ಈ ಪ್ರೇಮಿಗೆ ನಿಮ್ಮ ಸಲಹೆ ಬೇಕಿದೆ..! ಅಂದು ವಿಳಾಸ ಕೇಳಿದವಳು ಇಂದು ಹೃದಯದಲ್ಲಿ ಜಾಗ ಕೇಳುತ್ತಿದ್ದಾಳೆ..!

0
152

ಎಂ.ಕಾಂ ಮಾಡುತ್ತಿರುವಾಗ ತಾನೇ ನಿರ್ದೇಶಿಸುತ್ತಿದ್ದ ಕಿರುಚಿತ್ರವೊಂದರ ಚಿತ್ರೀಕರಣಕ್ಕಾಗಿ ಅವನು ಮೈಸೂರಿಗೆ ಹೋಗಿದ್ದ. ಮೈಸೂರಿನ ಅರಮನೆ ಸಮೀಪ ಸಿನಿಮಾ ಚಿತ್ರೀಕರಿಸುತ್ತಿದ್ದ. ಆಗ ಅವನ ಬಳಿ ಬಂದ ಹುಡುಗಿಯೊಬ್ಬಳು ಯಾವುದೋ ವಿಳಾಸವನ್ನು ಕೇಳಿದಳು. ವಿಳಾಸವನ್ನು ಹೇಳಿದ ಅವನಿಗೆ ನಗುತ್ತಾ ಥ್ಯಾಂಕ್ಯೂ ಎಂದು ಹೊರಟು ಹೋದಳು..! ಅವತ್ತು ವಿಳಾಸ ಕೇಳಿ ಹೊರಟು ಹೋದ ಆಕೆ ಒಂದು ವರ್ಷದ ನಂತರ ಮತ್ತೆ ಶ್ರೀರಂಗಪಟ್ಟಣದಲ್ಲಿ ಭೇಟಿ ಆದಳು..! ಅದೂ ಕೂಡ ಆಕಸ್ಮಿಕವಾಗಿ…! ಚಾಮುಂಡಿಬೆಟ್ಟಕ್ಕೆ ಅವಳು ಅವಳ ಗೆಳತಿಯರೊಡನೆ ಬಂದಿದ್ದಳು..! ಅವನೂ ಕೂಡ ಸ್ನೇಹಿತರೊಡನೆ ಅಲ್ಲಿಗೆ ಹೋಗಿದ್ದ..! ದೇವರ ದರ್ಶನಕ್ಕೆ ಕಾಯುತ್ತಿರುವಾಗ ಅವನ ಕಣ್ಣಿಗೆ ಅವಳು ಬಿದ್ದಳು, ಅವಳ ಕಣ್ಣಿಗೂ ಇವನು ಕಂಡ..! ಇಬ್ಬರಿಗೂ ಒಬ್ಬರನೊಬ್ಬರು ಈ ಹಿಂದೆ ಎಲ್ಲೋ ಭೇಟಿಯಾಗಿದ್ದ ನೆನಪು..ಆದ್ರೆ ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ..! ಅವಳೇ ಅವನ ಬಳಿ ಬಂದು ತನ್ನ ಪರಿಚಯ ಮಾಡಿಕೊಂಡಳು..! ಸಾರ್, ನನ್ನ ಹೆಸರು `ಅಂಬಿಕಾ’, ನಿಮ್ಮನ್ನು ಎಲ್ಲೋ ನೋಡಿದ ನೆನಪು ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ ಅಂತ ಹೇಳಿದಳು..! ಅದಕ್ಕೆ ಹಾಯ್, ನಾನು `ವಿನಯ್’ ನನಗೂ ನಿಮ್ಮನ್ನು ಎಲ್ಲೋ ನೋಡಿದ ನೆನಪು ಅಂದ..!
ವಿನಯ್ ಹೆಗಲಲ್ಲಿದ್ದ ಕ್ಯಾಮರವನ್ನು ನೋಡಿ ಅವಳಿಗೆ ನೆನಪಾಯಿತು..! ಸಾರ್, ಒಂದು-ಒಂದುವರೆ ವರ್ಷದ ಹಿಂದೆಯೂ ಮೈಸೂರಿಗೆ ಬಂದಿದ್ದೆ..! ಆಗ ನಿಮ್ಮ ಬಳಿ ವಿಳಾಸ ಕೇಳಿದ್ದೆ..! ಬ್ಯುಸಿ ಇದ್ದರೂ ನೀವು, ನನಗೆ ವಿಳಾಸವನ್ನು ಅರ್ಥವಾಗುವಂತೆ ಹೇಳಿದ್ರಿ ಅಂದಳು..! ಓಹೋ, ಅವತ್ತು ಗೊತ್ತಾಯ್ತು, ಈಗ ನೆನಪಾಯ್ತು.. ಅಂದ..! ಅವತ್ತು ವಿಳಾಸ ಗೊತ್ತಿಲ್ಲದೇ ಸುಮ್ಮನೇ ಏನೇನೋ ಹೇಳಿ ಆಕೆಯನ್ನು ಕಳುಹಿಸಿದ್ದು ಅವನಿಗೆ ನೆನಪಾಯಿತು..! ಮಾತನ್ನು ಬೇರೇ ಕಡೆ ಹೊರಳಿಸೋಕೆ ಹೋದ. ಆಗ ಅಂಬಿಕಾ, “ಸಾರ್ ನಿಮಗೆ ಮೈಸೂರು ತುಂಬಾ ಚೆನ್ನಾಗಿ ಗೊತ್ತು ಅನಿಸುತ್ತೆ..! ವಿಳಾಸವನ್ನು ಎಷ್ಟು ಸುಲಭವಾಗಿ ತಕ್ಷಣವೇ ಹೇಳಿ ಬಿಡ್ತೀರಿ..” ಅಂತ ವ್ಯಂಗ್ಯವಾಗಿ ಹೇಳಿದ್ಲು..! ಇಲ್ಲ, ನಾನು ನಿಮಗೆ ಸರಿಯಾಗೇ ವಿಳಾಸ ಹೇಳಿರ್ತೀನಿ, ನೀವು ಮಿಸ್ ಮಾಡಿಕೊಂಡಿದ್ದೀರಿ ಅನಿಸುತ್ತೆ..! ನನಗೂ ಮೈಸೂರು ಅಷ್ಟಾಗಿ ಗೊತ್ತಿಲ್ಲ..! ಆಗಾಗ ಬರ್ತಿರ್ತೀನಿ. ಅವತ್ತು ಶಾರ್ಟ್ ಮೂವಿ ಶೂಟಿಂಗ್ಗೆ ಬಂದಿದ್ದೆ, ಇವತ್ತು ಫ್ರೆಂಡ್ಸ್ ಜೊತೆ ಜಾಲಿ ರೈಡ್ ಬಂದಿದ್ದೇನೆ ಎಂದ..! ಹೀಗೆ ಮಾತಾಡ್ತಾ ಮಾತಾಡ್ತಾ ಉದ್ದನೆಯ ಕ್ಯೂನಲ್ಲಿ ದೇವಿ ದರ್ಶನ ಆಗುವಷ್ಟರಲ್ಲಿ ಅವಳ ಫೋನ್ ನಂಬರ್ ಇವನಿಗೂ ಇವನ ಫೋನ್ ನಂಬರ್ ಅವಳಿಗೂ ಸಿಕ್ಕಾಗಿತ್ತು, ಹೌದು ಇಬ್ಬರೂ ಫೋನ್ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡು ಬಿಟ್ಟಿದ್ರು..!
ಅಂಬಿಕಾ ಬೆಂಗಳೂರಿನ ಯಶವಂತಪುರದವಳು. ವಿನಯ್ ದಾವಣೆಗೆರೆ ವಿವಿಯಲ್ಲಿ ಎಂಕಾಂ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಆರೇಳು ತಿಂಗಳಾಗಿವೆ..! ರಾಜಾಜಿನಗರದಲ್ಲಿದ್ದಾನೆ.
ಮೈಸೂರು ಅರಮನೆ ಎದುರು ವಿಳಾಸ ಕೇಳುವ ನೆಪದಲ್ಲಿ ಭೇಟಿಯಾಗಿದ್ದ ಹುಡುಗಿ ಅಂಬಿಕಾ, ಒಂದು ವರ್ಷದ ನಂತರ ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಪರಿಚಯವಾಗಿದ್ದು, ಆ ಪರಿಚಯದ ಹೆಚ್ಚು ಕಡಿಮೆ ಒಂದು ವರ್ಷದ ನಂತರ ವಿನಯ್ ಅವಳಿರೋ ಬೆಂಗಳೂರಿಗೇ ಬಂದಿದ್ದಾನೆ..! ಇವತ್ತು ವಿನಯ್ ಅಂಬಿಕಾಳಿಗೆ ಮಾತ್ರ ಆತ್ಮೀಯ ಸ್ನೇಹಿತನಲ್ಲ..! ಅವಳ ಅಪ್ಪ ಅಮ್ಮನೂ ತುಂಬಾ ಇಷ್ಟ ಪಡುವ ಹುಡುಗ..! ಅಂಬಿಕಾ ಎಂಎಸ್ಸಿ ಮುಗಿಸಿ ಅಪ್ಪನ ಬ್ಯುಸಿನೆಸ್ ಗೆ ಸಹಕರಿಸ್ತಾ ಇದ್ದಾಳೆ..! ವಿನಯ್ ಎಲ್ಲಿಗೇ ಹೊರಟರೂ ಅವಳ ಕಾರಲ್ಲೇ ಅವನೊಡನೆ ಹೋಗುತ್ತಾಳೆ..! ವಿನಯ್ ಜೊತೆಗೆ ಯಾವುದೇ ಟೆಂಕ್ಷನ್ ಇಲ್ಲದೆ ಅಂಬಿಕಾಳ ಅಪ್ಪ ಅಮ್ಮ ಅವಳನ್ನು ಕಳುಹಿಸಿಕೊಡುತ್ತಾರೆ..!
ಕೆಲವೇ ದಿನಗಳ ಹಿಂದೆ ಹೈದರಾಬಾದ್ ಗೆ ಇಬ್ಬರೇ ಒಟ್ಟಾಗಿ ಹೋಗಿ ಬಂದಿದ್ದ ವಿನಯ್, ಅಂಬಿಕಾ ಬೆಂಗಳೂರಲ್ಲಿ ಸಮಯ ಸಿಕ್ಕಾಗೆಲ್ಲಾ ಒಟ್ಟಾಗೇ ಸುತ್ತುತ್ತಾರೆ..! ಮೊನ್ನೆ ಮೊನ್ನೆ ವಿನಯ್ ಜೊತೆ ಅವಳ ಕಾರಲ್ಲೇ ಅವನ ಮನೆಗೆ ಹೋಗಿ ಬಂದಿದ್ದಾಳೆ..! ಅವಳ ಅಪ್ಪ ಅಮ್ಮನೂ ಅವಳನ್ನು ಪ್ರಶ್ನೆ ಮಾಡುವುದಿಲ್ಲ..! ಯಾಕಂದ್ರೆ ವಿನಯ್ ಅವರಿಗೆ ತುಂಬಾ ಹಿಡಿಸಿ ಬಿಟ್ಟಿದ್ದಾನೆ..! ರಾಜಾಜಿನಗರದಲ್ಲಿ ಪಿಜಿಯಲ್ಲಿದ್ದರೂ ಇವನು ಹೆಚ್ಚಾಗಿ ಇರೋದು ಅವರ ಮನೆಯಲ್ಲೇ ಆಗಿಬಿಟ್ಟಿದೆ..!
ಮೊನ್ನೆ ಮೊನ್ನೆ ಅಂಬಿಕಾ ವಿನಯ್ ಹತ್ತಿರ, `ನಮ್ಮ ಮನೆಯಲ್ಲಿ ಒಪ್ಪಿಸಿ ಆಗಿದೆ. ಇನ್ನು ನಿಮ್ಮ ಮನೆಯಲ್ಲಿ ಒಪ್ಪಿಸ ಬೇಕಾಗಿದ್ದು ನಿನ್ನ ಜವಬ್ದಾರಿ’ ಅಂತ ಹೇಳಿದ್ಲು. ವಿನಯ್ ಗೆ ಅರ್ಥವಾಗಲಿಲ್ಲ..! ಏನನ್ನು ಒಪ್ಪಿಸೋದು ಅಂತ ಕೇಳಿದ. ಗುಗ್ಗು ನಮ್ಮಿಬ್ಬರ ಪ್ರೀತಿ ವಿಷಯ ಕಣೋ.. ನಮ್ಮ ಅಮ್ಮನಿಗೆ ಹೇಳಿದೆ. ಅಮ್ಮ ಅಪ್ಪನಿಗೆ ಹೇಳಿದ್ರು..! ನನಗಿಂತಲೂ ನಮ್ಮ ಅಪ್ಪ-ಅಮ್ಮನಿಗೆ ಇಷ್ಟವಾಗಿರೋ ನಿನ್ನನ್ನು ನಾನು ಮದುವೆ ಆಗುತ್ತೇನೆಂದಾಗ ಅಪ್ಪ-ಅಮ್ಮ ಬೈಯಲಿಲ್ಲ…! ಅವರಿಗೆ ತುಂಬಾ ಖುಷಿ ಆಯ್ತು. ಅವರೇ ನಿಮ್ಮ ಅಪ್ಪ-ಅಮ್ಮನ ಹತ್ತಿರ ಮಾತಾಡಲು ರೆಡಿ ಇದ್ದಾರೆ ಅಂತ ಹೇಳಿದ್ಲು..!
ವಿನಯ್ ಕಕ್ಕಾಬಿಕ್ಕಿ..! ರೀ, ಏನು..? ನಾನು ನಿಮ್ಮನ್ನು ಪ್ರೀತಿಸುತ್ತೀನಿ ಅಂತ ಹೇಳಿದ್ನಾ..?! ಅಥವಾ ನೀವ್ ಯಾವತ್ತಾದ್ರೂ ನನ್ನ ಪ್ರೀತಿಸ್ತೀನಿ ಅಂತ ಹೇಳಿದ್ರಾ..!? ಏನ್ರೀ ಆಗಿದೆ ನಿಮಗೆ ಅಂತ ಗಾಬರಿ ಗಾಬರಿಯಿಂದಲೇ ಕೇಳಿದ. ಅದಕ್ಕೆ ಅವಳು “ಅಲ್ಲಾ, ವಿನಿ ಐ ಲವ್ ಯು” ಅಂಥ ಹೇಳಿದ್ರೆ ಮಾತ್ರ ಪ್ರೀತಿನಾ..?! ನನಗಂತೂ ನೀನು ಇಷ್ಟವಾಗಿದ್ದೀ, ನಿನ್ನನ್ನು ಪ್ರೀತಿಸದೇ ಇದ್ದಿದ್ದರೆ ನಿನ್ನ ಜೊತೆ ಒಬ್ಬಳೇ ಅಷ್ಟೊಂದು ಸುತ್ತುತ್ತಿದ್ನಾ..? ನೀನು ನನ್ನ ಜೊತೆ ಕ್ಲೋಸ್ ಇಲ್ವಾ..?! ಅಂದಳು. ಅಯ್ಯೋ ರಾಮ, ಅಂಬಿಕಾ ಕ್ಲೋಸ್ ಆಗಿದ್ದೇನೆ ನಿಜ, ಒಬ್ಬ ಫ್ರೆಂಡ್ ಆಗಿ ಅಷ್ಟೇ.. ಅಂತಾನೆ ವಿನಯ್.
“ಓಹೋ, ಹೌದಾ..,ಸರಿ ಒಬ್ಬಳು ಹುಡುಗಿಯಾಗಿ ನಿನ್ನ ಜೊತೆ ಅಷ್ಟೆಲ್ಲಾ ಸುತ್ತಿದ್ದು ಜಸ್ಟ್ ಫ್ರೆಂಡ್ ಆಗಿ ಅಲ್ವೇ ಅಲ್ಲ..! ಒಬ್ಬ ಹುಡುಗನ ಜೊತೆ ಹುಡುಗಿ ಫ್ರೆಂಡ್ ಆಗಿ ಸುತ್ತುತ್ತಾಳೆ, ಸುತ್ತಬಹುದು..! ಆದರೆ ನಿನ್ನ ಜೊತೆ ಸುತ್ತಿದಂಗೆ ಯಾರೂ ಸುತ್ತಲ್ಲ..! ನೀನೇ ಅದನ್ನು ಯೋಚನೆ ಮಾಡು.” ಎಂದು ವಿನಯ್ ಹತ್ತಿರ ಪ್ರೀತಿಯನ್ನು ನಿವೇಧಿಸಿಕೊಂಡಳು.
ಅವಳಿಗೆ ಬೇಜಾರ್ ಮಾಡೋಕೆ ಇಷ್ಟವಿಲ್ಲದ ವಿನಯ್ ` ನಾನೂ ನಿನ್ನ ಪ್ರೀತಿಸುತ್ತಲೇ ಇದ್ದೇನೆ..! ಆದರೆ ನಿಮ್ಮ ಮನೆಯಲ್ಲಿ ಏನು ಅಂದುಕೊಳ್ತರೋ ಅಂತ..! ನಿಮ್ಮ ಅಪ್ಪ ಅಮ್ಮ ಇಟ್ಟ ನಂಬಿಕೆ ಕಳೆದು ಕೊಳ್ತೀನಲ್ಲಾ ಅನ್ನೋ ಭಯವೆಂದ..! ಅಪ್ಪ-ಅಮ್ಮ ಒಪ್ಪಿದ್ದಾರೆ ಕಣೋ.. ಅವರಿಗೂ ನೀನು ಇಷ್ಟವೆಂದು ಅಂಬಿಕಾ ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದ್ಲು..!
ಅಂಬಿಕಾ, ನಾನು ಈಗ ಮದುವೆ ಆಗೋಕೆ ಆಗಲ್ಲ..! ಸಾಲವಿದೆ..! ಕೆಲಸಕ್ಕೆ ಸೇರಿ ವರ್ಷವೂ ಆಗಿಲ್ಲ, ಅಷ್ಟೇ ಅಲ್ಲದೇ ನೀವು ಶ್ರೀಮಂತರು ನಿಮ್ಮಷ್ಟು ಹಣ- ಆಸ್ತಿ ನಮ್ಮ ಬಳಿ ಇಲ್ಲ ಅಂದ..! ಅದಕ್ಕೆ ಅಂಬಿಕಾ, ಆಸ್ತಿ ಯಾಕೋ ಬೇಕು..ನಾನು ಒಬ್ಬಳೇ ಮಗಳು. ನಿಮ್ಮ ಅಪ್ಪ ಅಮ್ಮ.. ನಮ್ಮ ಅಪ್ಪ-ಅಮ್ಮ, ನಾನು-ನೀನು ಎಲ್ಲರೂ ಒಟ್ಟಿಗೇ ಇರಬಹುದು ಕಣೋ ಅಂತಾಳೆ..! ನನಗೆ 2 ದಿನ ಟೈಮ್ ಕೊಡು ಅಂತ ವಿನಯ್ ಕೇಳಿಕೊಂಡಿದ್ದಾನೆ..!
ವಿನಯ್ ಗೆ ಅವಳು ತುಂಬಾ ಇಷ್ಟ..! ಅವಳಿಗೂ ಅಷ್ಟೇ. ಆದರೆ ಅವಳಷ್ಟು ಶ್ರೀಮಂತಿಕೆ ನನಗಿಲ್ಲ ಅನ್ನೋ ಬೇಜಾರು ಇವನಿಗೆ. ಕಷ್ಟಪಟ್ಟು ದುಡಿದು ತನ್ನ ಕಾಲ ಮೇಲೆ ತಾನು ನಿಲ್ಬೇಕು ಅಂತ ಆಸೆ ಅವನಿಗೆ. ಈಗ ಈ ಪ್ರೀತಿ ಹುಟ್ಟಿದೆ..?!
ಅಂದಹಾಗೆ ವಿನಯ್ ನನ್ನ ಆತ್ಮೀಯ ಸ್ನೇಹಿತನ ಸಂಬಧಿಕ ಹಾಗೂ ಸ್ನೇಹಿತ..! ನನ್ನ ಗೆಳೆಯ ವಿನಯ್ ನ ಕಥೆಯನ್ನು ಹೇಳಿದ. ವಿನಯ್ ತೊಳಲಾಟಕ್ಕೆ ಪರಿಹಾರ ನೀಡ್ಬೇಕು..! ನಾನು ನನ್ನ ಗೆಳಯನಿಗೆ ಹೇಳಿಕಳುಹಿಸಿದ್ದೇನೆ ” ನಿನ್ನ ಗೆಳೆಯ ವಿನಯ್ ಗೆ ಅವಳ ಪ್ರೀತಿಯನ್ನು ಒಪ್ಪಿಕೊಳ್ಳೋಕೆ ಹೇಳು”, ಆದರೆ ಅವರ ಆಸ್ತಿಯನ್ನೇ ನೆಚ್ಚಿಕೊಂಡು ಇರಬೇಕಿಲ್ಲ..! ಆ ಆಸ್ತಿ ಹಾಗೇ ಇರಲಿ..! ಇವನ ಪಾಡಿಗೆ ಇವನು ದುಡಿಯಲಿ ಅಂತ..! ಈಗ ಫ್ರೆಂಡ್ಸ್ ವಿನಯ್ ಗೆ ನಿಮ್ಮ ಸಲಹೆ ಸೂಚನೆಗಳನ್ನು `ಕಾಮೆಂಟ್’ನಲ್ಲಿ ತಿಳಿಸಿ..! ವಿನಯ್ ದ್ವಂದ್ವದಲ್ಲಿದ್ದಾನೆ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here