ಬಹುನಿರೀಕ್ಷಿತ ‘ರಾಮಾಯಣ’ ಟ್ರೇಲರ್ ರಿಲೀಸ್: ಎ.ಆರ್. ರೆಹಮಾನ್-ಹ್ಯಾನ್ಸ್ ಜಿಮ್ಮರ್ ಸಂಗೀತಕ್ಕೆ ಸಿನಿಪ್ರಿಯರು ಫಿದಾ!
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘ರಾಮಾಯಣ: ಪಾರ್ಟ್ 1’ ಚಿತ್ರದ ಅಧಿಕೃತ ಟ್ರೇಲರ್ ಇಂದು ಜಾಗತಿಕವಾಗಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, ವಿಶ್ವದಾದ್ಯಂತ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ಅನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಿರುವ ಈ ಚಿತ್ರವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ DNEG ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಚಿತ್ರವು 2026ರ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ಭವ್ಯವಾಗಿ ಬಿಡುಗಡೆಯಾಗಲಿದ್ದು, ಜಾಗತಿಕ ವಿತರಣೆಯನ್ನು ಸೋನಿ ಪಿಕ್ಚರ್ಸ್ ಮತ್ತು ಉತ್ತರ ಭಾರತದ ವಿತರಣೆಯನ್ನು ಧರ್ಮ ಪ್ರೊಡಕ್ಷನ್ಸ್ ವಹಿಸಿಕೊಂಡಿವೆ.
ವಿಶ್ವದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ಎರಡು ಭಾಗಗಳ ಅದ್ಧೂರಿ ಸಿನಿಮ್ಯಾಟಿಕ್ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ, ಶ್ರೀರಾಮನ ಅವತಾರ ಹಾಗೂ ಅಹಂಕಾರದ ಪ್ರತೀಕವಾಗಿರುವ ರಾವಣನ ವಿರುದ್ಧದ ಧರ್ಮಯುದ್ಧವನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೃಶ್ಯ ವೈಭವದೊಂದಿಗೆ ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರೆ, ರಾಕಿಂಗ್ ಸ್ಟಾರ್ ಯಶ್ ಪ್ರಬಲ ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯಶ್ ಈ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಸಾಯಿ ಪಲ್ಲವಿ ಸೀತಾ ಮಾತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಅರುಣ್ ಗೋವಿಲ್ ದಶರಥ, ಶೋಭನಾ ಕೈಕೇಸಿ, ಅಜಿಂಕ್ಯ ದೇವ್ ವಿಶ್ವಾಮಿತ್ರ, ಕುನಾಲ್ ಕಪೂರ್ ಇಂದ್ರ ದೇವ ಹಾಗೂ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಚಿತ್ರಕಥೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀಧರ್ ರಾಘವನ್ ಬರೆದಿದ್ದು, ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಂಯೋಜನೆ ಮೂಡಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಮೊದಲ ಬಾರಿಗೆ ಒಟ್ಟಾಗಿ ಈ ಚಿತ್ರಕ್ಕೆ ಸಂಗೀತ ನೀಡಿರುವುದು ವಿಶೇಷ ಆಕರ್ಷಣೆಯಾಗಿದೆ.
ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, “ರಾಮಾಯಣ ಕೇವಲ ಒಂದು ಮಹಾಕಾವ್ಯವಲ್ಲ; ಅದು ಭಾರತದ ಸಂಸ್ಕೃತಿ, ಮೌಲ್ಯಗಳು ಮತ್ತು ಜೀವನಶೈಲಿಯ ಪ್ರತೀಕ. ಈ ಮಹಾನ್ ಕಥೆಯನ್ನು ವಿಶ್ವಮಟ್ಟದಲ್ಲಿ ಅತ್ಯುನ್ನತ ತಾಂತ್ರಿಕ ಗುಣಮಟ್ಟದೊಂದಿಗೆ ಪ್ರಸ್ತುತಪಡಿಸುವುದು ನಮ್ಮ ಕನಸಾಗಿತ್ತು. ಇಂದು ಅದನ್ನು ಸಾಕಾರಗೊಳಿಸಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ, “ರಾಮಾಯಣವು ಕೇವಲ ಅದರ ಭವ್ಯತೆಯಿಂದಲ್ಲ, ಅದರಲ್ಲಿರುವ ಶಾಶ್ವತ ಮಾನವೀಯ ಮೌಲ್ಯಗಳಿಂದ ಶ್ರೇಷ್ಠವಾಗಿದೆ. ಆ ಮೌಲ್ಯಗಳಿಗೆ ಧಕ್ಕೆಯಾಗದಂತೆ, ಅತ್ಯಂತ ಗೌರವ ಮತ್ತು ಪ್ರಾಮಾಣಿಕತೆಯಿಂದ ಈ ಕಥೆಯನ್ನು ತೆರೆಗೆ ತರಲು ಪ್ರಯತ್ನಿಸಿದ್ದೇವೆ. ಪ್ರೇಕ್ಷಕರು ದೃಶ್ಯ ವೈಭವದ ಜೊತೆಗೆ ರಾಮಾಯಣದ ಆತ್ಮವನ್ನೂ ಅನುಭವಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು ಮೂರು ದಶಕಗಳ ಅನುಭವ ಹೊಂದಿರುವ DNEG ಸಂಸ್ಥೆ ಇದುವರೆಗೆ 8 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದು, ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನಕ್ಕಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಇದೇ ವೇಳೆ, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಯಶ್, ‘ಟಾಕ್ಸಿಕ್’ ಹಾಗೂ ‘ರಾಮಾಯಣ’ದಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಹ-ನಿರ್ಮಾಣ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುತ್ತಿದ್ದಾರೆ.



