No menu items!
30.6 C
Munich
Wednesday, August 19, 2026

ಬಸ್‌ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ ; ನಾನು ಪೊಲೀಸ್ ಎಂದರೂ ಬಿಡದೆ ಬಟ್ಟೆ ಹರಿದು ಹಲ್ಲೆ ಮಾಡಿದ ಗುಂಪು

Must read

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬರಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇಷ್ಟೇ ಅಲ್ಲದೇ ಧರ್ಮದೇಟು ಕೂಡ ನೀಡಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಹಲ್ಲೆಗೊಳಗಾಗಿದ್ದು, ಗಂಗಮ್ಮನ ಗುಡಿ ಸರ್ಕಲ್ ಬಳಿ ಈ ಘಟನೆ ನಡೆದಿದೆ.

ಬಸ್‌ನಲ್ಲಿ ಶುರುವಾಯ್ತು ಕಿರಿಕ್: ಮಾತು ಬೆಳೆದು ಮಾತಿನ ಚಕಮಕಿ

ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಅವರು ಜಾಲಹಳ್ಳಿಗೆ ತೆರಳಲು ಬಿಎಂ‌ಟಿ‌ಸಿ ಬಸ್ ಹತ್ತಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ಮಹಿಳೆ ಬಸ್‌ನಲ್ಲೇ ಕಾನ್‌ಸ್ಟೇಬಲ್ ಜೊತೆ ಗಲಾಟೆ ತೆಗೆದಿದ್ದಾರೆ. ನೋಡನೋಡುತ್ತಿದ್ದಂತೆಯೇ ಇಬ್ಬರ ನಡುವಿನ ಮಾತಿಗೆ ಮಾತು ಬೆಳೆದು ರಂಪಾಟ ತಾರಕಕ್ಕೇರಿದೆ.

ಸಂಬಂಧಿಕರಿಗೆ ಕಾಲ್ ಮಾಡಿ ಸ್ಪಾಟ್‌ಗೆ ಕರೆಸಿಕೊಂಡ ಮಹಿಳೆ

ಬಸ್‌ನಲ್ಲಿ ತನಗೆ ಕಿರುಕುಳ ನೀಡಿದ ಪೇದೆಯನ್ನು ಬಿಡಬಾರದು ಎಂದು ನಿರ್ಧರಿಸಿದ ಮಹಿಳೆ, ತಕ್ಷಣವೇ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಅಲ್ಲದೆ ಗಂಗಮ್ಮನ ಗುಡಿ ಸರ್ಕಲ್ ಬಳಿಗೆ ಬಂದು ಕಾಯುವಂತೆ ತಿಳಿಸಿದ್ದಾಳೆ. ಬಸ್ ಸರ್ಕಲ್ ತಲುಪುತ್ತಿದ್ದಂತೆಯೇ ಮಹಿಳೆಯ ಸಂಬಂಧಿಕರು ಹಾಗೂ ಸ್ಥಳೀಯ ಯುವಕರ ಗುಂಪು ಬಸ್‌ನಲ್ಲಿದ್ದ ಮಂಜುನಾಥ್ ಅವರನ್ನು ಸುತ್ತುವರಿದಿದೆ.

‘ನಾನು ಪೊಲೀಸ್ ಎಂದರೂ ಬಿಡಲಿಲ್ಲ’: ಬಟ್ಟೆ ಹರಿದು ರಸ್ತೆಯಲ್ಲೇ ಹಲ್ಲೆ

ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆಯೇ ಕೋಪೋದ್ರಿಕ್ತ ಯುವಕರ ಗುಂಪು ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಮೇಲೆ ಮುಗಿಬಿದ್ದಿದೆ. ನಾನು ಪೊಲೀಸ್, ನಾನು ಪೊಲೀಸ್ ಎಂದು ಮಂಜುನಾಥ್ ಎಷ್ಟೇ ಕೂಗಿ ಹೇಳಿದರೂ, ಯಾವುದನ್ನೂ ಕಿವಿಗೊಡದ ಯುವಕರು ಅವರ ಬಟ್ಟೆ ಹರಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸಾರ್ವಜನಿಕರ ಕಣ್ಣೆದುರಲ್ಲೇ ರಸ್ತೆಯಲ್ಲೇ ಈ ರಂಪಾಟ ನಡೆದಿದೆ.

ಮುಖ ಹಾಗೂ ಮೈಮೇಲೆ ತೀವ್ರ ಗಾಯ: ಖಾಸಗಿ ಆಸ್ಪತ್ರೆಗೆ ದಾಖಲು

ಗುಂಪಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಕಾನ್‌ಸ್ಟೇಬಲ್ ಮಂಜುನಾಥ್ ಅವರ ಮುಖ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪೇದೆಯನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

ಘಟನೆ ಬೆನ್ನಲ್ಲೇ ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಮೇಲೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರೆ, ಇನ್ನೊಂದೆಡೆ ಬಟ್ಟೆ ಹರಿದು, ಕರ್ತವ್ಯಕ್ಕೆ ಅಡ್ಡಿಪಡಿಸಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಪ್ರತಿದೂರು ನೀಡಿದ್ದಾರೆ. ಪೊಲೀಸರು ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರು ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಕಿಗೆ ಇಲ್ಲವೇ ರಕ್ಷಣೆ ?

ಸಿಲಿಕಾನ್ ಸಿಟಿಯಲ್ಲಿ ಖಾಕಿ ಸಮವಸ್ತ್ರದಲ್ಲಿದ್ದ ಪೇದೆಯ ಮೇಲೆಯೇ ಈ ರೀತಿ ಸಾರ್ವಜನಿಕವಾಗಿ ಹಲ್ಲೆ ನಡೆದಿರುವುದು ಹಲವು ಅನುಮಾನ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾನ್‌ಸ್ಟೇಬಲ್ ನಿಜವಾಗಿಯೂ ಅಸಭ್ಯವಾಗಿ ವರ್ತಿಸಿದ್ದರೇ ಅಥವಾ ಯಾವುದಾದರೂ ಸಣ್ಣ ಗೊಂದಲ ದೊಡ್ಡ ರಂಪಾಟಕ್ಕೆ ಕಾರಣವಾಯಿತೇ ಎಂಬುದನ್ನು ಪೊಲೀಸರ ತನಿಖೆಯಷ್ಟೇ ಸ್ಪಷ್ಟಪಡಿಸಬೇಕಿದೆ. ಸದ್ಯ ಈ ಧರ್ಮದೇಟಿನ ವೀಡಿಯೋ ಹಾಗೂ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

- Advertisement -spot_img

More articles

- Advertisement -spot_img

Latest article