No menu items!
14.1 C
Munich
Monday, May 11, 2026

ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ; ಬಂಗಾರದ ಬೆಲೆ ಕುಸಿತ

Must read

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಲೇ ಇತ್ತ ಭಾರತದ ಆರ್ಥಿಕತೆಯ ಮೇಲೂ ಅದರ ಬಿಸಿ ತಟ್ಟಲು ಶುರುವಾಗಿದೆ. ಈ ಸಂಕಷ್ಟದ ಸಮಯದಲ್ಲಿ ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಒಂದು ಕರೆ ಈಗ ಇಡೀ ದೇಶದ ಚಿನ್ನದ ಮಾರುಕಟ್ಟೆಯಲ್ಲಿ ತಲ್ಲಣದ ವಾತಾವರಣ ಸೃಷ್ಟಿಸಿದೆ. ಮುಂದಿನ ಒಂದು ವರ್ಷದವರೆಗೆ ಯಾರೂ ಚಿನ್ನ ಖರೀದಿಸಬೇಡಿ ಮತ್ತು ವಿದೇಶಿ ಪ್ರವಾಸ ಮಾಡಬೇಡಿ ಎಂದು ಮೋದಿ ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ಮನವಿ ಮಾಡಿದ್ದೇ ತಡ, ಇತ್ತ ಆಭರಣ ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆ ಅಕ್ಷರಶಃ ನೆಲಕಚ್ಚಿವೆ.

ನರೇಂದ್ರ ಮೋದಿ ಅವರ ಈ ಮಾತು ಹೊರಬೀಳುತ್ತಿದ್ದಂತೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಇಂದು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ನಡುಕ ಹುಟ್ಟಿಸಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್ ಮತ್ತು ರಸಗೊಬ್ಬರಗಳ ಬೆಲೆ ಏರುತ್ತಿರುವಾಗ, ವಿದೇಶಿ ವಿನಿಮಯವನ್ನು ಉಳಿಸುವುದು ಅನಿವಾರ್ಯವಾಗಿದೆ ಎಂಬ ಮೋದಿ ಅವರ ತರ್ಕ ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಿದೆ.

ಚಿನ್ನದ ದರ ಇಳಿಕೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲೂ ಆಭರಣ ಕಂಪನಿಗಳ ಷೇರುಗಳು ‘ರಕ್ತಸ್ನಾನ’ ಮಾಡಿವೆ. ದೇಶದ ಪ್ರತಿಷ್ಠಿತ ಕಂಪನಿ ಟೈಟಾನ್ ಸೇರಿದಂತೆ ಪ್ರಮುಖ ಜ್ಯುವೆಲ್ಲರಿ ಕಂಪನಿಗಳ ಷೇರುಗಳು ಶೇ. 12ರಷ್ಟು ಕುಸಿತ ಕಂಡು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿವೆ. ಕಲ್ಯಾಣ್ ಜ್ಯುವೆಲ್ಲರ್ಸ್, ಸೆನ್ಕೋ ಗೋಲ್ಡ್ ಮತ್ತು ಪಿಸಿ ಜ್ಯುವೆಲ್ಲರ್ಸ್ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಅಸಲಿಗೆ ಮೋದಿ ಈ ಮಾತು ಹೇಳಿದ್ದರ ಹಿಂದೆ ದೊಡ್ಡ ಆರ್ಥಿಕ ಲೆಕ್ಕಾಚಾರವಿದೆ. ಭಾರತವು ತನ್ನ ಚಿನ್ನದ ಅವಶ್ಯಕತೆಯನ್ನು ಬಹುಪಾಲು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತದೆ. ಹೀಗೆ ನಾವು ಚಿನ್ನ ಖರೀದಿಸಿದಾಗ ನಮ್ಮ ದೇಶದ ವಿದೇಶಿ ವಿನಿಮಯವು ದೊಡ್ಡ ಪ್ರಮಾಣದಲ್ಲಿ ಹೊರದೇಶಕ್ಕೆ ಹೋಗುತ್ತದೆ. ಯುದ್ಧದ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ಗಟ್ಟಿ ಮಾಡಬೇಕೆಂದರೆ ಆಮದು ವೆಚ್ಚ ತಗ್ಗಿಸುವುದು ಅನಿವಾರ್ಯ. ಈ ಸವಾಲನ್ನು ಎದುರಿಸಲು ಭಾರತೀಯರು ಸಿದ್ಧರಾಗಬೇಕು ಎಂದು ಪ್ರಧಾನಿ ನೇರವಾಗಿಯೇ ಕರೆ ನೀಡಿದ್ದಾರೆ.

ಈಗಾಗಲೇ ಮದುವೆ ಸೀಸನ್ ಶುರುವಾಗಿದ್ದು, ಚಿನ್ನ ಖರೀದಿಗೆ ಸಂಭ್ರಮದಿಂದ ತಯಾರಿ ನಡೆಸುತ್ತಿದ್ದ ಜನಸಾಮಾನ್ಯರಿಗೆ ಮೋದಿಯವರ ಈ ಮಾತು ಗೊಂದಲ ಮೂಡಿಸಿದೆ. ದೇಶಪ್ರೇಮ ಮುಖ್ಯವೋ ಅಥವಾ ಮದುವೆಗೆ ಚಿನ್ನ ಖರೀದಿಸುವುದು ಮುಖ್ಯವೋ? ಎಂಬ ಚರ್ಚೆ ಈಗ ಗಲ್ಲಿ ಗಲ್ಲಿಯಲ್ಲೂ ಶುರುವಾಗಿದೆ. ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಇಂಡೆಕ್ಸ್ ಕೂಡ ಶೇ. 3.5ಕ್ಕಿಂತ ಹೆಚ್ಚು ಕುಸಿತ ಕಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಒಂದೆಡೆ ಚಿನ್ನದ ಬೆಲೆ ಕುಸಿಯುತ್ತಿದ್ದರೆ, ಮತ್ತೊಂದೆಡೆ ಬೆಳ್ಳಿಯ ದರ ಮಾತ್ರ ಏರಿಕೆಯ ಹಾದಿಯಲ್ಲಿದೆ. ಮಾರುಕಟ್ಟೆಯ ಇಂದಿನ ಈ ಅನಿಶ್ಚಿತತೆ ಎಲ್ಲಿಗೆ ಬಂದು ನಿಲ್ಲುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿಲ್ಲುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ, ಪ್ರಧಾನಿಯವರ ಈ 10 ಅಂಶಗಳ ಮಂತ್ರವು ಭಾರತದ ಆರ್ಥಿಕತೆಯನ್ನು ಯಾವ ರೀತಿ ರಕ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article