No menu items!
17.5 C
Munich
Friday, August 14, 2026

ಮಹಿಳಾ PSIಗೆ ಶಾಸಕ ಸುರೇಶ್ ಗೌಡ ಪುತ್ರಿಯಿಂದ ಕಪಾಳಮೋಕ್ಷ! ದೂರು ದಾಖಲು

Must read

ಮಹಿಳಾ PSIಗೆ ಶಾಸಕ ಸುರೇಶ್ ಗೌಡ ಪುತ್ರಿಯಿಂದ ಕಪಾಳಮೋಕ್ಷ! ದೂರು ದಾಖಲು

ಮಂಡ್ಯ: ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ (PSI) ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.

ಬುಧವಾರ (ಆ.12) ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಇದೇ ವೇಳೆ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಕೂಡ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.

ಪ್ರಭಾವ ಬಳಸಿ ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದ ಬಳಿಕ ಐಶ್ವರ್ಯ ಅವರು ನೇರವಾಗಿ ದೇವರ ಗರ್ಭಗುಡಿಯೊಳಗೆ ತೆರಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ PSI ಸವಿತಾ ಅವರು ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸದ್ಯ ಗರ್ಭಗುಡಿಯೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್‌ ಇನ್‌ಸ್ಪೆಕ್ಟರ್‌ ಲಕ್ಷ್ಮೀ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯ, ಅವರನ್ನು ಒಳಗೆ ಹೇಗೆ ಬಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಅದಕ್ಕೆ PSI ಸವಿತಾ ಅವರು, ಅವರು ನಮ್ಮ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದು, ಕರ್ತವ್ಯದಲ್ಲಿದ್ದಾರೆ ಎಂದು ಉತ್ತರಿಸಿದ್ದಾರೆ. ಬಳಿಕ ತಮಗೂ ಗರ್ಭಗುಡಿಯೊಳಗೆ ತೆರಳಲು ಅವಕಾಶ ನೀಡಬೇಕು ಎಂದು ಐಶ್ವರ್ಯ ಪಟ್ಟು ಹಿಡಿದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ವಾಗ್ವಾದ ತೀವ್ರಗೊಂಡ ಸಂದರ್ಭದಲ್ಲಿ ಐಶ್ವರ್ಯ ಅವರು ಕರ್ತವ್ಯದಲ್ಲಿದ್ದ PSI ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article