No menu items!
28.9 C
Munich
Wednesday, August 19, 2026

ರಾಹುಲ್ ಗಾಂಧಿಗೆ ಪರಿಜ್ಞಾನ ಕಡಿಮೆ; ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಆರ್. ಅಶೋಕ್ ವಾಗ್ದಾಳಿ

Must read

ರಾಹುಲ್ ಗಾಂಧಿಗೆ ಪರಿಜ್ಞಾನ ಕಡಿಮೆ; ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಆರ್. ಅಶೋಕ್ ವಾಗ್ದಾಳಿ

ಚಿತ್ರದುರ್ಗ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ವಿಷಯದ ಬಗ್ಗೆ ಸಮರ್ಪಕ ಪರಿಜ್ಞಾನವಿಲ್ಲ. ಅವರು ಯಾವಾಗ ಭಾರತದಲ್ಲಿರುತ್ತಾರೆ, ಎಲ್ಲಿರುತ್ತಾರೆ ಮತ್ತು ಏನು ಮಾತನಾಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ ಎಂದು ಟೀಕಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಕಳೆದ 15-20 ದಿನಗಳಿಂದ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಏಕಾಏಕಿ ಪ್ರತಿಭಟನೆಯಲ್ಲಿ ಭಾಗವಹಿಸಿ ಆರೋಪ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಸತ್ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ತೀರ್ಪು ರಾಜ್ಯದ ಕಾವೇರಿ ಕೊಳ್ಳವನ್ನು ಬರಿದಾಗಿಸುವ ಪ್ರಯತ್ನವಾಗಿದೆ. ಈ ಬೆಳವಣಿಗೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದರು.
ಬರ ಪರಿಸ್ಥಿತಿ ಗೊತ್ತಿದ್ದರೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ರಾಜ್ಯದ ವಾದ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾವೇರಿ ಪ್ರಕರಣಕ್ಕಾಗಿ ನೂರಾರು ಕೋಟಿ ರೂಪಾಯಿ ವಕೀಲರ ಶುಲ್ಕ ಪಾವತಿಸಿದ್ದರೂ ಅದರ ಪ್ರಯೋಜನವಾಗಿಲ್ಲ ಎಂದು ಅಶೋಕ್ ಟೀಕಿಸಿದರು.
ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಮುಖ್ಯಮಂತ್ರಿ ಯಾವುದೇ ಸರ್ವಪಕ್ಷ ಸಭೆ ಕರೆದಿಲ್ಲ. ಆದರೆ ತಮಿಳುನಾಡಿನಲ್ಲಿ ವಿಧಾನಸಭೆ ವಿಶೇಷ ಸಭೆ ನಡೆಸಿ ಮೇಕೆದಾಟು ಯೋಜನೆಗೆ ವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಮಾತ್ರ ಈ ವಿಚಾರದಲ್ಲಿ ಸರ್ಕಾರ ಗಂಭೀರತೆ ತೋರಿಲ್ಲ ಎಂದು ಅವರು ಆರೋಪಿಸಿದರು.
ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇದೀಗ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಸಭೆಯ ಬಳಿಕ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಅವರು ಹೇಳಿಕೊಂಡು ಹೋಗುತ್ತಾರೆ. ನಮ್ಮ ರಾಜ್ಯದ ನೆಲದಲ್ಲೇ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ನೀಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ನಡೆಯಲಿರುವ ಸಭೆ ಕರ್ನಾಟಕಕ್ಕೆ ಪ್ರಯೋಜನವಾಗುವುದಿಲ್ಲ, ಬದಲಿಗೆ ತಮಿಳುನಾಡಿಗೆ ಅನುಕೂಲವಾಗುವ ಸಭೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

- Advertisement -spot_img

More articles

- Advertisement -spot_img

Latest article