ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ಸುಳ್ಳು. ನಾನು ಪಕ್ಷ ಹೇಳಿದಂತೆ ಕೇಳುವೆ, ತಮಿಳುನಾಡು ವಿಚಾರ ನನಗೆ ಗೊತ್ತಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ತಮಿಳುನಾಡಿನ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ಬಂದಿದ್ದಾರೆಯೇ ಎಂದು ಕೇಳಿದಾಗ, “ಯಾವ ಶಾಸಕರೂ ಈಗಲ್ ಟನ್ ರೆಸಾರ್ಟ್ ಗೆ ಬಂದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ಇದ್ದಿದ್ದರೆ ನಾನು ಹೇಳುತ್ತಿದ್ದೆ. ನವೀಕರಣ ಹಿನ್ನೆಲೆಯಲ್ಲಿ ಈಗಲ್ ಟನ್ ರೆಸಾರ್ಟ್ ಮುಚ್ಚಲಾಗಿದೆ. ಕೆಲವರು ಹೈದರಾಬಾದ್ ಗೆ ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಪಕ್ಷದ ಹೈಕಮಾಂಡ್ ನಾಯಕರು ಏನಾದರೂ ನಿರ್ದೇಶನ ನೀಡಿದರೆ ನಾನು ಅದನ್ನು ಪಾಲಿಸುವೆ. ಆದರೆ ಈವರೆಗೆ ಹೈಕಮಾಂಡ್ ನಾಯಕರು ನನ್ನ ಜೊತೆ ಏನೂ ಮಾತನಾಡಿಲ್ಲ. ಪಕ್ಷದ ನಾಯಕರ ನಿರ್ದೇಶನದಂತೆ ನಾನು ತಮಿಳುನಾಡಿನಲ್ಲಿ ಪ್ರಣಾಳಿಕೆ ಬಿಡುಗಡೆ ಹಾಗೂ ಪ್ರಚಾರಕ್ಕೆ ಹೋಗಿದ್ದೆ. ಅದಾದ ನಂತರ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು. ತಮಿಳುನಾಡಿನಲ್ಲಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬದಲಾಗುತ್ತಿದೆಯಲ್ಲ ಎಂದಾಗ, “ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದರು.



