No menu items!
27.1 C
Munich
Tuesday, June 23, 2026

ಸಿನಿಮೀಯ ಶೈಲಿಯಲ್ಲಿ ಮಾಜಿ ಎಂಎಲ್ಸಿಯನ್ನೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ; ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

Must read

ಆನೇಕಲ್: ರಾಜಧಾನಿ ಬೆಂಗಳೂರಿನಲ್ಲಿ ಹಗಲು ದರೋಡೆಕೋರರು ಮತ್ತು ಸುಲಿಗೆಕೋರರ ಜಾಲ ಎಷ್ಟರಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ ಎಂಬುದಕ್ಕೆ ಜೂನ್ 01ರ ತಡರಾತ್ರಿ ನಡೆದ ಅತ್ಯಂತ ಆಘಾತಕಾರಿ ಘಟನೆಯೇ ಸಾಕ್ಷಿ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯ (ಮಾಜಿ MLC) ದಯಾನಂದರೆಡ್ಡಿ ಅವರನ್ನೇ ದುಷ್ಕರ್ಮಿಗಳ ಗ್ಯಾಂಗ್, ಗನ್ ಪಾಯಿಂಟ್‌ನಲ್ಲಿ ಅಪಹರಿಸಿ, ಕೋಟ್ಯಂತರ ರೂಪಾಯಿ ಸುಲಿಗೆಗೆ ಯತ್ನಿಸಿರುವ ರೋಚಕ ಪ್ರಕರಣ ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ಹುಸ್ಕೂರು ಕ್ರಾಸ್ ಹಾಗೂ ಹಿಲಲಿಗೆ ಗ್ರಾಮದ ಸಮೀಪ ಈ ಸಿನಿಮೀಯ ಮಾದರಿಯ ಕಿಡ್ನ್ಯಾಪ್ ನಡೆದಿದ್ದು, ಸದ್ಯ ಇಡೀ ಬೆಂಗಳೂರು ಗ್ರಾಮಾಂತರ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಪೊಲೀಸ್ ಮೂಲಗಳಿಂದ ಲಭ್ಯವಾಗಿರುವ ನಿಖರ ಮಾಹಿತಿಯ ಪ್ರಕಾರ, ಘಟನೆ ಜೂನ್ 1ರ ಮಧ್ಯರಾತ್ರಿ 12:15ರ ಸುಮಾರಿಗೆ ಸಂಭವಿಸಿದೆ. ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರು ಆನೇಕಲ್ ಬಾರ್ಡರ್‌ನಲ್ಲಿರುವ ಪ್ರಖ್ಯಾತ ‘ಗೋಲ್ಡ್ ಕಾಯಿನ್ ಕ್ಲಬ್’ ನಿಂದ ತಮ್ಮ ಐಷಾರಾಮಿ ಕಾರಿನಲ್ಲಿ ಒಬ್ಬರೇ ಒಂಟಿಯಾಗಿ ಮನೆಯತ್ತ ಹೊರಟಿದ್ದರು. ಅವರ ಕಾರು ಹಿಲಲಿಗೆ ಗ್ರಾಮದ ಸಮೀಪದ ನಿರ್ಜನ ಹಾಗೂ ಕತ್ತಲೆ ರಸ್ತೆಗೆ ಬರುತ್ತಿದ್ದಂತೆಯೇ, ಬೈಕ್‌ನಲ್ಲಿ ಹೊಂಚು ಹಾಕಿ ಹಿಂಬಾಲಿಸಿಕೊಂಡು ಬಂದಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಕಾರಿಗೆ ಅಡ್ಡಗಟ್ಟಿದ್ದಾರೆ. ಕಾರು ನಿಲ್ಲುತ್ತಿದ್ದಂತೆ ಸಖತ್ ವಿನಯವಂತರಂತೆ ನಟಿಸುತ್ತಾ ಕಾರಿನ ಗ್ಲಾಸ್ ತಟ್ಟಿದ ಖದೀಮರು, “ಸಾರ್, ನಿಮಗೆ ಯಾರೋ ಒಂದು ದೊಡ್ಡ ಸರ್ಪ್ರೈಸ್ ಗಿಫ್ಟ್ ಬಾಕ್ಸ್ ಕಳಿಸಿದ್ದಾರೆ ನೋಡಿ” ಎಂದು ಹೇಳಿ ಕೈಯಲ್ಲಿದ್ದ ಒಂದು ಕಾಟನ್ ಬಾಕ್ಸ್ ಅನ್ನು ತೋರಿಸಿದ್ದಾರೆ.

ರಾತ್ರಿ ಹೊತ್ತಿನಲ್ಲಿ ಗಿಫ್ಟ್ ಬಂದಿದೆ ಎಂದ ತಕ್ಷಣ ದಯಾನಂದರೆಡ್ಡಿ ಅವರು ಯಾವುದೇ ಅನುಮಾನ ಪಡದೆ, ವಿಚಾರಿಸೋಣ ಎಂದು ಕಾರಿನ ಸೆಂಟ್ರಲ್ ಡೋರ್ ಲಾಕ್ ಬಿಚ್ಚಿದ್ದಾರೆ. ಅಷ್ಟೇ, ಅಲ್ಲಿಯವರೆಗೆ ಸೌಮ್ಯವಾಗಿದ್ದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ತಮ್ಮ ಅಸಲಿ ಕ್ರಿಮಿನಲ್ ಮುಖವಾಡ ಕಳಚಿಟ್ಟಿದ್ದಾರೆ. ಡೋರ್ ಲಾಕ್ ಓಪನ್ ಆಗುತ್ತಿದ್ದಂತೆಯೇ ಓರ್ವ ಕಿಡ್ನ್ಯಾಪರ್ ಸೀದಾ ಕಾರಿನೊಳಗೆ ನುಗ್ಗಿದ್ದಾನೆ. ಒಳಗೆ ನುಗ್ಗಿದ್ದೇ ತಡ ತನ್ನ ಸೊಂಟದಲ್ಲಿದ್ದ ಲೋಡೆಡ್ ಪಿಸ್ತೂಲ್ (ಗನ್) ಹೊರತೆಗೆದು ನೇರವಾಗಿ ದಯಾನಂದರೆಡ್ಡಿ ಅವರ ಕುತ್ತಿಗೆಗೆ ಇಟ್ಟಿದ್ದಾನೆ. “ನಾನು ಹೇಳಿದ ಕಡೆಗೆ ಸದ್ದಿಲ್ಲದೆ ಕಾರು ಚಲಾಯಿಸು, ಒಂದು ಚೂರು ಕಿರುಚಾಡಿದರೂ ಇಲ್ಲೇ ಶೂಟ್ ಮಾಡಿ ಹೆಣ ಉರುಳಿಸ್ತೀನಿ” ಎಂದು ಭೀಕರವಾಗಿ ಧಮಕಿ ಹಾಕಿದ್ದಾನೆ. ಇತ್ತ ಕಾರು ಚಲಿಸಲು ಪ್ರಾರಂಭಿಸುತ್ತಿದ್ದಂತೆಯೇ, ಕೆಂಪು ಬಣ್ಣದ ಕಾರಿನಲ್ಲಿ ಹೊಂಚು ಹಾಕಿ ನಿಂತಿದ್ದ ಈ ಗ್ಯಾಂಗ್‌ನ ಇನ್ನುಳಿದ ಇಬ್ಬರು ರೌಡಿಗಳು ಕಾರನ್ನು ಫಾಲೋ ಮಾಡಿದ್ದಾರೆ.

ದಯಾನಂದರೆಡ್ಡಿ ಅವರ ಕಾರನ್ನು ಸೀದಾ ಅತ್ತಿಬೆಲೆಯ ಕೆಹೆಚ್‌ಬಿ ಬಡಾವಣೆ (KHB Colony) ಸಮೀಪದ ಅನಾಮಧೇಯ ಹಾಗೂ ಕತ್ತಲೆ ತುಂಬಿದ ಪಾಳು ಜಾಗಕ್ಕೆ ಎಳೆದೊಯ್ದ ಅಪಹರಣಕಾರರು, ಅಲ್ಲಿ ಅಸಲಿ ಸುಲಿಗೆ ಆಟ ಶುರು ಮಾಡಿದ್ದಾರೆ. ಕುತ್ತಿಗೆಗೆ ಗನ್ ಒತ್ತಿ ಟ್ರಿಗರ್ ಮೇಲೆ ಕೈ ಇಟ್ಟು ಕೊಲೆ ಬೆದರಿಕೆ ಹಾಕಿದ್ದಾರೆ. ಕಣ್ಣೆದುರೇ ಸಾವು ನೆರಳಿನಂತೆ ಬಂದು ನಿಂತಾಗ ದಯಾನಂದರೆಡ್ಡಿ ಒಂದು ಕ್ಷಣ ದಿಕ್ಕೆಟ್ಟರೂ, ತಕ್ಷಣವೇ ತೀವ್ರ ಸಮಯಪ್ರಜ್ಞೆ ಮೆರೆದಿದ್ದಾರೆ.

ತಮ್ಮ ಪ್ರಾಣ ಉಳಿಸಿಕೊಳ್ಳಲು ತಕ್ಷಣವೇ ಚಾಣಾಕ್ಷತನದ ಪ್ಲಾನ್ ಮಾಡಿದ ಮಾಜಿ ಎಂಎಲ್‌ಸಿ, ನನ್ನನ್ನು ದಯವಿಟ್ಟು ಕೊಲ್ಲಬೇಡಿ, ಆ ಸುಪಾರಿ ಹಣ ಎಷ್ಟಿದೆಯೋ ಅದನ್ನು ನಾನೇ ನಿಮಗೆ ಹೊಂದಿಸಿಕೊಡ್ತೀನಿ ಎಂದು ಅಪಹರಣಕಾರರ ಮುಂದೆ ಮನವಿ ಮಾಡಿ ಡೀಲ್‌ಗೆ ಇಳಿದಿದ್ದಾರೆ. ಮೊದಲು ಸೀದಾ 3 ಕೋಟಿ ರೂಪಾಯಿ ನಗದು ಬೇಕೇ ಬೇಕು ಎಂದು ಹಟ ಹಿಡಿದಿದ್ದ ಅಪಹರಣಕಾರರ ಗ್ಯಾಂಗ್, ಕತ್ತಲಲ್ಲಿ ನಡೆದ ಸುದೀರ್ಘ ಸಂಧಾನದ ಬಳಿಕ ಅಂತಿಮವಾಗಿ 2 ಕೋಟಿ ರೂಪಾಯಿ ಫೈನಲ್ ಸೆಟಲ್ಮೆಂಟ್‌ಗೆ ಒಪ್ಪಿಕೊಂಡಿದ್ದಾರೆ.

ಈಗ ಮಧ್ಯರಾತ್ರಿಯಾಗಿರುವುದರಿಂದ ನನ್ನ ಬಳಿ ಅಷ್ಟೊಂದು ದೊಡ್ಡ ಮೊತ್ತದ ನಗದು ಹಣ ಇರಲ್ಲ. ಬೆಳಗ್ಗೆ ಬ್ಯಾಂಕ್ ಓಪನ್ ಆಗುತ್ತಿದ್ದಂತೆಯೇ 2 ಕೋಟಿ ರೂಪಾಯಿ ಹಣ ಡ್ರಾ ಮಾಡಿ ನಿಮಗೆ ತಲುಪಿಸ್ತೀನಿ ಎಂದು ದಯಾನಂದರೆಡ್ಡಿ ಮಾತು ಕೊಟ್ಟಿದ್ದಾರೆ. ಇದಕ್ಕೆ ಒಪ್ಪಿದ ಕಿಡ್ನ್ಯಾಪರ್ಸ್ ಗ್ಯಾಂಗ್, ಬೆಳಗ್ಗೆ ಹಣ ಡ್ರಾ ಮಾಡಿದ ತಕ್ಷಣ ನಮಗೆ ನಾವೇ ಕರೆ ಮಾಡ್ತೀವಿ ಎಂದು ವಾರ್ನಿಂಗ್ ನೀಡಿ ಅವರನ್ನ ಅಲ್ಲೇ ಬಿಟ್ಟು ತಮ್ಮ ಕೆಂಪು ಕಾರಿನಲ್ಲಿ ಪರಾರಿಯಾಗಿದ್ದಾರೆ. ಖದೀಮರ ಕೈಯಿಂದ ಹೇಗೋ ಪ್ರಾಣ ಉಳಿಸಿಕೊಂಡು ಬಂದ ಮಾಜಿ ಶಾಸಕ, ಬೆಳಗ್ಗೆ ತಡಮಾಡದೆ ಸೀದಾ ಅತ್ತಿಬೆಲೆ ಪೊಲೀಸ್ ಸ್ಟೇಷನ್‌ಗೆ ಓಡಿಹೋಗಿ ಇಡೀ ಕರಾಳ ಕತೆಯನ್ನು ಬಿಚ್ಚಿಟ್ಟು ದೂರು ದಾಖಲಿಸಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯನನ್ನೇ ಗನ್ ಪಾಯಿಂಟ್‌ನಲ್ಲಿ ಕಿಡ್ನ್ಯಾಪ್ ಮಾಡಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಸುದ್ದಿ ಹರಡುತ್ತಿದ್ದಂತೆಯೇ ಇಡೀ ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ಕಂಪ್ಲೀಟ್ ಅಲರ್ಟ್ ಆಗಿದೆ. ಸದ್ಯ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದರೋಡೆ ಹಾಗೂ ಅಪಹರಣದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಅಫೀಶಿಯಲ್ ಆಗಿ ಎಫ್‌ಐಆರ್ (FIR) ದಾಖಲಾಗಿದೆ. ಘಟನಾ ಸ್ಥಳದ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ದಯಾನಂದರೆಡ್ಡಿ ಅವರ ಮೊಬೈಲ್ ಕರೆಗಳ ಹಿನ್ನೆಲೆ ಇಟ್ಟುಕೊಂಡು ಅಪಹರಣಕಾರರ ಆ ಕೆಂಪು ಕಾರು ಮತ್ತು ಬೈಕ್ ಗ್ಯಾಂಗ್ ಬೆನ್ನಟ್ಟಲು ಪೊಲೀಸರು ಹತ್ತಾರು ಟೀಮ್‌ಗಳನ್ನು ರಚಿಸಿ ತಮಿಳುನಾಡು-ಕರ್ನಾಟಕ ಬಾರ್ಡರ್‌ನಲ್ಲಿ ಜಾಲ ಬೀಸಿದ್ದಾರೆ.

- Advertisement -spot_img

More articles

- Advertisement -spot_img

Latest article