No menu items!
12.4 C
Munich
Saturday, May 30, 2026

ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ‘ಯಡಿಯೂರಪ್ಪ ಅಭಿಮಾನೋತ್ಸವ’ಕ್ಕೆ ಚಾಲನೆ; ಅಮಿತ್ ಶಾ ಸಮ್ಮುಖದಲ್ಲಿ BSYಗೆ ಸನ್ಮಾನ

Must read

ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ‘ಯಡಿಯೂರಪ್ಪ ಅಭಿಮಾನೋತ್ಸವ’ಕ್ಕೆ ಚಾಲನೆ; ಅಮಿತ್ ಶಾ ಸಮ್ಮುಖದಲ್ಲಿ BSYಗೆ ಸನ್ಮಾನ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸುವ ಉದ್ದೇಶದಿಂದ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅದ್ದೂರಿಯಾಗಿ ಚಾಲನೆ ನೀಡಿದರು.
ಕೋಲ್ಕತ್ತಾದಿಂದ ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಭಾರೀ ಹರ್ಷೋದ್ಘಾರಗಳೊಂದಿಗೆ ಕಾರ್ಯಕರ್ತರು ಸ್ವಾಗತಿಸಿದರು. ವೇದಿಕೆಗೆ ಆಗಮಿಸಿದ ತಕ್ಷಣ ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದಿಸಿದ ಅಮಿತ್ ಶಾ, ಬಳಿಕ ಕೈ ಮೇಲೆತ್ತಿ ನಾಯಕತ್ವದ ಒಗ್ಗಟ್ಟಿನ ಸಂದೇಶ ರವಾನಿಸಿದರು.
ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಮಠಗಳ ಸ್ವಾಮೀಜಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಆಶೀರ್ವಾದ ನೀಡಿದರು. ಕಾರ್ಯಕ್ರಮದ ವೇಳೆ ಬಿ.ಎಸ್. ಯಡಿಯೂರಪ್ಪ ಅವರು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಜೀವನ ಮತ್ತು ಸಾಧನೆಗಳನ್ನು ಕುರಿತ ಎರಡು ವಿಶೇಷ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸನ್ಮಾನದ ವೇಳೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಯಡಿಯೂರಪ್ಪ ಮೊದಲು ನಿರಾಕರಿಸಿದರೂ, ಅಮಿತ್ ಶಾ ಸ್ವತಃ ಅವರ ಕೈ ಹಿಡಿದು ಕರೆತಂದು ಕುಳ್ಳಿರಿಸಿದರು. ಬಳಿಕ ಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ಹಾರ ಹಾಕುವ ಮೂಲಕ ಗೌರವ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ, ಸುತ್ತೂರು ಶ್ರೀ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿಗಳಾದ ರಾಧಾ ಮೋಹನ್ ಅಗರ್ವಾಲ್, ಸುಧಾಕರ್ ರೆಡ್ಡಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಡಿಯೂರಪ್ಪ ಅವರ ರಾಜಕೀಯ ಸೇವೆಯನ್ನು ಕೊಂಡಾಡಿದರು.

- Advertisement -spot_img

More articles

- Advertisement -spot_img

Latest article