ಆರ್‌ಸಿಬಿ ತಂಡದ ಮೇಲೆ ಯಾವುದೋ ಕಾಲದ ದ್ವೇಷ ತೀರಿಸಿಕೊಳ್ಳುವಂತೆ ಸದಾ ಟೀಕೆಗಳ ಸುರಿಮಳೆಗೈಯುತ್ತಿದ್ದ ಅಂಬಾಟಿ ರಾಯುಡು, ಈಗ ಯು-ಟರ್ನ್ ಹೊಡೆದಿದ್ದಾರೆ. ಬೆಂಗಳೂರು ತಂಡ ಇಂದು ಐಪಿಎಲ್‌ನಲ್ಲಿ ಅಬ್ಬರಿಸ್ತಿದೆ ಅಂದ್ರೆ ಅದಕ್ಕೆ ನಾನೇ ಕಾರಣ ಅನ್ನೋ ರಾಯುಡು ಅವರ ಲೇಟೆಸ್ಟ್ ಸ್ಟೇಟ್‌ಮೆಂಟ್ ಈಗ ಕ್ರಿಕೆಟ್ ವಲಯದಲ್ಲಿ ಹೊಸ ಕಿಚ್ಚು ಹಚ್ಚಿದೆ. ಮ್ಯಾನೇಜ್‌ಮೆಂಟ್‌ಗೆ ಬುದ್ಧಿ ಹೇಳಿದ್ದೇ ನಾನು, ನನ್ನ ಕಟು ಟೀಕೆಗಳಿಂದಲೇ ಅವರ ಕಣ್ಣು ತೆರೆದಿದ್ದು ಅಂತ ರಾಯುಡು ಈಗ ಆರ್‌ಸಿಬಿ ಯಶಸ್ಸಿನ ‘ಕ್ರೆಡಿಟ್’ ಕದಿಯೋಕೆ ಮುಂದಾಗಿದ್ದಾರೆ.
ರಾಯುಡು ಅವರ ವಾದ ಕೇಳಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಈ ಹಿಂದೆ ಆರ್‌ಸಿಬಿ ತಂಡ ಕೇವಲ ಗ್ಲೋಬಲ್ ಸ್ಟಾರ್‌ಗಳ ಮೇಲೆ ಡಿಪೆಂಡ್ ಆಗಿತ್ತು, ಇಂಡಿಯನ್ ಪ್ಲೇಯರ್ಸ್‌ಗಳಿಗೆ ಬೆಲೆ ಕೊಡ್ತಿರಲಿಲ್ಲ ಅಂತ ರಾಯುಡು ಹೀಯಾಳಿಸ್ತಿದ್ರು. ಆದ್ರೆ ಈ ಬಾರಿ ತಂಡ ಮಾಡಿರೋ ಮೂರು ಮೇಜರ್ ಬದಲಾವಣೆಗಳೇ ಗೆಲುವಿಗೆ ಕಾರಣ ಅನ್ನೋದು ಅವರ ಅನಿಸಿಕೆ.
ಮಿಡ್ಲ್ ಆರ್ಡರ್‌ನಲ್ಲಿ ಭಾರತೀಯ ಬ್ಯಾಟರ್‌ಗಳಿಗೆ ಜವಾಬ್ದಾರಿ ಕೊಟ್ಟಿದ್ದು, ಸ್ಥಿರವಾಗಿ ಪಂದ್ಯ ಮುಗಿಸೋ ದೇಶಿ ಫಿನಿಶರ್‌ಗಳನ್ನು ತಂದಿದ್ದು ಮತ್ತು ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಕುಮಾರ್, ಹೇಝಲ್‌ವುಡ್ ಅವರಂತಹ ಘಟಾನುಘಟಿಗಳನ್ನು ಸೇರಿಸಿಕೊಂಡಿದ್ದು ತಂಡಕ್ಕೆ ವರದಾನವಾಗಿದೆ ಅಂತ ರಾಯುಡು ವಿಶ್ಲೇಷಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ರಾಯುಡು, ನಾನು ವರ್ಷಗಳಿಂದ ಮಾಡ್ತಿದ್ದ ಟೀಕೆಗಳು ಬರಿ ದ್ವೇಷಕ್ಕೆ ಅನ್ಕೊಂಡ್ರಾ? ಖಂಡಿತ ಇಲ್ಲ, ಅದರ ಹಿಂದೆ ಪಕ್ಕಾ ಲಾಜಿಕ್ ಇತ್ತು. ನಾನು ಹೇಳಿದ ತಪ್ಪುಗಳನ್ನು ತಿದ್ದಿಕೊಂಡಿದ್ದಕ್ಕೇ ಇಂದು ತಂಡ ಗೆಲ್ತಿದೆ, ಹಾಗಾಗಿ ಈ ಗೆಲುವಿನ ಶ್ರೇಯಸ್ಸು ನನಗೂ ಸಲ್ಲಬೇಕು ಅಂದಿದ್ದಾರೆ. ಅಂದ್ರೆ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ರಾಯುಡು ಅವರ ಮಾತು ಕೇಳಿಯೇ ಟೀಮ್ ರೆಡಿ ಮಾಡಿದೆ ಅನ್ನೋದು ಈ ಮಾಜಿ ಕ್ರಿಕೆಟಿಗನ ಪರೋಕ್ಷ ವಾದ.
ಆದ್ರೆ, ರಾಯುಡು ಅವರ ಈ ‘ಕ್ರೆಡಿಟ್ ರಾಜಕೀಯ’ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ ಕಿಂಚಿತ್ತೂ ಇಷ್ಟವಾಗಿಲ್ಲ. ಯಾವಾಗಲೂ ಕಾಲೆಳೆಯೋಕೆ ಕಾಯ್ತಿದ್ದ ಮನುಷ್ಯನಿಗೆ ಈಗ ನಮ್ಮ ತಂಡ ಗೆಲ್ತಿರೋದು ಸಹಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ರಾಯುಡು ಅವರನ್ನ ತರಾಟೆಗೆ ತಗೊಳ್ತಿದ್ದಾರೆ. ಯಾಕಂದ್ರೆ, ರಾಯುಡು ಮತ್ತು ಆರ್‌ಸಿಬಿ ಅಭಿಮಾನಿಗಳ ನಡುವೆ ಹಳೆಯ ಕೆಂಡದಂತಹ ಇತಿಹಾಸವಿದೆ.
ನಿಮಗೆ ನೆನಪಿರಬಹುದು, ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಗೆದ್ದಾಗ ರಾಯುಡು ಸಖತ್ ಆಗಿ ಲೇವಡಿ ಮಾಡಿದ್ರು. ಒಂದು ಕಪ್ ಗೆಲ್ಲೋಕೆ ನಿಮಗೆ 18 ವರ್ಷ ಬೇಕಾಯ್ತು, ಹಾಗಾದ್ರೆ ಸಿಎಸ್‌ಕೆ ಮಾಡಿರೋ 5 ಟ್ರೋಫಿಗಳ ದಾಖಲೆ ಸರಿಗಟ್ಟೋಕೆ ನಿಮಗೆ ಕನಿಷ್ಠ 72 ವರ್ಷ ಬೇಕು ಅಂತ ಹೀಯಾಳಿಸಿ ಬೆಂಗಳೂರು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ರು. ಅಷ್ಟೇ ಅಲ್ಲ, 2024ರಲ್ಲಿ ಸಿಎಸ್‌ಕೆ ತಂಡವನ್ನ ಹೊರಹಾಕಿ ಆರ್‌ಸಿಬಿ ಸಂಭ್ರಮಿಸಿದ ರೀತಿ ಬಗ್ಗೆಯೂ ಬರಿ ಸಂಭ್ರಮಾಚರಣೆ ಟ್ರೋಫಿ ತಂದುಕೊಡಲ್ಲ ಅಂತ ಟೀಕಿಸಿದ್ರು.
ಈಗ ಅದೇ ಅಭಿಮಾನಿಗಳು ರಾಯುಡು ಅವರನ್ನ ಬೆಂಡೆತ್ತುತ್ತಿದ್ದಾರೆ. ನಿಮ್ಮ ಟೀಕೆಯಿಂದ ತಂಡ ಗೆಲ್ತಿರೋದಲ್ಲ, ಆಟಗಾರರ ಕಠಿಣ ಪರಿಶ್ರಮದಿಂದ ಗೆಲ್ತಿರೋದು. ಈಗ ಗೆಲುವು ಸಿಕ್ಕ ಮೇಲೆ ಆ ಕ್ರೆಡಿಟ್ ಕೂಡ ನಂದೇ ಅಂದ್ರೆ ಹೇಗೆ? ಅಂತ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕಂದ್ರೆ, ಐಪಿಎಲ್ ಮೈದಾನದಲ್ಲಿ ಆಟಗಾರರು ಬೆವರು ಸುರಿಸಿ ಗೆಲುವು ತಂದಿದ್ರೆ, ರಾಯುಡು ಮಾತ್ರ ಹೊರಗೆ ಕುಳಿತು ‘ಕ್ರೆಡಿಟ್’ ಯುದ್ಧ ಸಾರಿದ್ದಾರೆ. ಮ್ಯಾನೇಜ್‌ಮೆಂಟ್ ತಪ್ಪು ತಿದ್ದಿಕೊಂಡಿರೋದು ಸತ್ಯವೇ ಆದ್ರೂ, ಅದು ರಾಯುಡು ಅವರ ಟೀಕೆಯಿಂದಲೇ ಆಗಿದೆ ಅನ್ನೋ ವಾದ ಮಾತ್ರ ಒಂದು ದೊಡ್ಡ ವಿಪರ್ಯಾಸ.



