಯ ಜೊತೆಗೆ ಬ್ರಹ್ಮಪುತ್ರ ಕೂಡ ನಮ್ಮನ್ನು ಆಶೀರ್ವದಿಸಿದೆ ಎಂದು ಹೇಳಿದ ಮೋದಿ, ಅಸ್ಸಾಂನ ಜನರು ಮೂರನೇ ಬಾರಿಗೆ ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ಇಟ್ಟಿದ್ದಾರೆ. ಇದು ಅಸ್ಸಾಂ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ ಎಂದು ಹೇಳಿದರು. ಅಸ್ಸಾಂ ತನ್ನ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದ ಮೋದಿ ಈ ಫಲಿತಾಂಶ ಐತಿಹಾಸಿಕ ಮತ್ತು ಅಭೂತಪೂರ್ವವಾದದ್ದು ಎಂದು ಹೇಳಿದರು.

ವರ್ಷಗಳ ಪ್ರಯತ್ನಗಳು ಯಶಸ್ಸಾಗಿ ಪರಿವರ್ತನೆಯಾದಾಗ, ಜನರ ಮುಖದಲ್ಲಿ ಕಾಣುವ ಸಂತೋಷ, ಇಂದು ದೇಶಾದ್ಯಂತದ ಬಿಜೆಪಿ ಕಾರ್ಯಕರ್ತರ ಮುಖದಲ್ಲಿ ಕಾಣಿಸುತ್ತಿದೆ ಎಂದು ಹೇಳಿದ ಮೋದಿ, ನಾನು ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಸೇರಿದಂತೆ ತಮಿಳುನಾಡು ಮತ್ತು ಕೇರಳದ ಜನರಿಗೆ ಗೌರವಯುತವಾಗಿ ನಮಸ್ಕರಿಸುತ್ತೇನೆ ಎಂದು ಹೇಳಿದರು.

ನಾಗರಿಕ ದೇವೋ ಭವ ನಮ್ಮ ಪಕ್ಷದ ಧ್ಯೇಯ. ಎಲ್ಲಿ ಬಿಜೆಪಿ ಇದೆಯೋ ಅಲ್ಲಿ ಉತ್ತಮ ಆಡಳಿತ, ಎಲ್ಲಿ ಬಿಜೆಪಿ ಇದೆಯೋ ಅಲ್ಲಿ ವಿಕಾಸ್ ಎಂದು ಹೇಳಿದ ಮೋದಿ ಈಗ ಬಿಜೆಪಿ 20 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಕೇವಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿಗೆ ಜನಾಶೀರ್ವಾದ ದೊರಕಿದೆ ಎಂದು ಹೇಳಿದರು. ಇದು ನಂಬಿಕೆಯ ದಿನ. ಭಾರತದ ಮಹಾನ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿ. ಕಾರ್ಯಕ್ಷಮತೆಯ ರಾಜಕೀಯದಲ್ಲಿ ನಂಬಿಕೆ ಇರಿಸಿ, ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಮನೋಭಾವದಲ್ಲಿ ನಂಬಿಕೆ ಇರಿಸಿ ಎಂದರು.

ಒಟ್ನಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಈ ವಿಜಯೋತ್ಸವ ಕೇವಲ ಒಂದು ಪಕ್ಷದ ಸಂಭ್ರಮವಲ್ಲ, ಬದಲಿಗೆ ಬಂಗಾಳದ ಬದಲಾವಣೆಯ ಸಂಕೇತ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಮೋದಿಯವರ ಬಂಗಾಳಿ ಧೋತಿ ಮತ್ತು ಅವರ ಈ ಖಡಕ್ ಮಾತುಗಳು ಬಂಗಾಳ ಸೇರಿ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಎಂತಹ ‘ವಿಕಾಸ ಪರ್ವ’ಕ್ಕೆ ನಾಂದಿ ಹಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.


- Advertisement -spot_img

More articles

- Advertisement -spot_img

Latest article