ಬೆಂಗಳೂರಿಗರೇ ಗಮನಿಸಿ: ಸಿಎಂ ಪದಗ್ರಹಣ ಸಮಾರಂಭ ಹಿನ್ನೆಲೆ ನಾಳೆ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಸಂಜೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಹಲವು ಗಣ್ಯರು, ರಾಜಕೀಯ ನಾಯಕರು ಮತ್ತು ವಿಶೇಷ ಆಹ್ವಾನಿತರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವ್ಯಾಪಕ ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ.
ಲೋಕಭವನದಲ್ಲಿ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮ ಹಾಗೂ ರೇಸ್ಕೋರ್ಸ್ ರಸ್ತೆಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದ ಹಿನ್ನೆಲೆಯಲ್ಲಿ ಜೂನ್ 3ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ.
ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
• ಕಬ್ಬನ್ ರಸ್ತೆ – ಬಿ.ಆರ್.ವಿ ಜಂಕ್ಷನ್ನಿಂದ ಸಿ.ಟಿ.ಓ ಜಂಕ್ಷನ್ ಹಾಗೂ ಅಲ್ಲಿಂದ ಲೋಕಭವನದವರೆಗೆ
• ಬಾಳೇಕುಂದ್ರಿ ಜಂಕ್ಷನ್ನಿಂದ ಡಾ. ಅಂಬೇಡ್ಕರ್ ರಸ್ತೆ ಕಡೆಗೆ
• ಡಾ. ಅಂಬೇಡ್ಕರ್ ರಸ್ತೆ – ಕೆ.ಆರ್. ಸರ್ಕಲ್ನಿಂದ ಕಾಫಿ ಬೋರ್ಡ್ ಜಂಕ್ಷನ್ ವರೆಗೆ
• ರೇಸ್ಕೋರ್ಸ್ ರಸ್ತೆ – ಟ್ರಿಲೈಟ್ ಜಂಕ್ಷನ್ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ
• ಜೆಡಿಎಸ್ ಕ್ರಾಸ್ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ
• ಕ್ಲೀನ್ಸ್ ಜಂಕ್ಷನ್ನಿಂದ ಸಿ.ಟಿ.ಓ ಕಡೆಗೆ
• ಸೆಂಟ್ ಮಾರ್ಕ್ಸ್ ರಸ್ತೆಯಿಂದ ಕ್ಲೀನ್ಸ್ ಜಂಕ್ಷನ್ ಮೂಲಕ ಸಿ.ಟಿ.ಓ ಜಂಕ್ಷನ್ ಕಡೆಗೆ
ಕಾರ್ಯಕ್ರಮಕ್ಕೆ ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸಾರ್ವಜನಿಕರಿಗಾಗಿ ಪರ್ಯಾಯ ಮಾರ್ಗಗಳು
ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರು ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ:
• ಬಿ.ಆರ್.ವಿ ಜಂಕ್ಷನ್ನಿಂದ ಶಿವಾಜಿನಗರ ಅಥವಾ ಅನಿಲ್ ಕುಂಬ್ಳೆ ಜಂಕ್ಷನ್ ಮಾರ್ಗ
• ಕನ್ನಿಂಗ್ಹ್ಯಾಮ್ ರಸ್ತೆ ಮೂಲಕ ವಸಂತನಗರ ಸಂಪರ್ಕ
• ನೃಪತುಂಗ ರಸ್ತೆ ಮೂಲಕ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಸಂಚಾರ
• ಶಿವಾನಂದ ಜಂಕ್ಷನ್ ಹಾಗೂ ಎಸ್.ಸಿ. ರಸ್ತೆ ಮೂಲಕ ರೇಸ್ಕೋರ್ಸ್ ಪ್ರದೇಶಕ್ಕೆ ಪರ್ಯಾಯ ಸಂಚಾರ
• ಟಿನ್ ಫ್ಯಾಕ್ಟರಿ ಹಾಗೂ ಔಟರ್ ರಿಂಗ್ ರಸ್ತೆ ಮೂಲಕ ಹೆಬ್ಬಾಳ ಸಂಪರ್ಕ
ವಾಹನ ನಿಲುಗಡೆ ಸಂಪೂರ್ಣ ನಿಷೇಧ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಕ್ಲೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ಕೋರ್ಸ್ ರಸ್ತೆ, ಪಾರ್ಕ್ಹೌಸ್ ರಸ್ತೆ, ಮಿಲ್ಲರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಕಸ್ತೂರಿಬಾ ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಬದಿಯ ಪಾರ್ಕಿಂಗ್ಗೆ ಅವಕಾಶ ಇರುವುದಿಲ್ಲ.
ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ
ಪಾಸ್ ಹೊಂದಿರುವ ವಾಹನಗಳಿಗೆ:
• ವಿಧಾನಸೌಧ ಸಿಮೆಂಟ್ ಪಾರ್ಕಿಂಗ್
• ವಿಕಾಸಸೌಧ ಸುತ್ತಮುತ್ತಲಿನ ಪ್ರದೇಶ
• ರಾಜಭವನ ಹಿಂಭಾಗದ ಎಲ್.ಹೆಚ್. ಪಾರ್ಕಿಂಗ್
• ನೆಹರೂ ತಾರಾಲಯ ಆವರಣ
ಪಾಸ್ ಇಲ್ಲದ ವಾಹನಗಳಿಗೆ:
• ಕೊಂಡಜ್ಜಿ ಬಸಪ್ಪ ಭವನ ಆವರಣ
• ಶಿವಾಜಿನಗರ ಬಸ್ ನಿಲ್ದಾಣ ಮಲ್ಟಿ ಲೆವೆಲ್ ಪಾರ್ಕಿಂಗ್
• ಕಂಠೀರವ ಕ್ರೀಡಾಂಗಣ
• ಯು.ಬಿ. ಸಿಟಿ ಪಾರ್ಕಿಂಗ್
• ಕಾರ್ಪೊರೇಷನ್ ಕಚೇರಿ ಆವರಣ
• ಸರ್ಕಾರಿ ಕಲಾ ಕಾಲೇಜು ಆವರಣ
• ಪ್ಯಾಲೇಸ್ ಮೈದಾನದ ಗೇಟ್ ಸಂಖ್ಯೆ 2, 3 ಮತ್ತು 4
ಭಾರಿ ವಾಹನಗಳ ಸಂಚಾರಕ್ಕೂ ನಿರ್ಬಂಧ
ಜೂನ್ 3ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ಅನಗತ್ಯವಾಗಿ ನಗರ ಕೇಂದ್ರ ಭಾಗಕ್ಕೆ ವಾಹನಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ, ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.



