ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಜೆನ್ ಝೀ ವಿದ್ಯಾರ್ಥಿಗಳ ಜೊತೆಗೂಡಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಗೆ ಬೆದರಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ದೇಶದಲ್ಲಿ ಮತ್ತೊಂದು ಸೋಶಿಯಲ್ ಮೀಡಿಯಾ ಚಳವಳಿ ಶುರುವಾಗಿದೆ. ಈ ಬಾರಿ ವಾಹನ ಸವಾರರು ಮತ್ತು ಸಾರ್ವಜನಿಕರ ಹಕ್ಕುಗಳಿಗಾಗಿ ಅಖಾಡಕ್ಕಿಳಿದಿರುವ ‘E20 ಜನತಾ ಪಾರ್ಟಿ’, ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಇಂಧನ ನೀತಿಯ ವಿರುದ್ಧ ಸಮರ ಸಾರಿದೆ. ನಮಗೆ ಇಂಧನ ಉಚಿತವಾಗಿ ಬೇಡ, ಸಬ್ಸಿಡಿಯೂ ಬೇಡ, ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಗಲೇಬೇಕು ಎಂದು ಆಗ್ರಹಿಸಿರುವ ಈ ಸಂಘಟನೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.
CJP ಮಾದರಿಯಲ್ಲೇ ಅಖಾಡಕ್ಕಿಳಿದ ‘ಏಡಿ ಪಡೆ’: ‘X’ ನಲ್ಲಿ 27,000ಕ್ಕೂ ಹೆಚ್ಚು ಬೆಂಬಲಿಗರು
ಸಿಜೆಪಿ ತನ್ನ ಸಂಕೇತವಾಗಿ ಜಿರಳೆಯನ್ನು ಬಳಸಿಕೊಂಡಿದ್ದರೆ, ಈ ನೂತನ ‘E20 ಜನತಾ ಪಾರ್ಟಿ’ಯು ‘ಏಡಿ’ಯನ್ನು ತನ್ನ ಪಕ್ಷದ ಚಿಹ್ನೆಯನ್ನಾಗಿ ಮಾಡಿಕೊಂಡಿದೆ. ನಾವು ಏಡಿಗಳಂತೆ ಎಲ್ಲೆಡೆ ಹರಡಿ ಅನ್ಯಾಯದ ವಿರುದ್ಧ ಹೋರಾಡುತ್ತೇವೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಖಾತೆ ತೆರೆದಿರುವ ಈ ಗ್ರೂಪ್, ‘ಎಕ್ಸ್’ನಲ್ಲಿ (ಟ್ವೀಟರ್) ಕೇವಲ ಕೆಲವೇ ಗಂಟೆಗಳಲ್ಲಿ 27,000ಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 189,552 ಫಾಲೋವರ್ಸ್‌ಗಳನ್ನು ಹೊಂದಿದೆ. ಈ ಮೂಲಕ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಎಥೆನಾಲ್ ಬೇಡ, ಇನ್ನು ಮೌನ ಬೇಡ ಎಂಬ ಪವರ್‌ಫುಲ್ ಸ್ಲೋಗನ್‌ನೊಂದಿಗೆ ಸಾರ್ವಜನಿಕರ ಗಮನ ಸೆಳೆಯುತ್ತಿರುವ ಈ ಡಿಜಿಟಲ್ ಚಳವಳಿ, ಈಗ ರಸ್ತೆಗಿಳಿದು ಹೋರಾಟ ನಡೆಸಲು ಸನ್ನದ್ಧವಾಗಿದೆ.
ಸಂಸತ್ತಿಗೆ ಮುತ್ತಿಗೆ ಎಚ್ಚರಿಕೆ: ದೆಹಲಿ ಟ್ಯಾಕ್ಸಿ ಯೂನಿಯನ್‌ಗಳ ಸಂಪೂರ್ಣ ಬೆಂಬಲ
ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದ್ದ ಈ ಚಳವಳಿಗೆ ಈಗ ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ವಾಹನ ಸಂಘಟನೆಗಳು ಸಾಥ್ ನೀಡಿವೆ. ಶೇ. 20 ಎಥೆನಾಲ್ ಮಿಶ್ರಿತ ಇಂಧನದಿಂದ (E20) ವಾಹನಗಳ ಎಂಜಿನ್ ಸಂಪೂರ್ಣ ಹಾಳಾಗುತ್ತಿದ್ದು, ದಿನನಿತ್ಯ ದುರಸ್ತಿ ವೆಚ್ಚ ಭರಿಸಲಾಗದೆ ಕಂಗಾಲಾಗಿರುವ ಚಾಲಕರು ಬೀದಿಗಿಳಿಯಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬರುವ ಆಗಸ್ಟ್ 4 ರಂದು ದೇಶದ ರಾಜಧಾನಿ ದೆಹಲಿಯಲ್ಲಿ ಸಂಸತ್ತಿನ ಕಡೆಗೆ ಬೃಹತ್ ಮೆರವಣಿಗೆ ನಡೆಸುವುದಾಗಿ E20 ಜನತಾ ಪಾರ್ಟಿ ಹಾಗೂ ಚಾಲಕರ ಒಕ್ಕೂಟಗಳು ಜಂಟಿಯಾಗಿ ಪ್ರಕಟಿಸಿವೆ.
ಮೈಲೇಜ್ ಡೌನ್, ಎಂಜಿನ್ ಬಂದ್: ವಾಹನ ಸವಾರರ ಆಕ್ರೋಶಕ್ಕೆ ಕಾರಣವೇನು ?
ಭಾರತ ಸರ್ಕಾರವು ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 2025-26ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ.20 ಎಥೆನಾಲ್ ಮಿಶ್ರಣ ಮಾಡುವ (E20) ಗುರಿ ಹೊಂದಿತ್ತು. ಆದರೆ, ದೇಶದಲ್ಲಿರುವ ಶೇಕಡಾ 80ಕ್ಕೂ ಹೆಚ್ಚು ಹಳೆಯ ವಾಹನಗಳ ಎಂಜಿನ್‌ಗಳು ಈ ಇಂಧನಕ್ಕೆ ಬೆಂಬಲ ನೀಡುತ್ತಿಲ್ಲ. ಇ20 ಪೆಟ್ರೋಲ್ ಬಳಸುವುದರಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಬೀಳುತ್ತಿದ್ದು, ಎಂಜಿನ್ ವೈಫಲ್ಯ ಉಂಟಾಗುತ್ತಿದೆ ಎಂದು ವಾಹನ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಆಟೋಮೊಬೈಲ್ ಕಂಪನಿಗಳು ಸಂಪೂರ್ಣವಾಗಿ ಇ-20 ಎಂಜಿನ್ ನವೀಕರಿಸುವ ಮುನ್ನವೇ ಈ ನೀತಿ ಹೇರಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾನ್ಯ ಪೆಟ್ರೋಲ್ 102 ರೂ, ಪ್ಯೂರ್ ಪೆಟ್ರೋಲ್ 169 ರೂ: ಹಗಲು ದರೋಡೆ ಆರೋಪ!
ಪ್ರಸ್ತುತ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಾಮಾನ್ಯ E20 ಪೆಟ್ರೋಲ್ ಲೀಟರ್‌ಗೆ ಸುಮಾರು 102.12 ರೂ. ಇದೆ. ಆದರೆ, ಎಥೆನಾಲ್-ಮುಕ್ತವಾಗಿರುವ ಶೇ.100 ಶುದ್ಧ (100-ಆಕ್ಟೇನ್ ಪ್ರೀಮಿಯಂ) ಪೆಟ್ರೋಲ್ ಲೀಟರ್‌ಗೆ ಭರ್ತಿ 169 ರೂಪಾಯಿ ಇದೆ! “ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಶುದ್ಧ ಪೆಟ್ರೋಲ್ ಸಿಗದಂತೆ ಮಾಡಿ, ಬಲವಂತವಾಗಿ E20 ಇಂಧನವನ್ನು ತಲೆಗೆ ಕಟ್ಟಲಾಗುತ್ತಿದೆ. ಪ್ರತಿಯೊಂದು ಪೆಟ್ರೋಲ್ ಬಂಕ್‌ಗಳಲ್ಲೂ ಶೇ. 100 ಶುದ್ಧ ಪೆಟ್ರೋಲ್ ಲಭ್ಯವಿರಬೇಕು ಮತ್ತು ಇಂಧನದ ಗುಣಮಟ್ಟ ಹಾಗೂ ಮೈಲೇಜ್ ಮೇಲಾಗುವ ಪರಿಣಾಮಗಳ ಕುರಿತು ಸ್ವತಂತ್ರ ತಜ್ಞರ ವರದಿಯನ್ನು ಪ್ರಕಟಿಸಬೇಕು” ಎಂದು ಪಾರ್ಟಿ ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ಸ್ಪಷ್ಟನೆ: ವದಂತಿ ನಂಬಬೇಡಿ ಎಂದ ಸಚಿವಾಲಯ!
ಈ ಜನಾಕ್ರೋಶ ಹಾಗೂ ಆನ್‌ಲೈನ್ ಅಭಿಯಾನದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, E20 ಪೆಟ್ರೋಲ್ ವಾಹನಗಳ ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಮರ್ಥಿಸಿಕೊಂಡಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, “ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಹಾಳಾಗುತ್ತಿದೆ ಎಂಬ ಕುರಿತು ಸರ್ಕಾರಕ್ಕೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ. ವಾಹನ ತಯಾರಕರು ಹಾಗೂ ತಜ್ಞರ ಜೊತೆ ಚರ್ಚಿಸಿಯೇ ಈ ನೀತಿ ತರಲಾಗಿದೆ. ಎಂಜಿನ್ ಹಾಳಾಗುತ್ತದೆ ಎಂಬುದು ಆಧಾರರಹಿತ ವದಂತಿ” ಎಂದು ಹೇಳಿದ್ದಾರೆ.
ಬಿಸಿಬಿಸಿ ಕಾಯುತ್ತಿರುವ ಇಂಧನ ಸಮರ: ಮುಂದೇನು?
ಒಂದೆಡೆ NEET ವಿವಾದದಿಂದ ಶಿಕ್ಷಣ ಸಚಿವರ ರಾಜೀನಾಮೆ ಪಡೆದು ಬೀಗುತ್ತಿರುವ CJP ಶೈಲಿಯಲ್ಲೇ E20 ಜನತಾ ಪಾರ್ಟಿ ಕೂಡ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ತೀವ್ರ ಸಂಚಲನ ಮೂಡಿಸುತ್ತಿದೆ. ಸರ್ಕಾರ ಇದನ್ನು “ಸುಳ್ಳು ಪ್ರಚಾರ” ಎಂದು ತಳ್ಳಿಹಾಕುತ್ತಿದ್ದರೂ, ವಾಹನ ಸವಾರರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್ 4ರ ಸಂಸತ್ ಚಲೋ ಮೆರವಣಿಗೆಯ ಬಳಿಕ ಈ ಇಂಧನ ನೀತಿ ಸಮರ ಕೇಂದ್ರ ಸರ್ಕಾರಕ್ಕೆ ಎಷ್ಟು ಮಟ್ಟಿನ ಬಿಸಿ ಮುಟ್ಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.



